S Suresh Kumar: ವೋಟ್ ಚೋರಿ ಕಲ್ಪನೆಯ ಜನಕ ಯಾರು?: ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರಶ್ನೆ
S Suresh Kumar Slams Congress Party: ಗೊಬೆಲ್ಸ್ ವಂಶದವರು ಭಾರತದಲ್ಲಿ ಇದ್ದರೆ ಅದು ಕಾಂಗ್ರೆಸ್ಸಿನಲ್ಲಿದ್ದಾರೆ. ಹಿಂದೆ ನಮ್ಮ ಪಕ್ಷದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಶೇ. 40 ಕಮಿಷನ್ ಸರ್ಕಾರ ಎಂದು ಹೇಳುತ್ತ ಬಂದಿದ್ದರು. ಈ ಸರ್ಕಾರ ಬಂದ ಬಳಿಕ ನಾಗಮೋಹನ್ ದಾಸ್ ಆಯೋಗವನ್ನೂ ರಚಿಸಿದರು. ಈಗ ನನಗೆ ಗೊತ್ತಿರುವಂತೆ ಆ ಆಯೋಗ ಮುಂದುವರಿಯುತ್ತಿಲ್ಲ. ಪೇ ಸಿಎಂ ಎಂದು ಪೋಸ್ಟರ್ ಅಂಟಿಸಿದರು. ಅದರ ಮುಂದುವರಿದ ಭಾಗವೇ ಮತಗಳ್ಳತನದ ಅಪಪ್ರಚಾರ ಎಂದು ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್. -
ಬೆಂಗಳೂರು, ನ. 8: ವೋಟ್ ಚೋರಿ (Vote Theft) ಪರಿಕಲ್ಪನೆಯ ಜನಕ ಯಾರು ಎಂದು ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ (S Suresh Kumar) ಪ್ರಶ್ನಿಸಿದ್ದಾರೆ. ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗಾಂಧೀಜಿ ಅವರ ಕೆಟ್ಟದ್ದನ್ನು ನೋಡದ, ಕೆಟ್ಟದ್ದನ್ನು ಕೇಳಿಸಿಕೊಳ್ಳದ ಹಾಗೂ ಕೆಟ್ಟದ್ದನ್ನು ಮಾತನಾಡದ ಕೋತಿಗಳ ಕುರಿತು ಪ್ರಸ್ತಾಪಿಸಿದರು. ಒಳ್ಳೆಯದನ್ನು ನೋಡುವುದಿಲ್ಲ, ಒಳ್ಳೆಯದನ್ನು ಕೇಳುವುದಿಲ್ಲ, ಒಳ್ಳೆಯದನ್ನು ಮಾತನಾಡುವುದಿಲ್ಲ, ಇದು ರಾಹುಲ್ ಗಾಂಧಿಯವರ ಕೋತಿಗಳು. ಆ ಗಾಂಧೀಜಿ ಮತ್ತು ಈ ಗಾಂಧಿಗೆ ಇರುವ ವ್ಯತ್ಯಾಸವಿದು ಎಂದು ಹೇಳಿದರು.
