ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್‌, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಮೈತ್ರಿಕೂಟದ ಮೆರವಣಿಗೆ: ಪೊಲೀಸರಿಂದ ತಡೆ

INDIA Bloc March to Supreme Court: ಸುಪ್ರೀಂ ಕೋರ್ಟ್‌ಗೆ ರಾಹುಲ್, ಪ್ರಿಯಾಂಕಾ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಇಂಡಿಯಾ ವಿರೋಧ ಪಕ್ಷಗಳ ಮೈತ್ರಿಕೂಟದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವಿರೋಧ ಪಕ್ಷಗಳ ನಾಯಕರು ಕನ್ನಾಟ್ ಪ್ಲೇಸ್‌–ಬರಾಖಂಬಾ ರಸ್ತೆ ಜಂಕ್ಷನ್‌ ಬಳಿ ಜಮಾಯಿಸಿದ್ದರು.

ಸುಪ್ರೀಂನತ್ತ ಇಂಡಿಯಾ ಮೈತ್ರಿಕೂಟದ ಮೆರವಣಿಗೆ: ಪೊಲೀಸರಿಂದ ತಡೆ

ರಾಹುಲ್‌, ಪ್ರಿಯಾಂಕಾ ಗಾಂಧಿ -

Priyanka P
Priyanka P Oct 12, 2026 6:28 PM

ನವದೆಹಲಿ, ಅ.12: ಸುಪ್ರೀಂ ಕೋರ್ಟ್‌ಗೆ ರಾಹುಲ್ (Rahul Gandhi), ಪ್ರಿಯಾಂಕಾ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರ ವಿರುದ್ಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್‌ನತ್ತ ಪಾದಯಾತ್ರೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ, ಸೋಮವಾರ (ಅ.12) ದೆಹಲಿಯ ಕೇಂದ್ರ ಭಾಗದಲ್ಲಿ ಸಾವಿರಾರು ಜನರು ಜಮಾಯಿಸಿದರು. ಇಂಡಿಯಾ ಮೈತ್ರಿಕೂಟದ ನಾಯಕರು ಮೆರವಣಿಗೆ ನಡೆಸುತ್ತಿದ್ದಂತೆಯೇ, ಮತ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಅವರ ಕಾನೂನು ತಂಡವು ಅರ್ಜಿ ಸಲ್ಲಿಸಿತು.

ಕನ್ನಾಟ್ ಪ್ಲೇಸ್‌ನಿಂದ ಮಂಡಿ ಹೌಸ್‌ವರೆಗಿನ ರಸ್ತೆಯು ಪ್ರತಿಭಟನಾಕಾರರಿಂದ ತುಂಬಿಹೋಗಿತ್ತು. ಇದೇ ವೇಳೆ, ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇಂಡಿಯಾ ವಿರೋಧ ಪಕ್ಷಗಳ ಮೈತ್ರಿಕೂಟದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವಿರೋಧ ಪಕ್ಷಗಳ ನಾಯಕರು ಕನ್ನಾಟ್ ಪ್ಲೇಸ್‌–ಬರಾಖಂಬಾ ರಸ್ತೆ ಜಂಕ್ಷನ್‌ ಬಳಿ ಜಮಾಯಿಸಿದ್ದರು.

ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಎಸ್‌ಎ ಮುಖ್ಯಸ್ಥೆ ನೇಹಾ ಬೋರಾ ಅವರೊಂದಿಗೆ ಮೆರವಣಿಗೆಯ ನೇತೃತ್ವ ವಹಿಸಿ ಸುಪ್ರೀಂ ಕೋರ್ಟ್‌ನತ್ತ ಸಾಗಿದರು. ಅವರ ಸುತ್ತ ಇಂಡಿಯಾ ಮೈತ್ರಿಕೂಟದ ಸಾವಿರಾರು ಬೆಂಬಲಿಗರು ಮತ್ತು ನಾಯಕರು ಇದ್ದರು.

ಹುದ್ದೆ ಬಿಡುವವರೆಗೂ ನಿದ್ದೆ ಮಾಡದಂತೆ ಮಾಡುತ್ತೇವೆ: ಜ್ಞಾನೇಶ್ ಕುಮಾರ್‌ಗೆ ರಾಹುಲ್ ಗಾಂಧಿ ಎಚ್ಚರಿಕೆ

ಸ್ವಲ್ಪ ದೂರ ಮೆರವಣಿಗೆ ಸಾಗಿದ ಬಳಿಕ ಪೊಲೀಸರು ವಿರೋಧ ಪಕ್ಷಗಳ ನಾಯಕರನ್ನು ತಡೆದರು. ರಾಹುಲ್ ಗಾಂಧಿ ಟ್ರಕ್‌ವೊಂದರ ಮೇಲೆ ನಿಂತಿರುವ ದೃಶ್ಯ ಕಂಡುಬಂತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಕೂಡ ಟ್ರಕ್‌ ಏರಿದರು.

ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಅಭಿಯಾನ ಮತ್ತಷ್ಟು ತೀವ್ರಗೊಂಡಿರುವುದಕ್ಕೆ ಈ ಪ್ರತಿಭಟನೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಈ ಮುನ್ನ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತಮ್ಮ ಸಮಸ್ಯೆಯನ್ನು ತಿಳಿಸಿದ್ದರು. ಈಗ ಅದರ ಮುಂದಿನ ಹಂತವಾಗಿ, ಸೋಮವಾರ (ಅ.12) ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳಿವೆ.

ಇಂದು (ಸೋಮವಾರ, ಅ.12) ಬೆಳಗ್ಗೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗದ ನಾಯಕತ್ವ ಬದಲಾಗುವವರೆಗೆ, ಸಂವಿಧಾನವನ್ನು ಎತ್ತಿಹಿಡಿಯುವವರೆಗೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವವರೆಗೆ ವಿರೋಧ ಪಕ್ಷದ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

“ನಾವು ಭಾರತದ ಮುಖ್ಯ ನ್ಯಾಯಮೂರ್ತಿಗೆ (ಸಿಜೆಐ) ಪತ್ರ ಬರೆದಿದ್ದೆವು. ಅರ್ಜಿ ಸಲ್ಲಿಸುವಂತೆ ಅವರು ನಮಗೆ ಸೂಚಿಸಿದರು. ಇದೀಗ ಇಂಡಿಯಾ ಮೈತ್ರಿಕೂಟದ ನಾಯಕರು ಮತ ಕಳವು ವಿರುದ್ಧ ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆ ನಡೆಸಿ, ಅರ್ಜಿ ಸಲ್ಲಿಸಲಿದ್ದಾರೆ” ಎಂದು ಅವರು ಹೇಳಿದರು. ನಾಗರಿಕರು ಮೆರವಣಿಗೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಮೂಲಕ ಅಥವಾ ತಾವು ಎಲ್ಲಿದ್ದರೂ ಅಲ್ಲಿಂದಲೇ ಬೆಂಬಲ ವ್ಯಕ್ತಪಡಿಸುವ ಮೂಲಕ ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.