ಪ್ರಜ್ವಲ್ ರೇವಣ್ಣ ಕಾರು ಚಾಲಕ ಡಿಕೆಶಿ ಮನೆಗೆ ಹೋಗಿದ್ದೇಕೆ?, ಅವರ ವಿರುದ್ಧ ತನಿಖೆ ಯಾಕೆ ನಡೆದಿಲ್ಲ: ಎಚ್ಡಿಕೆ ಪ್ರಶ್ನೆ
ಪ್ರಜ್ವಲ್ ಪೆನ್ಡ್ರೈವ್ ಅನ್ನು ನಾನೇ ಹಂಚಿದ್ದು ಅಂತ ಆರೋಪಿಸಿದ್ದಾರೆ. ಆದರೆ ಪೆನ್ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಡಿ.ಕೆ. ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
-
ಬೆಂಗಳೂರು: ಲೋಕಸಭಾ ಚುನಾವಣೆ ಸಮಯದಲ್ಲಿ ಇದೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ದೇವೇಗೌಡರ ಕುಟುಂಬ ಅಡ್ಡಿಯಾಗುತ್ತದೆ ಎಂದು ಪ್ರಜ್ವಲ್ ರೇವಣ್ಣ ಪ್ರಕರಣವನ್ನು (Prajwal Revanna Case) ಮುನ್ನೆಲೆಗೆ ತಂದರು. ಪೆನ್ ಡ್ರೈವ್ ವಿಡಿಯೊಗಳನ್ನು ಸೋರಿಕೆ ಮಾಡಿದ ಚಾಲಕ ಕಾರ್ತಿಕ್ ಡಿ.ಕೆ. ಶಿವಕುಮಾರ್ ಮನೆಗೆ ಏಕೆ ಭೇಟಿ ನೀಡಿದ. ಆ ಕುರಿತು ಏಕೆ ವಿಚಾರಣೆ ನಡೆಸಲಿಲ್ಲ. ಆ ಪ್ರಕರಣದಲ್ಲಿ ಪ್ರಜ್ವಲ್ಗೆ ಜೀವಾವಧಿ ಶಿಕ್ಷೆ ಕೊಡಿಸಲು ತೋರಿದ ಆಸಕ್ತಿಯನ್ನು ಸ್ಟಿಂಗ್ ಪ್ರಕರಣ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೋರಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಸೋಮವಾರ ಮಾತನಾಡಿದ್ದಾರೆ. ಪ್ರಜ್ವಲ್ ಪೆನ್ಡ್ರೈವ್ ಅನ್ನು ನಾನೇ ಹಂಚಿದ್ದು ಅಂತ ಆರೋಪಿಸಿದ್ದಾರೆ. ಆದರೆ ಪೆನ್ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಡಿ.ಕೆ. ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ಕಾಲ್ ಡಿಟೇಲ್ ರೆಕಾರ್ಡ್ ಬಿಡುಗಡೆ ಮಾಡಿದ್ದಾರೆ.
ಬ್ಲ್ಯಾಕ್ ಮೇಲ್ ಮಾಡಿದವರನ್ನು ವಿದೇಶಕ್ಕೆ ಹೋಗಲು, ಜಾಮೀನು ಪಡೆಯಲು ಬಿಟ್ಟಿದ್ದಾರೆ ಇದು ಇವರ ದ್ವಿಮುಖ ನೀತಿ. 2023ರ ಆಗಸ್ಟ್ 5, 6ರಂದು ಕಾರ್ತಿಕ್ ಡಿಕೆಶಿ ಮನೆಗೆ ಹೋಗಿದ್ದು, ಆ ಕ್ಯಾಸೆಟ್ ಆಗಿದ್ದು ನಿಮ್ಮ ಮನೆಯಲ್ಲಾ? ಈ ಬಗ್ಗೆ ತನಿಖೆ ಆಗಿದೆಯೇ ಎಂದು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.
ಸ್ಟಿಂಗ್ ಪ್ರಕರಣ ಸಂಬಂಧ ನಿನ್ನೆ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ?, ನನ್ನ ನಿವಾಸದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ರಿತೇಶ್ ಪಾಂಡೆ ನನಗೆ ಯಾರು ಅಂತ ಗೊತ್ತಿಲ್ಲ, ಆತನ ಮುಖ ನೋಡಿಲ್ಲ. ನಮ್ಮ ದೆಹಲಿ ಮನೆಗೆ ಸಾಕಷ್ಟು ಜನ ಕೆಲಸ ಹೇಳಿಕೊಂಡು ಬರುತ್ತಾರೆ. ಹೀಗಾಗಿ ಆ ಬಗ್ಗೆ ತನಿಖೆ ಮಾಡಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ. ನಾನು ಕೋರ್ಟ್ಗೆ ಹೋದರೆ ಏನೂ ಆಗುತ್ತದೆ ಎಂದು ಆ ಅಧಿಕಾರಿಗೆ ಗೊತ್ತು. ಆದರೆ ನಾನು ಆ ರೀತಿ ಮಾಡಲ್ಲ. ಯಾಕೆಂದರೆ ಅವರು ಒತ್ತಡಕ್ಕೆ ಮಣಿದು ಹೇಳಿಕೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಎಂದು ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಅವರಿಗೂ ಕ್ಲೀನ್ಚಿಟ್ ನೀಡಿದ್ದಾರೆ. ಸ್ಟಿಂಗ್ ಮಾಡಿಸಿದವರನ್ನು ರಕ್ಷಿಸುವುದೇ ನಿಮ್ಮ ಉದ್ದೇಶವಾಗಿದೆ. ಪ್ರಕರಣದಲ್ಲಿ ಜೆಡಿಎಸ್ ಪಕ್ಷದವರ ಪಾತ್ರ ಇದೆ ಅಂತ ಸಚಿವ ಯತೀಂದ್ರ ಆರೋಪ ಮಾಡಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ದೆಹಲಿಯ ನನ್ನ ಮನೆಯಲ್ಲಿ ಮೊಬೈಲ್ ಹಸ್ತಾಂತರ ಅಂತ ಆರೋಪ ಮಾಡಿದ್ದೀರಿ. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾರು? ಪ್ರಶ್ನಿಸಿದ್ದಾರೆ.
ರಾಜ್ಯದ ಪೊಲೀಸ್ ಅಧಿಕಾರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪವೂ ಇದೆ. ನಮಗೂ ಸಮಯ ಬರುತ್ತೆ, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿ. ನಮ್ಮ ಕುಟುಂಬ ಪ್ರಧಾನಿ ಹುದ್ದೆಯನ್ನು ನೋಡಿದ್ದರೂ ಪೊಲೀಸರನ್ನು ಹೆದರಿಸಿಲ್ಲ. ನಾನು ಎರಡು ಸಲ ಸಿಎಂ ಆದರೂ ದ್ವೇಷದ ರಾಜಕಾರಣ ಮಾಡಿಲ್ಲ. ನಮ್ಮ ಮನೆ ಮೇಲೆ ದಾಳಿ ನಡೆಸಲು ಬನ್ನಿ ತಯಾರಿದ್ದೇನೆ ಎಂದು ಕೇಂದ್ರ ಸಚಿವ ಹೇಳಿದ್ದಾರೆ.