ಗೊಬೆಲ್ಸ್ ವಂಶದವರು ಭಾರತದಲ್ಲಿ ಇದ್ದರೆ ಅದು ಕಾಂಗ್ರೆಸ್ಸಿನಲ್ಲಿದ್ದಾರೆ. ಹಿಂದೆ ನಮ್ಮ ಪಕ್ಷದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಶೇ. 40 ಕಮಿಷನ್ ಸರ್ಕಾರ ಎಂದು ಹೇಳುತ್ತ ಬಂದಿದ್ದರು. ಈ ಸರ್ಕಾರ ಬಂದ ಬಳಿಕ ನಾಗಮೋಹನ್ ದಾಸ್ ಆಯೋಗವನ್ನೂ ರಚಿಸಿದರು. ಈಗ ನನಗೆ ಗೊತ್ತಿರುವಂತೆ ಆ ಆಯೋಗ ಮುಂದುವರಿಯುತ್ತಿಲ್ಲ. ಪೇ ಸಿಎಂ ಎಂದು ಪೋಸ್ಟರ್ ಅಂಟಿಸಿದರು. ಅದರ ಮುಂದುವರಿದ ಭಾಗವೇ ಮತಗಳ್ಳತನದ ಅಪಪ್ರಚಾರ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಗ್ಯಾರಂಟಿಗಳಿಗಾಗಿ ಈ ಸರ್ಕಾರ ಯಾವುದನ್ನೂ ಬಿಟ್ಟಿಲ್ಲ: ಪ್ರಲ್ಹಾದ್ ಜೋಶಿ ಕಿಡಿ
ಹಿಂದೆ ಇದೇ ನಾಯಕರು ಚೌಕಿದಾರ್ ಚೋರ್ ಹೈ ಎಂದಿದ್ದರು. ಆಗ ಇಡೀ ದೇಶದಲ್ಲಿ ಮೈ ಬೀ ಚೌಕಿದಾರ್ ಎಂಬ ಆಂದೋಲನ ಮಾಡಿದ್ದೆವು. ಈ ಮತಗಳ್ಳತನದ (ವೋಟ್ ಚೋರಿ) ಪರಿಕಲ್ಪನೆಯ ಜನಕ ಯಾರು ಎಂದು ಪ್ರಶ್ನಿಸಿದರು. ಇವತ್ತು ನಮ್ಮ ಪಕ್ಷದ ಶ್ರೇಷ್ಠ ನಾಯಕ ಎಲ್.ಕೆ. ಆಡ್ವಾಣಿ ಅವರ ಜನ್ಮದಿನ. ಅವರ, ‘ನನ್ನ ದೇಶ ನನ್ನ ಜೀವನʼ ಎಂಬ ಪುಸ್ತಕವಿದೆ. ಸ್ವಾತಂತ್ರ್ಯಾ ನಂತರದ ಭಾರತೀಯ ರಾಜಕೀಯ ತಿಳಿದುಕೊಳ್ಳಲು ಆ ಪುಸ್ತಕ ಓದಬೇಕು. 1951ರ ಡಿಸೆಂಬರ್‌ನಿಂದ ಪ್ರಾರಂಭವಾದ 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಮತಗಳ್ಳತನ ಆರಂಭವಾಗಿತ್ತು ಎಂದು ಅವರು ಬರೆದಿದ್ದಾರೆ ಎಂದು ತಿಳಿಸಿದರು.
ಚಿಹ್ನೆ ಇರದ ಚುನಾವಣೆಯ ರೋಚಕ ಪ್ರಸಂಗ
ಮೊದಲನೇ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಚಿಹ್ನೆ ಇರಲಿಲ್ಲ. ಪ್ರತಿಯೊಂದು ಮತಗಟ್ಟೆಯಲ್ಲಿ ಬೇರೆ ಬೇರೆ ಪೆಟ್ಟಿಗೆಗಳನ್ನು ಇಟ್ಟು ಪ್ರತಿ ಪೆಟ್ಟಿಗೆಗೆ ಕಾಂಗ್ರೆಸ್, ಜನಸಂಘ, ಸ್ವತಂತ್ರ ಪಕ್ಷ ಮೊದಲಾದ ಹೆಸರು ಹಾಕಲಾಗುತ್ತಿತ್ತು. ಆಗ ಸಾಕ್ಷರತೆ ಪ್ರಮಾಣ ಕಡಿಮೆ ಇತ್ತು. ಮತದಾರರಿಗೆ ಒಂದು ಚೀಟಿ ಕೊಡುತ್ತಿದ್ದರು. ಅವರು ತಮ್ಮ ಆಯ್ಕೆಯ ಪಕ್ಷದ ಪೆಟ್ಟಿಗೆಯಲ್ಲಿ ಹಾಕಬೇಕಿತ್ತು. ಆಗ ಕಾಂಗ್ರೆಸ್ ಪ್ರಬಲ ಪಕ್ಷವಾಗಿತ್ತು. ಚೀಟಿಯನ್ನು ಪೆಟ್ಟಿಗೆಗೆ ಹಾಕದೇ ಹೊರಗೆ ತಂದರೆ ಒಂದು ರೂ. ಕೊಡುವುದಾಗಿ ಕಾಂಗ್ರೆಸ್ಸಿಗರು ಮತದಾರರಿಗೆ ಆಮಿಷ ಒಡ್ಡುತ್ತಿದ್ದರು. ಆಗ ಆ ಒಂದು ರೂಪಾಯಿಗೆ ದೊಡ್ಡ ಮೌಲ್ಯವಿತ್ತು. ಹತ್ತಾರು ಸೇರು ಅಕ್ಕಿ ಬರುತ್ತಿತ್ತೆಂದು ಕೇಳಲ್ಪಟ್ಟಿದ್ದೇನೆ.
