ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gruha Jyothi Scheme: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಗುಡ್‌ನ್ಯೂಸ್‌; ಪರಿಷ್ಕರಣೆ ಅವಧಿ ಸೆ.30ರವರೆಗೆ ವಿಸ್ತರಣೆ

ಗ್ಯಾರಂಟಿ ಯೋಜನೆಗಳನ್ನು ಪಡೆಯುತ್ತಿರುವ ಅನರ್ಹರ ಕಡಿತಕ್ಕೆ ರಾಜ್ಯ ಸರ್ಕಾರ ಮುಂದಾಗಿ, ಫಲಾನುಭವಿಗಳ ಪರಿಷ್ಕರಣೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಗೃಹಜ್ಯೋತಿ ಪರಿಷ್ಕರಣೆಗೆ ಆಗಸ್ಟ್‌ 31ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೊಂದು ತಿಂಗಳ ಕಾಲ ಮರುಪರಿಶೀಲನೆ ಅವಧಿ ವಿಸ್ತರಣೆ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಅವಧಿ ಸೆ.30ರವರೆಗೆ ವಿಸ್ತರಣೆ

ಸಾಂದರ್ಭಿಕ ಚಿತ್ರ -

Prabhakara R
Prabhakara R Aug 31, 2026 6:12 PM

ಬೆಂಗಳೂರು: ಗೃಹಜ್ಯೋತಿ ಯೋಜನೆಯ (Gruha Jyothi Scheme) ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಉಚಿತ ವಿದ್ಯುತ್ ಯೋಜನೆ ಪರಿಷ್ಕರಣೆ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2023ರ ಜುಲೈ ತಿಂಗಳಲ್ಲಿ ಜಾರಿಗೊಂಡಿದ್ದ ಗೃಹ ಜ್ಯೋತಿ ಯೋಜನೆಯ ಮರು ಪರಿಶೀಲನಾ ಕಾರ್ಯಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಅದರಂತೆ 2026ರ ಜುಲೈ 1 ರಿಂದ ಗೃಹ ಜ್ಯೋತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆಗಸ್ಟ್‌ 31ರವರೆಗೆ ಸರ್ಕಾರ ಅವಧಿ ನಿಗದಿ ಮಾಡಿತ್ತು. ಇದೀಗ ಒಂದು ತಿಂಗಳ ಕಾಲ ಅವದಿ ವಿಸ್ತರಣೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ.

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 2026ರ ಮೇ ಅಂತ್ಯಕ್ಕೆ 68,86,860 ಗೃಹ ಜ್ಯೋತಿ ಫಲಾನುಭವಿಗಳಿದ್ದು, ಆಗಸ್ಟ್‌ 31ರವರೆಗೆ 46,70,588 ಫಲಾನುಭವಿಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಶೇಕಡಾ 70ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.

ಬೆಸ್ಕಾಂ ಮೀಟರ್‌ ರೀಡರ್‌ಗಳು ಸೆಪ್ಟೆಂಬರ್‌ 1ರಿಂದ ವಿದ್ಯುತ್‌ ಸ್ಥಾವರಗಳ ಮೀಟರ್‌ ರೀಡಿಂಗ್‌ಗೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸಮೀಕ್ಷೆಗೆ ಬಾಕಿ ಉಳಿದಿರುವ ಫಲಾನುಭವಿಗಳು ದಾಖಲೆಗಳನ್ನು ನೀಡಿ ಸಹಕರಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.‌ ಶಿವಶಂಕರ ಮನವಿ ಮಾಡಿದ್ದಾರೆ.

ಬೆಂಗಳೂರು ನಗರದ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿರುವ ಗೃಹ ಜ್ಯೋತಿ ಫಲಾನುಭವಿಗಳು ಸಮೀಕ್ಷೆ ಸಮಯದಲ್ಲಿ ಸಹಕಾರ ನೀಡದಿರುವುದು ಬೆಸ್ಕಾಂ ಗಮನಕ್ಕೆ ಬಂದಿದ್ದು, ಅಪಾರ್ಟ್‌ಮೆಂಟ್‌ಗಳಿಗೆ ಸಿಬ್ಬಂದಿ ಸಮೀಕ್ಷೆಗೆ ಬಂದಾಗ ಸಹಕರಿಸಬೇಕು ಎಂದು ಬೆಸ್ಕಾಂ ವಿನಂತಿಸಿದೆ.

ಡೋರ್‌ ಲಾಕ್‌ ಮನೆಗಳ ಸಮೀಕ್ಷೆಗೆ ಅವಕಾಶ

ಸಮೀಕ್ಷೆಗೆ ಮೀಟರ್‌ ರೀಡರ್‌ಗಳು ಈ ಹಿಂದೆ ಮನೆಗೆ ಭೇಟಿ ನೀಡಿದ್ದರೂ ಕೆಲವು ಮನೆಗಳು ಡೋರ್‌ ಲಾಕ್‌ ಹಾಗೂ ಖಾಲಿ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮೊಬೈಲ್‌ ಆಪ್‌ನಲ್ಲಿ ಡೋರ್‌ ಲಾಕ್‌ ಆಪ್ಶನ್‌ ನೀಡಲಾಗಿದೆ.

