Dharwad Protest: ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ತುರ್ತು ಕ್ರಮ ವಹಿಸಲಿ: ಎಚ್.ಡಿ.ಕುಮಾರಸ್ವಾಮಿ ಒತ್ತಾಯ
ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರ್ಕಾರ ಮರೆಯಬಾರದು. ಈ ಹೊತ್ತಿಗೇ ಆಡಳಿಗಾರರು ಎಚ್ಚೆತ್ತು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದ್ದರ ಹಿನ್ನೆಲೆಯಲ್ಲಿ ಈಗ ಆಡಳಿತದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ. -
ಬೆಂಗಳೂರು: ಧಾರವಾಡದಲ್ಲಿ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಬೀದಿಗೆ ಇಳಿದಿರುವುದನ್ನು (Dharwad Protest) ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಬಾರದು. ಸರ್ಕಾರಿ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬದೇ ನಿರ್ಲಕ್ಷಿಸಿದ ಪರಿಣಾಮವೇ ಯುವಜನರು ಪ್ರತಿಭಟನೆ ದಾರಿ ತುಳಿಯಲು ಕಾರಣ. ಯುವಜನರಿಗೆ ನನ್ನ ಮನವಿ ಇಷ್ಟೇ; ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ 2.94 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ಸೂಪರ್ ಫಾಸ್ಟ್ ಆಗಿ ಭರ್ತಿ ಆಗುತ್ತಿವೆ. ಕರ್ನಾಟಕ ಸರ್ಕಾರದ ಆದ್ಯತೆ ಯಾವ ರೀತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ.
ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ. ಇವರೆಲ್ಲರೂ ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿದೆ. ಯುವಜನರತ್ತ ಗಮನ ಹರಿಸಲು ಈ ಸರ್ಕಾರಕ್ಕೆ ಟೈಮಿಲ್ಲ!
ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರ್ಕಾರ ಮರೆಯಬಾರದು. ಈ ಹೊತ್ತಿಗೇ ಆಡಳಿಗಾರರು ಎಚ್ಚೆತ್ತು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಅತಿ ಹೆಚ್ಚು ಹುದ್ದೆಗಳು ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇವೆ. ಬೆಂಗಳೂರು ನಗರದ 18 ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಇನ್ʼಸ್ಪೆಕ್ಟರ್ʼಗಳೇ ಇಲ್ಲ! ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದ್ದರ ಪರಿಣಾಮವಿದು. ಇದೆಲ್ಲವೂ ಆಡಳಿತದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
Dharwad Protest: ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳ ನೇಮಕಾತಿಗೆ ಕ್ರಮ: ಸಿಎಂ ವಾಗ್ದಾನ
ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ವಹಿಸಬೇಕು. ವಿಧಾನಸೌಧದ 3ನೇ ಮಹಿಡಿಯಿಂದ ಕೆಳಗಿಳಿದು ಬಂದು ಯುವಜನರ ದನಿ ಆಲಿಸಬೇಕು. ಇಲ್ಲವಾದರೆ, ಇವರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.