25 ಚೀಟಿಗಳಾದ ಬಳಿಕ ತಮಗೆ ಬೇಕಾದ ಪೆಟ್ಟಿಗೆಯಲ್ಲಿ ಅದನ್ನು ಹಾಕಿ ಬರುತ್ತಿದ್ದರು. ಇದು ಎಲ್.ಕೆ. ಅಡ್ವಾಣಿ ಅವರು ಉಲ್ಲೇಖಿಸಿದ ರೋಚಕ ಪ್ರಸಂಗ ಎಂದು ತಿಳಿಸಿದ ಅವರು, ಆ ಕಾಲದಲ್ಲೇ ಮತಗಳ್ಳತನ ಆರಂಭವಾಗಿತ್ತು ಎಂದು ದೂರಿದರು.
1999ರಲ್ಲಿ ಬಹಳ ದೊಡ್ಡ ವೋಟ್ ಚೋರಿ
1999ರಲ್ಲಿ ಬಹಳ ದೊಡ್ಡ ವೋಟ್ ಚೋರಿ ನಡೆದಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆಗ ಗಿರಿಧರ್ ಗೊಮ್ಯಾಂಗೊ ಎಂಬ ಒರಿಸ್ಸಾ ಮುಖ್ಯಮಂತ್ರಿ ಇದ್ದರು. ಅವರು ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಆ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಗಿರಿಧರ್ ಗೊಮ್ಯಾಂಗೊರನ್ನು ಕರೆಸಿ ಮತ ಪಡೆದ ಖ್ಯಾತಿ ಕಾಂಗ್ರೆಸ್ ಪಕ್ಷದ್ದು ಎಂದು ಆರೋಪಿಸಿದ ಅವರು, ವಾಜಪೇಯಿ ಅವರು ಸೋತದ್ದು ಕೇವಲ ಒಂದು ಮತದಿಂದ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಹಿಂದಿನ ರಾಜ್ಯಾಧ್ಯಕ್ಷ ಮತ್ತು ಇವತ್ತಿನ ಗೃಹ ಸಚಿವ ಡಾ.ಪರಮೇಶ್ವರ್ ಅವರ ಹೇಳಿಕೆ ಮತಗಳ್ಳತನದ ಮಾಹಿತಿ ನೀಡಿದೆ. ವೇದಿಕೆಯಲ್ಲಿ ಭಾಷಣ ಮಾಡಿದ್ದ ಅವರು, ‘ನಿಮಗೆ ಗೊತ್ತಿಲ್ಲವೇ; ಇವಿಎಂ ಬರುವ ಮೊದಲು ನಾವೇನು ಮಾಡುತ್ತಿದ್ದೆವೆಂದು? ರೂಮಲ್ಲೇ ಕೂತು ಗುದ್ದಿ ಗುದ್ದಿ ಮತ ಪಡೆಯುತ್ತಿದ್ದೆವು’ ಎಂದು ಈ ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಹಾಗಿದ್ದರೆ ಮತಗಳ್ಳತನ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | Road Potholes: ರಸ್ತೆ ಗುಂಡಿ ಮುಚ್ಚಲು ಆಗ್ರಹ; ಆರ್. ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ
ಈ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಉಪಸ್ಥಿತರಿದ್ದರು.