ಡೋರ್‌ ಲಾಕ್‌ (Door Lock) ಆಗಿರುವ ಮನೆಗಳಿಗೆ ಸಿಬ್ಬಂದಿಯವರು ಆಯಾ ಸ್ಥಾವರದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ DL ಎಂದು ನಮೂದಿಸಬೇಕು. ಪ್ರತಿಯೊಂದು ಡೋರ್‌ ಲಾಕ್‌ ಮನೆಗಳಿಗೆ ಸಿಬ್ಬಂದಿ ಬೇರೆ ಬೇರೆ ಸಮಯದಲ್ಲಿ ಮೂರು ಬಾರಿ ಭೇಟಿ ನೀಡಬೇಕು. ಪ್ರತಿ ಬಾರಿಯೂ ಅಕ್ಷಾಂಶ (Latitude) ಹಾಗೂ ರೇಖಾಂಶ (Longitude) ನಮೂದಿಸಿಕೊಳ್ಳಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ಡೋರ್‌ ಲಾಕ್‌ ಆಗಿರುವ ಗ್ರಾಹಕರ ವಿವರಗಳನ್ನು ಆಪ್‌ನಲ್ಲಿ ನಮೂದಿಸಿದ ತಕ್ಷಣ ಫಲಾನುಭವಿಗಳ ಮೊಬೈಲ್‌ಗೆ ಮೀಟರ್‌ ರೀಡರ್‌ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯ ಸಹಿತ ಮೂರು ಬಾರಿ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಡೋರ್‌ ಲಾಕ್‌ ಇರುವ ಮನೆಗಳ ಫಲಾನುಭವಿಗಳು ಮೀಟರ್‌ ರೀಡರ್‌ ಅನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಲು ಬೆಸ್ಕಾಂ ವಿನಂತಿಸಿದೆ

ಅದೇ ರೀತಿ ಖಾಲಿ (VACANT) ಎಂದು ಗುರುತಿಸಬೇಕಾದ ಸ್ಥಾವರಗಳಿಗೆ ಸಂಬಂಧಿಸಿದಂತೆ, ಸಿಬ್ಬಂದಿಯವರು ಆಯಾ ಸ್ಥಾವರದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಅಕ್ಷಾಂಶ ಮತ್ತು ರೇಖಾಂಶ ಗುರುತು ಮಾಡಿಕೊಂಡ ನಂತರವೇ ಆಪ್‌ ನಲ್ಲಿ ಖಾಲಿ (VACANT) ಎಂದು ಆಪ್‌ನಲ್ಲಿ ನಮೂದಿಸಲು ಸೂಚಿಸಲಾಗಿದೆ.

ಸಮೀಕ್ಷೆ ಕುರಿತು ಮಾಹಿತಿ ಪಡೆಯಲು ಬೆಸ್ಕಾಂ ನಿಗಮ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದ್ದು, 9480816111, 9480816112, 9480816113 ಮತ್ತು 9480816114 ಗೆ ಸಂಪರ್ಕಿಸಲು ಕೋರಲಾಗಿದೆ.

RTI Act: ಕಳೆದ 155 ದಿನಗಳಲ್ಲಿ 24 ಸಾವಿರ ಅರ್ಜಿಗಳ ವಿಲೇವಾರಿ : ಆರ್‌ಟಿಐ ಅರ್ಜಿ ಇತ್ಯರ್ಥ: ರಾಜ್ಯಕ್ಕೆ ಮೊದಲ ಸ್ಥಾನ

ಪರಿಷ್ಕರಣೆ ಯಶಸ್ವಿಯಾಗಿದೆಯೇ? ಎಂದು ಹೀಗೆ ಚೆಕ್‌ ಮಾಡಿ

ಗೃಹಜ್ಯೋತಿ ಮರುಪರಿಶೀಲನೆ ಅರ್ಜಿ ಸಲ್ಲಿಕೆ ಮಾಡಿದ್ದರೆ ಆಗಸ್ಟ್‌ನ ವಿದ್ಯುತ್‌ ಬಿಲ್‌ನಲ್ಲಿ ಮೇಲ್ಭಾಗದಲ್ಲಿ ಜೆವೈಸರ್ವೇಯ್ಡ್‌ (GJSURVEYED) ಎಂದು ನಮೂದಾಗಿರುತ್ತದೆ. ಒಂದು ವೇಳೆ ತಡವಾಗಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಸೆಪ್ಟೆಂಬರ್‌ನ ಬಿಲ್‌ನಲ್ಲಿ ನಮೂದಿಸಲಾಗಿರುತ್ತದೆ.