ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S L Bhyrappa: ಸಾಹಿತಿ ಎಸ್‌.ಎಲ್‌.ಭೈರಪ್ಪ ನಿಧನ; ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

S L Bhyrappa: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಎಸ್‌.ಎಲ್‌.ಭೈರಪ್ಪ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ: ಸಿಎಂ ಸಂತಾಪ

-

Prabhakara R Prabhakara R Sep 24, 2025 3:35 PM

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ ಎಸ್‌.ಎಲ್‌. ಭೈರಪ್ಪ (94) (S L Bhyrappa) ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಎಸ್‌.ಎಲ್‌. ಭೈರಪ್ಪ ಬೆಂಗಳೂರಿನ ಆರ್‌ಆರ್‌ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಭೈರಪ್ಪ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ: ಸಿಎಂ

ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ‌ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.



ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸಂತಾಪ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪ್ರತಿಕ್ರಿಯಿಸಿ, ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳ‌ ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ, ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.



ಇಹದ 'ಯಾನ' ಅಂತ್ಯ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ಎಸ್‌.ಎಲ್‌.ಭೈರಪ್ಪ ಅವರ ಇಹದ 'ಯಾನ' ಅಂತ್ಯವಾಗಿದೆ. ಕನ್ನಡದ ಶ್ರೇಷ್ಠ ಕಾದಂಬರಿಕಾರ, ಪದ್ಮಭೂಷಣ ಪುರಸ್ಕೃತ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಡಾ. ಎಸ್.ಎಲ್.‌ ಭೈರಪ್ಪನವರು ಇಂದು ವಿಧಿವಶರಾಗಿದ್ದು ಬಹಳ ನೋವು ತಂದಿದೆ. ಸಾಹಿತ್ಯಾಭಿಮಾನಿಗಳು ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.



ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ 'ಅಮರ ಪ್ರತಿಭೆ': ಎಚ್‌.ಡಿ.ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, 'ಪರ್ವ' ಮತ್ತು 'ಉತ್ತರಕಾಂಡ' ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಸರಸ್ವತಿ ಸಮ್ಮಾನ ಪುರಸ್ಕೃತರು, ಪದ್ಮಭೂಷಣ ಎಸ್.ಎಲ್. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಶ್ರೀ ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ 'ಅಮರ ಪ್ರತಿಭೆ' ಎಂಬ ಹೆಮ್ಮೆ ನನ್ನದು. ಅವರ ಅಗಲಿಕೆಯಿಂದ ಬಹುದೊಡ್ಡ ಶೂನ್ಯ ಸೃಷ್ಟಿಯಾಗಿದೆ.

ಶ್ರೀಯುತರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.



ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ: ಯಡಿಯೂರಪ್ಪ

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ 'ಸರಸ್ವತಿ ಸಮ್ಮಾನ್' ಗೌರವವನ್ನು ತಂದುಕೊಟ್ಟ, ಪದ್ಮಭೂಷಣ ಡಾ ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ, ಆ ಹಿರಿಯ ಸಾಹಿತಿಯನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ, ಒಬ್ಬ ದಿಗ್ಗಜ ಸಾಹಿತಿಯನ್ನು, ಸಾಧಕ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. ಆ ದಿವ್ಯ, ಸಾರಸ್ವತ ಚೇತನಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಡಾ.ಭೈರಪ್ಪನವರು ತಮ್ಮ ಅಗಾಧ ಪಾಂಡಿತ್ಯಪೂರ್ಣ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಅಪೂರ್ವ ಕೃತಿಗಳನ್ನು ರಚಿಸಿ, ನಾಡಿನ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಂಶವೃಕ್ಷ, ಪರ್ವ, ಸಾರ್ಥ, ಆವರಣದಂತಹ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನೇ ನೀಡಿವೆ. ಅಗಲಿದ ಮಹಾನ್ ಚೇತನಕ್ಕೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಾ, ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ಆ ಮೇರು ವ್ಯಕ್ತಿತ್ವದ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.



ಸುದ್ದಿ ತಿಳಿದು ಮನಸ್ಸು ಭಾರವಾಗಿದೆ: ವಿ.ಸೋಮಣ್ಣ

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪ್ರತಿಕ್ರಿಯಿಸಿ, ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು, ಪದ್ಮವಿಭೂಷಣ ಪುರಸ್ಕೃತ, ಸರಸ್ವತಿ ಸಮ್ಮಾನ್ ಡಾ. ಎಸ್.ಎಲ್ ಭೈರಪ್ಪ (94) ಅವರು ಧೈವಾಧೀನರಾದರು ಎಂಬ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ. ಶ್ರೀಯುತರು ತಮ್ಮ ಕೊನೆಯ ದಿನಗಳವರೆಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಅವರು ಬರೆದ ವಂಶವೃಕ್ಷ, ಗೃಹಭಂಗ, ಆವರಣ, ನಾಯಿ ನೆರಳು, ಸಾಕ್ಷಿ, ಅನ್ವೇಷಣೆ ಸೇರಿದಂತೆ ಹತ್ತಾರು ಕಾದಂಬರಿಗಳು ಈಗಲೂ ಜನಪ್ರಿಯವಾಗಿದ್ದು ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಿವೆ.

2019ರಲ್ಲಿ ನಾನು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವೇಳೆ ಮೈಸೂರು ದಸರಾವನ್ನು ಶ್ರೀಯುತರಿಂದ ಉದ್ಘಾಟಿಸುವ ಸೌಭಾಗ್ಯ ನನ್ನದಾಗಿತ್ತು. ಇವರ ನಿಧನದೊಂದಿಗೆ ಕನ್ನಡ ಸಾರಸ್ವತ ಲೋಕ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬವರ್ಗ, ಶಿಷ್ಯವರ್ಗ ಹಾಗೂ ಅಪಾರ ಓದುಗ ಬಂಧುಗಳಲ್ಲಿ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ | SL Bhairappa: ಸಾಹಿತ್ಯ ಕ್ಷೇತ್ರ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡಿದೆ; ಭೈರಪ್ಪಗೆ ಸಂತಾಪ ಸೂಚಿಸಿದ ಮೋದಿ