Roopa Gururaj Column: ಹರಿಭಕ್ತಿಸಾರ: ಕಾಗೆನೆಲೆಯ ಪಯಣ, ದೇಗುಲ ನಿರ್ಮಾಣ
ಕಾಗೆನೆಲೆಗೆ ಬಂದ ದಾಸರು ಅಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಆದಿಕೇಶವನ ದೇವಸ್ಥಾನವನ್ನು ಜೀರ್ಣೋ ದ್ಧಾರ ಮಾಡಲು ಸಂಕಲ್ಪಿಸಿದರು. ಅರಮನೆಯ ವೈಭವ, ದಂಡನಾಯಕನ ಅಧಿಕಾರವನ್ನು ಅನುಭವಿಸಿ ದ್ದ ಅದೇ ಕೈಗಳು ಈಗ ಕಾಗೆನೆಲೆಯಲ್ಲಿ ಕಲ್ಲು, ಮಣ್ಣುಗಳನ್ನು ಹೊತ್ತು ದೇವಸ್ಥಾನ ಕಟ್ಟುವ ಕಾಯಕ ದಲ್ಲಿ ತೊಡಗಿದವು.
-
ಒಂದೊಳ್ಳೆ ಮಾತು
(ಭಾಗ - 5)
ಉಡುಪಿಯ ಸನ್ನಿವೇಶಗಳ ನಂತರ ಕನಕದಾಸರಿಗೆ ಲೌಕಿಕ ಜಗತ್ತಿನ ಪ್ರತಿಯೊಂದು ಆಕರ್ಷಣೆಯೂ ನಿಸ್ಸಾರವಾಗಿ ಕಂಡಿತು. ಹೊಗಳಿಕೆ-ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ‘ಸ್ಥಿತಪ್ರಜ್ಞ’ ಸ್ಥಿತಿಯನ್ನು ಅವರು ತಲುಪಿದ್ದರು. ಇಂತಹ ಸಮಯದಲ್ಲಿ ಅವರಿಗೆ ತಮ್ಮ ಮುಂದಿನ ಬದುಕಿನ ದಾರಿಯನ್ನು ತೋರಲು ಭಗವಂತನೇ ಮತ್ತೊಮ್ಮೆ ಪ್ರೇರೇಪಿಸಿದನು. ಕನಕದಾಸರು ತಮ್ಮ ಆರಾಧ್ಯ ದೈವವಾದ ಆದಿಕೇಶವನ ಅಪ್ಪಣೆಯಂತೆ ‘ಕಾಗೆನೆಲೆ’ ಎಂಬ ಪುಣ್ಯಕ್ಷೇತ್ರಕ್ಕೆ ಬಂದರು.
ಕಾಗೆನೆಲೆಗೆ ಬಂದ ದಾಸರು ಅಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಆದಿಕೇಶವನ ದೇವಸ್ಥಾನವನ್ನು ಜೀರ್ಣೋ ದ್ಧಾರ ಮಾಡಲು ಸಂಕಲ್ಪಿಸಿದರು. ಅರಮನೆಯ ವೈಭವ, ದಂಡನಾಯಕನ ಅಧಿಕಾರವನ್ನು ಅನುಭವಿಸಿದ್ದ ಅದೇ ಕೈಗಳು ಈಗ ಕಾಗೆನೆಲೆಯಲ್ಲಿ ಕಲ್ಲು, ಮಣ್ಣುಗಳನ್ನು ಹೊತ್ತು ದೇವಸ್ಥಾನ ಕಟ್ಟುವ ಕಾಯಕದಲ್ಲಿ ತೊಡಗಿದವು.
ಸಮಾಜ ಅವರನ್ನು ‘ಮಹಾತ್ಮ’ ಎಂದು ಕೊಂಡಾಡುತ್ತಿದ್ದರೂ, ಅವರು ಮಾತ್ರ ಒಬ್ಬ ಸಾಮಾನ್ಯ ಸೇವಕನಂತೆ ಬೆವರು ಸುರಿಸಿ ಕಾಯಕಕ್ಕೆ ತೊಡಗಿದರು. ದೇಗುಲದ ಕೆಲಸ ಮುಗಿದು, ಮೂರ್ತಿಯ ಪ್ರತಿಷ್ಠಾಪನೆಯಾಗುವ ದಿನ ಹತ್ತಿರ ಬಂದಿತು. ಆಗ ಅಲ್ಲಿನ ಕೆಲವು ಜನರಲ್ಲಿ ಮತ್ತೆ ಜಾತಿಯ ಸೂಕ್ಷ್ಮ ಅಹಂಕಾರ ತಲೆದೂಗಿತು. ಈ ದೇವಸ್ಥಾನವನ್ನು ಕಟ್ಟಿದವನು ಒಬ್ಬ ಕೆಳಜಾತಿಯ ದಾಸ. ಇವನು ಮುಟ್ಟಿದ ಮೂರ್ತಿಯನ್ನು ನಾವು ಪೂಜಿಸಬೇಕೇ? ಇವನಿಗೆ ದೇವರನ್ನು ಪ್ರತಿಷ್ಠಾಪಿಸುವ ಅರ್ಹತೆ ಎಲ್ಲಿದೆ? ಎಂದು ಪಿಸುಗುಟ್ಟಲಾರಂಭಿಸಿದರು.
ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ
ಈ ಮಾತುಗಳು ಕನಕದಾಸರ ಕಿವಿಗೆ ಬಿದ್ದವು. ಆದರೆ, ಈ ಬಾರಿ ಅವರಿಗೆ ಕೋಪ ಬರಲಿಲ್ಲ, ಬದಲಿಗೆ ಆ ಜನರ ಅಜ್ಞಾನವನ್ನು ಕಂಡು ಮರುಕವುಂಟಾಯಿತು. ಅವರು ನೇರವಾಗಿ ಗರ್ಭಗುಡಿಯೊಳಗೆ ಹೋಗಿ, ಶ್ರೀಹರಿಯ ಮೂರ್ತಿಯ ಮುಂದೆ ನಿಂತು ಕಣ್ಣೀರು ಹಾಕುತ್ತಾ ಕೈ ಮುಗಿದರು.
ಪ್ರಭು, ಜನ ಇನ್ನೂ ದೇಹದ ಚರ್ಮ, ಜಾತಿ, ವರ್ಣಗಳನ್ನೇ ಸತ್ಯವೆಂದು ನಂಬಿ ಬಡಿದಾಡುತ್ತಿದ್ದಾರೆ. ನಿನ್ನನ್ನು ಕೇವಲ ಒಂದು ಕಲ್ಲಿನ ಮೂರ್ತಿ ಎಂದು ಭಾವಿಸಿ, ಅದನ್ನು ಯಾರು ಮುಟ್ಟಬೇಕು, ಯಾರು ಮುಟ್ಟಬಾರದು ಎಂದು ವಾದಿಸುತ್ತಿದ್ದಾರೆ. ನಿನ್ನ ದಿವ್ಯ ಮಾಯೆಯನ್ನು ಅರಿಯದ ಇವರ ಭ್ರಮೆಯನ್ನು ನೀನೇ ದೂರ ಮಾಡು ಎಂದು ಪ್ರಾರ್ಥಿಸಿದರು.
ತಮ್ಮ ಅಂತರಾಳದಲ್ಲಿ ಇಡೀ ಸೃಷ್ಟಿಯ ಸಾರವನ್ನೇ ತುಂಬಿಕೊಂಡಿದ್ದ ಕನಕದಾಸರು, ಭಗವಂತನ ವಿಶ್ವರೂಪವನ್ನು ನೆನೆಯುತ್ತಾ, ಮನುಷ್ಯನಿಗೆ ಅರಿವು ಮೂಡಿಸುವ ‘ಹರಿಭಕ್ತಿ ಸಾರ’ದ ಐದನೆಯ ಪದ್ಯ ಹೀಗಿದೆ..
ಅಣು ಮಹತ್ತಿನೊಳಿದ್ದು ಜಗವನು
ವಣಿಸುತಿಪ್ಪ ಜಗನ್ನಿವಾಸನ
ಗುಣಗಳನು ಕೊಂಡಾಡಿ
ಧನ್ಯತೆ ಪಡೆಯದೀ ತನುವು ||
ತೃಣಕೆ ಸಮನಹುದಲ್ಲದೇ ಸಂ-
ಸರಣ ಸಾಗರದಾಚೆ ದಂಡೆಗೆ
ಅಣಕಿಸುತ ತಳ್ಳುವುದೆ ನಮ್ಮನು
ಬಾಡದಾದಿಕೇಶ || ೫ |
ಪದ್ಯದ ಭಾವಾರ್ಥ: ಎಲೈ ಬಾಡದ ಆದಿ ಕೇಶವನೇ, ನೀನು ಅತ್ಯಂತ ಚಿಕ್ಕದಾದ ಪರಮಾಣುವಿ ನೊಳಗೂ (ಅಣು) ಇದ್ದೀಯೆ, ಹಾಗೆಯೇ ಅತ್ಯಂತ ದೈತ್ಯಾಕಾರದ ಬ್ರಹ್ಮಾಂಡದೊಳಗೂ (ಮಹತ್ತು) ವ್ಯಾಪಿಸಿದ್ದೀಯೆ. ಈ ಇಡೀ ಜಗತ್ತನ್ನು ನಿನ್ನ ಇಚ್ಛೆಯಂತೆ ಆಡಿಸುವ ಜಗನ್ನಿವಾಸನು ನೀನೇ ಆಗಿದ್ದೀಯೆ.
