ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಬೆಂಗಳೂರು ವಿಮಾನ ನಿಲ್ದಾಣದ ಸಂಸ್ಥೆಯ ಎಚ್ಆರ್ ಮ್ಯಾನೇಜರ್ ವಿರುದ್ಧ ಎಫ್ಐಆರ್
female employee assaulted: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಮತ್ತು ಪಾನೀಯ ಸೇವಾ ಸಂಸ್ಥೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರ ವಿರುದ್ಧ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಅ.12: ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರು ವಿಮಾನ ನಿಲ್ದಾಣದ ಸಂಸ್ಥೆಯ ಎಚ್ಆರ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempe Gowda International Airport) ಕಾರ್ಯನಿರ್ವಹಿಸುತ್ತಿರುವ ಆಹಾರ ಮತ್ತು ಪಾನೀಯ ಸೇವಾ ಸಂಸ್ಥೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರ (HR manager) ವಿರುದ್ಧ 26 ವರ್ಷದ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಈ ವರ್ಷದ ಮೇ ತಿಂಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕಂಪನಿಯ ಗ್ರಾಹಕ ಸೇವಾ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದ್ದರು. ಮಾನವ ಸಂಪನ್ಮೂಲ (ಎಚ್‌ಆರ್) ವ್ಯವಸ್ಥಾಪಕರು ಪದೇಪದೇ ತನ್ನ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಇತರರೊಂದಿಗೆ ಬೆರೆಯುವುದನ್ನು ನಿರ್ಬಂಧಿಸುತ್ತಿದ್ದರು ಮತ್ತು ತನ್ನ ಖಾಸಗಿತನಕ್ಕೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಎಚ್ಆರ್ ತನ್ನ ಮೊಬೈಲ್ ಫೋನ್ ತೆಗೆದುಕೊಂಡು ಪರಿಶೀಲಿಸುತ್ತಿದ್ದ. ಇತರರೊಂದಿಗೆ ಮಾತನಾಡದಂತೆ ತಡೆಯುತ್ತಿದ್ದ. ಅಲ್ಲದೆ ತನ್ನ ಎದೆಯ ಮೇಲಿನ ಹಚ್ಚೆಯನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಮಾನವ ಸಂಪನ್ಮೂಲ ವ್ಯವಸ್ಥಾಪಕರು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ತನ್ನ ಗೌಪ್ಯತೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸೆಪ್ಟೆಂಬರ್ 24 ರಿಂದ ಅವರು ಆರೋಪಿಸಿದ್ದಾರೆ.
KIA: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿ ಫಿಲ್ಟರ್ ಕಾಫಿ
ಸೆಪ್ಟೆಂಬರ್ 30ರಂದು, ಆರೋಪಿಯು ಮಹಿಳೆಯನ್ನು ಕೆಲಸದ ಸ್ಥಳದಲ್ಲಿರುವ ಕೊಠಡಿಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಎಚ್‌ಆರ್ ವ್ಯವಸ್ಥಾಪಕನು ತನ್ನ ಬಟ್ಟೆಗಳನ್ನು ಬಿಚ್ಚಿ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದಾನೆ. ಅಲ್ಲದೆ, ಮಹಿಳೆಯೂ ಅದೇ ರೀತಿ ಮಾಡುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೂಡಲೇ ತಾನು ಕೊಠಡಿಯಿಂದ ಹೊರಬಂದಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ನಡೆದ ಘಟನೆಯ ಬಗ್ಗೆ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿ, ಅವರ ಸಲಹೆ ಕೇಳಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ನಂತರ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದರು. ಆಕೆಯ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 78(2) ಮತ್ತು 79 ರ ಅಡಿಯಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಚ್ಆರ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.