Dr M C Sudhakar: ಶಿಕ್ಷಣ ಸಚಿವನಾಗಿದ್ದಾಗ ಬದಲಾವಣೆ ತರಲು ಪ್ರಯತ್ನಿಸಿದ್ದೆ; ಒತ್ತಡಗಳ ನಡುವೆಯೂ ಸಮಸಮಾಜ ನಿರ್ಮಾಣಕ್ಕೆ ಹೋರಾಟ ಅಗತ್ಯ
ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahalli Shivaprasad) ಅವರ ಸಾಹಿತ್ಯಿಕ ಕೊಡುಗೆ ಮತ್ತು ಅರ್ಹತೆಯನ್ನು ಪರಿಗಣಿಸಿಯೇ ಅವರಿಗೆ ಈ ಗೌರವದ ಸ್ಥಾನ ನೀಡಲಾಗಿದೆ. ಆದಿಚುಂಚನ ಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮೆರವಣಿಗೆ ಹಾಗೂ ಸಮ್ಮೇಳನ ಉದ್ಘಾಟಿಸಿರುವುದು ವಿಶೇಷ. ಹಿರಿಯ ಸಾಹಿತಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರ ವಿಚಾರಪೂರ್ಣ ಮಾತುಗಳು ಇಂದಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾಗಿವೆ
-
ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ಉತ್ತಮ ತರಬೇತಿ ಪಡೆದ ಶಿಕ್ಷಕರಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯುತ್ತಿದ್ದರೂ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯು ತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಮತ್ತು ಸೌಲಭ್ಯಗಳನ್ನು ಸುಧಾರಿಸಿ ಖಾಸಗಿ ಶಾಲೆಗಳಿಗೆ ಪರ್ಯಾಯ ವಾಗಿ ರೂಪಿಸಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಗಡಿಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಅದರಲ್ಲೂ ತಮ್ಮ ಕನಸಿನ ಯೋಜನೆಯಾದ ಅಂಬೇಡ್ಕರ್ ಭವನದಲ್ಲಿ ಸಮ್ಮೇಳನ ಆಯೋಜಿಸಿರುವುದು ಹೆಮ್ಮೆಯ ವಿಚಾರ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಸ್ಮರಣೀಯ. ಸಮ್ಮೇಳನದ ಮೆರವಣಿಗೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಪೊಲೀಸ್ ಇಲಾಖೆಯೂ ಉತ್ತಮ ಸಹಕಾರ ನೀಡಿದೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಇದನ್ನೂ ಓದಿ: MLA Dr M C Sudhakar: ಅಭಿವೃದ್ಧಿ ಕಾಣುತ್ತಿಲ್ಲ ಎನ್ನುವವರಿಗೆ ಶಾಸಕ ಡಾ.ಎಂ.ಸಿ.ಸುಧಾಕರ್ ತಿರುಗೇಟು
ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahalli Shivaprasad) ಅವರ ಸಾಹಿತ್ಯಿಕ ಕೊಡುಗೆ ಮತ್ತು ಅರ್ಹತೆಯನ್ನು ಪರಿಗಣಿಸಿಯೇ ಅವರಿಗೆ ಈ ಗೌರವದ ಸ್ಥಾನ ನೀಡಲಾಗಿದೆ. ಆದಿಚುಂಚನ ಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮೆರವಣಿಗೆ ಹಾಗೂ ಸಮ್ಮೇಳನ ಉದ್ಘಾಟಿಸಿರುವುದು ವಿಶೇಷ. ಹಿರಿಯ ಸಾಹಿತಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರ ವಿಚಾರಪೂರ್ಣ ಮಾತುಗಳು ಇಂದಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತ ವಾಗಿವೆ ಎಂದು ಹೇಳಿದರು.
ಜಗತ್ತಿನ ಸುಮಾರು 6,700 ಭಾಷೆಗಳಲ್ಲಿ ಕನ್ನಡ 14ನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಇದೆ. ಭಾಷಾ ವಾರು ಪ್ರಾಂತ್ಯಗಳ ರಚನೆಯ ಫಲವಾಗಿ ಕರ್ನಾಟಕ ಉದಯವಾಯಿತು. ಭಾಷೆಯ ಸೊಬಗು ಅದರ ವೈವಿಧ್ಯತೆಯಲ್ಲಿದೆ. ಪಂಪ, ರನ್ನ, ಜನ್ನ, ಬಸವಣ್ಣ ಮೊದಲಾದ ಮಹನೀಯರ ಸಾಹಿತ್ಯ ಮತ್ತು ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಕನ್ನಡ ಭಾಷೆಗೆ ಕಿಟೆಲ್ ನೀಡಿದ ಕೊಡುಗೆಯ ಬಗ್ಗೆಯೂ ಮಕ್ಕಳಿಗೆ ತಿಳಿಸಬೇಕು. ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದಲ್ಲಿ ವ್ಯಕ್ತಪ ಡಿಸಿದ ಆಶಯಗಳಿಗೆ ಪೂರಕವಾಗಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ಕಾಲ ಬದಲಾದಂತೆ ಅದರೊಂದಿಗೆ ಸಾಗುವುದು ಅನಿವಾರ್ಯ. ಆದರೆ ಇಂದಿನ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ; ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಯೂ ನಡೆಯುತ್ತಿದೆ. ಆದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಅಮೆರಿಕದಲ್ಲಿ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ವ್ಯವಸ್ಥೆಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದರೆ ನಮ್ಮಲ್ಲಿ ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ. ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಮೇಲೆಯೂ ಸಂಪೂರ್ಣ ನಂಬಿಕೆ ಇಡಲು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯನ್ನು ಅರಿತು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ದೇವಾಲಯಗಳ ನಿರ್ಮಾಣಕ್ಕೆ ಜನರು ಹಣ ನೀಡಲು ಮುಂದೆ ಬರುತ್ತಾರೆ. ಆದರೆ ಶಾಲೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಅದೇ ರೀತಿಯ ಆಸಕ್ತಿ ತೋರುತ್ತಿಲ್ಲ. ಜನರ ಬದುಕಿಗೆ ದಾರಿ ತೋರಿಸುವ ಶಾಲೆಗಳ ನಿರ್ಮಾಣ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಎಲ್ಲರೂ ಮುಂದಾಗಬೇಕು. ಬ್ರಿಟಿಷರ ಆಗಮನದ ನಂತರ ದೇಶದಲ್ಲಿ ಹಲವು ಸುಧಾರಣೆಗಳು ನಡೆದಿರುವ ಐತಿಹಾಸಿಕ ಸಂಗತಿಯನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದರು.
ತಾವು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದಾಗಿ ತಿಳಿಸಿದ ಅವರು, ವಸತಿ ಶಾಲೆಗಳಿಗೆ ಇಂದು ಹೆಚ್ಚಿನ ಬೇಡಿಕೆಯಿದೆ. ಅದೇ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿಯೂ ದೊರೆಯುವಂತಾಗಬೇಕು. ರಾಜಕಾರಣದಲ್ಲಿ ಹಲವು ಒತ್ತಡಗಳಿದ್ದರೂ ನಿರಾಶರಾಗದೆ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಬಹುತ್ವದ ಆಶಯಗಳನ್ನು ಜಿಲ್ಲೆಯ ನಾಗರಿಕರು ಆಸ್ವಾದಿಸಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಆಶಿಸಿದರು.