"ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ": ಸಿದ್ದರಾಮಯ್ಯ ಕುರಿತು ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್
ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದು, ಶುಕ್ರವಾರ ರಾಜ್ಯಪಾಲ ಥಾವರ್ ಗೆಹ್ಲೋಟ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿಯನ್ನಾಗಿ ಡಿಕೆ ಶಿವಕುಮಾರ್ ಅವರನ್ನು ಘೋಷಿಸಲಾಗಿದ್ದು, ಅಧಿಕೃತ ಹೇಳಿಕೆಯಷ್ಟೇ ಬಾಕಿಯಿದೆ. ಇದೀಗ ಎಕ್ಸ್‌ನಲ್ಲಿ ಡಿಕೆ ಶಿವಕುಮಾರ್ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸಲ್ಲಿಸಿದ್ದು, ಶುಕ್ರವಾರ ರಾಜ್ಯಪಾಲ ಥಾವರ್ ಗೆಹ್ಲೋಟ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿಯನ್ನಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಘೋಷಿಸಲಾಗಿದ್ದು, ಅಧಿಕೃತ ಹೇಳಿಕೆಯಷ್ಟೇ ಬಾಕಿಯಿದೆ. ಸದ್ಯ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತಲುಪಿದ್ದು ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಳ್ಳಲಿರುವ ಡಿಕೆ ಶಿವಕುಮಾರ್ ಎಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಕುರಿತು ಪೋಸ್ಟ್ ಒಂದನ್ನು ಮಾಡಿದ್ದಾರೆ.
ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಅವರು, ಭಾರತೀಯ ರಾಜಕಾರಣದ ಧೀಮಂತ ನಾಯಕ.
God does not give boons or curses. He only gives opportunities. What truly matters is what we make of those opportunities.
— DK Shivakumar (@DKShivakumar) May 29, 2026
Shri Siddaramaiah avaru’s life is one of the finest reflections of this thought. From a humble village in Mysuru to leading Karnataka as Chief Minister, his… https://t.co/cWZy9eQ48o
ಜನಪರ ಯೋಜನೆಗಳಿಂದ ಹಿಡಿದು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಸುಮಾರು ಐವತ್ತು ವರ್ಷಗಳ ಅವರ ಅಗಾಧ ರಾಜಕೀಯ ಅನುಭವ, ಸಾಮಾಜಿಕ ಕಳಕಳಿ ಮತ್ತು ಜನಪರ ಯೋಜನೆಗಳು ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ.
ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಯಾವಾಗ? ಯಾರೆಲ್ಲ ಭಾಗಿ?
ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ ಎಂದು ಕರೆ ನೀಡಿದ್ದಾರೆ.