ಇಂತಹ ಅಗಾಧವಾದ ಶಕ್ತಿಯನ್ನು ಹೊಂದಿರುವ ನಿನ್ನ ದಿವ್ಯ ಗುಣಗಳನ್ನು ಕೊಂಡಾಡದ, ನಿನ್ನ ನಾಮಸ್ಮರಣೆ ಮಾಡದ ಈ ಮನುಷ್ಯನ ದೇಹವು ಕೇವಲ ಒಂದು ಒಣಗಿದ ಹುಲ್ಲಿಗೆ (ತೃಣಕೆ) ಸಮಾನವಾದುದು! ಯಾರು ನಿನ್ನನ್ನು ಅರಿಯದೆ ಕೇವಲ ಬಾಹ್ಯ ಆಡಂಬರ ಮತ್ತು ಭೇದಭಾವ ಗಳಲ್ಲಿ ಮುಳುಗಿರುತ್ತಾರೋ, ಅವರ ಬದುಕು ವ್ಯರ್ಥ.
ಅಂತಹವರನ್ನು ಈ ಭವಸಾಗರವು (ಸಂಸಾರ ಸಾಗರ) ಮುಕ್ತಿಯ ದಂಡೆಗೆ ತಲುಪಿಸುವುದಿಲ್ಲ; ಬದಲಿಗೆ ಅವರನ್ನು ಅಣಕಿಸುತ್ತಾ, ಮತ್ತಷ್ಟು ಕಷ್ಟಗಳ ಸುಳಿಗೆ ತಳ್ಳಿ ಬಿಡುತ್ತದೆ. ಆದ್ದರಿಂದ ಪ್ರಭು, ಈ ಜನರಿಗೆ ಸದ್ಬುದ್ಧಿಯನ್ನು ನೀಡು, ನಿನ್ನ ಗುಣಗಾನ ಮಾಡುವ ಭಾಗ್ಯವನ್ನು ನನಗೆ ಕರುಣಿಸು!ನಾವು ದಿನನಿತ್ಯದ ಬದುಕಿನಲ್ಲಿ ನಮಗಿಂತ ಚಿಕ್ಕವರನ್ನು ಕಡೆಗಣಿಸುತ್ತೇವೆ ಅಥವಾ ಬಾಹ್ಯ ರೂಪ ವನ್ನು ನೋಡಿ ಮನುಷ್ಯರನ್ನು ಅಳೆಯುತ್ತೇವೆ.
ಭಗವಂತನ ಸೃಷ್ಟಿಯ ಪ್ರತಿಯೊಂದು ಕಣದಲ್ಲೂ ಆ ದೈವೀ ಶಕ್ತಿ ಅಡಗಿದೆ. ಈ ಸತ್ಯವನ್ನು ಅರಿಯದೆ, ದೇವರ ಗುಣಗಳನ್ನು ಕೊಂಡಾಡದೆ ಕೇವಲ ಸ್ವಾರ್ಥ ಮತ್ತು ಭೇದಭಾವಗಳಲ್ಲಿ ಕಳೆ ಯುವ ಬದುಕು ಖಂಡಿತ ನಮಗೆ ಆತ್ಮ ಸಂತೋಷವನ್ನು ನೀಡಲಾಗದು. ಬಾಹ್ಯ ಪ್ರಪಂಚದಲ್ಲಿ ನಾವೆಷ್ಟೇ ಸರಿ ಎಂದು ಓಡಾಡಿದರೂ, ಆಂತರಿಕವಾಗಿ ನಮ್ಮ ಅಹಂಕಾರ, ಸಣ್ಣ ಬುದ್ಧಿ ನಮ್ಮನ್ನೇ ತಿಂದು ಹಾಕುತ್ತಿರುತ್ತದೆ. ಇದು ನಮಗೆ ನೆನಪಿರಬೇಕು.