ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: ರೋಹಿತ್‌-ಗಿಲ್‌ ಓಪನರ್ಸ್‌, ಮೊದಲನೇ ಒಡಿಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನವೆಂಬರ್ 4ರಂದು ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್‌ನ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಆರಂಭಿಕ ಪಂದ್ಯ ನಡೆಯಲಿದ್ದು, ಭಾರತ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬ ಕುತೂಹಲವಿದೆ. ಇದರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ. -

Profile
Ramesh Kote Nov 2, 2026 7:43 PM

ನವದೆಹಲಿ: ಐದು ಪಂದ್ಯಗಳ ಟಿ20ಐ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿರುವ ಭಾರತ ತಂಡ ಇದೀಗ ಏಕದಿನ ಸರಣಿಯತ್ತ ಗಮನ ಹರಿಸಿದೆ. ನವೆಂಬರ್ 4ರಿಂದ 15ರವರೆಗೆ ಐದು ಪಂದ್ಯಗಳ ಏಕದಿನ ಸರಣಿ (IND vs NZ) ನಡೆಯಲಿದೆ. ಈ ಸರಣಿಯ ಮೂಲಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಸದ್ಯ ಇಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

ಏಕದಿನ ಸರಣಿಗೆ ಋತುರಾಜ್ ಗಾಯಕ್ವಾಡ್ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ. ಬಹುನಿರೀಕ್ಷಿತ ಸರಣಿಯ ಆರಂಭಕ್ಕೂ ಮುನ್ನ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೇಗಿರಲಿದೆ ಎಂಬುದನ್ನು ನೋಡೋಣ.

IND vs NZ: ʻಟಿ20ಐ ಸರಣಿಯಲ್ಲಿ ಬೆಂಚ್‌ ಕಾಯಿಸಿದ್ದೀರಿ, ಒಡಿಐನಲ್ಲಿ ಕುಲ್ದೀಪ್‌ ಯಾದವ್‌ಗೆ ಚಾನ್ಸ್‌ ಕೊಡಿʼ-ಅಜಿಂಕ್ಯ ರಹಾನೆ!

ಆರಂಭಿಕರು

ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ನವೆಂಬರ್ 19ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಮೂರನೇ ಏಕದಿನ ಪಂದ್ಯದ ಬಳಿಕ ಶುಭಮನ್ ಗಿಲ್ ಸೇರಿದಂತೆ ಟೆಸ್ಟ್ ತಂಡದ ಪ್ರಮುಖ ಆಟಗಾರರು ಏಕದಿನ ತಂಡವನ್ನು ತೊರೆಯಲಿದ್ದಾರೆ. ಆದರೆ ರೋಹಿತ್ ಶರ್ಮಾ ಐದೂ ಪಂದ್ಯಗಳಲ್ಲಿ ಆಡಲಿದ್ದಾರೆ.

ಮಧ್ಯಮ ಕ್ರಮಾಂಕ

ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದು, ಅವರ ನಂತರ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ. ತಂಡದ ಉಪನಾಯಕನಾಗಿರುವ ಅಯ್ಯರ್ ಕೊನೆಯ ಎರಡು ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ ಟಿ20ಐ ಸರಣಿಯಲ್ಲಿ ಭಾರತ ತಂಡವನ್ನು 3-2 ಅಂತರದಲ್ಲಿ ಗೆಲ್ಲಿಸಿದ್ದ ಅಯ್ಯರ್, ಏಕದಿನ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಋತುರಾಜ್ ಗಾಯಕ್ವಾಡ್ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಮಾತ್ರ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಅವಕಾಶ ಸಿಕ್ಕಿತ್ತು. ಇದೀಗ ಅಯ್ಯರ್ ತಂಡಕ್ಕೆ ಮರಳುತ್ತಿರುವುದರಿಂದ ಗಾಯಕ್ವಾಡ್ ಹೊರಗುಳಿಯಬೇಕಾಗಬಹುದು. ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಅವರು ಮತ್ತೆ ಆಡುವ ಹನ್ನೊಂದರ ಬಳಗಕ್ಕೆ ಮರಳುವ ಸಾಧ್ಯತೆಯಿದೆ.

ಶಿವಂ ದುಬೆ ಏನು ತಪ್ಪು ಮಾಡಿದ್ರು? ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಆಕಾಶ್‌ ಚೋಪ್ರಾ ಆಕ್ರೋಶ!

ವಿಕೆಟ್ ಕೀಪರ್‌ಗಳು

ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. 2023ರಿಂದ ಅವರು ಭಾರತ ತಂಡದ ಪ್ರಮುಖ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ. ಇದೇ ವೇಳೆ, ಇಶಾನ್ ಕಿಶನ್ ಕೂಡ ಆಡುವ ಹನ್ನೊಂದರ ಬಳಗಕ್ಕೆ ಮರಳುವ ನಿರೀಕ್ಷೆಯಿದೆ. ಟೆಸ್ಟ್ ಸರಣಿಯ ಸಿದ್ಧತೆಗಾಗಿ ಕೆಎಲ್ ರಾಹುಲ್ ಏಕದಿನ ತಂಡವನ್ನು ತೊರೆದ ಬಳಿಕ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಆಲ್‌ರೌಂಡರ್‌ಗಳು

ಭಾರತದ ಆಡುವ ಹನ್ನೊಂದರ ಬಳಗದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ನಮನ್ ಧೀರ್ ಇಬ್ಬರು ಆಲ್‌ರೌಂಡರ್‌ಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ನಿತೀಶ್ ರೆಡ್ಡಿ ಮೊದಲ ಏಕದಿನ ಪಂದ್ಯಕ್ಕೆ ಮಾತ್ರ ತಂಡದ ಭಾಗವಾಗಿರಲಿದ್ದಾರೆ. ಇನ್ನು ನಮನ್ ಧೀರ್‌ಗೆ ಅಕ್ಷರ್ ಪಟೇಲ್ ಅವರಿಗಿಂತ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆಯಿದೆ.

ನಾನು ಭುವನೇಶ್ವರ್‌ ಕುಮಾರ್‌ಗೆ ಟಿ20ಐ ತಂಡದಲ್ಲಿ ಸ್ಥಾನ ನೀಡುವುದಿಲ್ಲ: ಕೆ ಶ್ರೀಕಾಂತ್‌ ಅಚ್ಚರಿ ಹೇಳಿಕೆ!

ಬೌಲರ್‌ಗಳು

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಅವರ ಸೇವೆ ಲಭ್ಯವಿರುವುದಿಲ್ಲ. ಅವರು ನ್ಯೂಜಿಲೆಂಡ್ ಎ ವಿರುದ್ಧ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಆಕಿಬ್ ನಬಿ ಮತ್ತು ಗುರ್ನೂರ್ ಬ್ರಾರ್ ತಂಡದ ಇತರ ಇಬ್ಬರು ವೇಗದ ಬೌಲರ್‌ಗಳಾಗಿ ಆಡುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

  1. ಶುಭಮನ್ ಗಿಲ್ (ನಾಯಕ)
  2. ರೋಹಿತ್ ಶರ್ಮಾ
  3. ವಿರಾಟ್ ಕೊಹ್ಲಿ
  4. ಶ್ರೇಯಸ್ ಅಯ್ಯರ್
  5. ಕೆಎಲ್ ರಾಹುಲ್
  6. ಇಶಾನ್ ಕಿಶನ್
  7. ನಿತೀಶ್ ಕುಮಾರ್ ರೆಡ್ಡಿ
  8. ನಮನ್ ಧೀರ್
  9. ಔಕಿಬ್ ನಬಿ
  10. ಅರ್ಶದೀಪ್ ಸಿಂಗ್
  11. ಗುರ್ನೂರ್‌ ಬ್ರಾರ್