Praja Seva Department: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ʼಪ್ರಜಾಸೇವಾ ಇಲಾಖೆʼ ಹೇಗೆ ಕಾರ್ಯ ನಿರ್ವಹಿಸುತ್ತದೆ?; ಯಾವೆಲ್ಲಾ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಬಹುದು?
ಸರ್ಕಾರಿ ಸೇವೆಗಳು ಹಾಗೂ ಸೌಲಭ್ಯಗಳು ಜನರ ಮನೆಬಾಗಿಲಿಗೇ ತಲುಪಿಸಲು ಈ ಇಲಾಖೆಯಿಂದ ʼಪ್ರಜಾಸೇವಾ ಅಭಿಯಾನʼ ಹಮ್ಮಿಕೊಳ್ಳಲಾಗಿದ್ದು, ಜನರಿಗೆ ತಮ್ಮ ಊರಲ್ಲೇ ಸಮಸ್ಯೆಗಳಿಗೆ ನೇರ ಪರಿಹಾರ ಸಿಗಲಿದೆ. ಪ್ರತಿ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜನಪ್ರತಿನಿಗಳ ನೇತೃತ್ವದಲ್ಲಿ ಬೆಳಿಗ್ಗೆ 10ರಿಂದ ಸಂಜೆಯವರೆಗೆ ಸಭೆಗಳನ್ನು ನಡೆಸೆ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯ ನಡೆಯಲಿದೆ.
-
ಬೆಂಗಳೂರು: ಜನರ ಸಮಸ್ಯೆ, ಕುಂದುಕೊರತೆ ಮತ್ತು ಅಹವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ʼಪ್ರಜಾಸೇವಾ ಇಲಾಖೆʼ ಯನ್ನು (Praja Seva Department) ಶನಿವಾರ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಲೋಕಾರ್ಪಣೆ ಮಾಡಿದರು.
ಇಲಾಖೆಯ ಉದ್ದೇಶವೇನು?:
ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವುದು ಈ ಇಲಾಖೆಯ ಉದ್ದೇಶವಾಗಿದೆ.
ಪ್ರಜಾಸೇವಾ ಅಭಿಯಾನ:
ಸರ್ಕಾರಿ ಸೇವೆಗಳು ಹಾಗೂ ಸೌಲಭ್ಯಗಳು ಜನರ ಮನೆಬಾಗಿಲಿಗೇ ತಲುಪಿಸಲು ಈ ಇಲಾಖೆಯಿಂದ ʼಪ್ರಜಾಸೇವಾ ಅಭಿಯಾನʼ ಹಮ್ಮಿಕೊಳ್ಳಲಾಗಿದ್ದು, ನಿಮ್ಮ ಊರಲ್ಲೇ ಸಮಸ್ಯೆಗಳಿಗೆ ನೇರ ಪರಿಹಾರ ಸಿಗಲಿದೆ. ಪ್ರತಿ ಶನಿವಾರ ತಾಲೂಕು / ಹೋಬಳಿ ಮಟ್ಟದಲ್ಲಿ ಜನಪ್ರತಿನಿಗಳ ನೇತೃತ್ವದಲ್ಲಿ ಬೆಳಿಗ್ಗೆ 10ರಿಂದ ಸಂಜೆಯವರೆಗೆ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ.
ಸಭೆಗಳ ವೇಳಾಪಟ್ಟಿ & ವ್ಯವಸ್ಥೆ
- 1 & 3ನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ (ತಾಲೂಕು ಮಟ್ಟ)
- 2& 4ನೇ ಶನಿವಾರ: ಸಳೀಯ ಶಾಸಕರ ನೇತೃತ್ವದಲ್ಲಿ (ತಾಲೂಕು / ಹೋಬಳಿ ಮಟ್ಟ)
ಸರ್ಕಾರದ ಗುರಿ:
- ಸಭೆಯ 15 ದಿನ ಮೊದಲೇ ಮನೆ-ಮನೆಗೆ ಅರ್ಜಿ ನಮೂನೆ ವಿತರಣೆ
- ಸ್ಥಳದಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ವ್ಯವಸ್ಥೆ
- ನಾಗರಿಕರಿಗೆ ಮಾಹಿತಿ ತಲುಪಿಸಲು ಸುಧಾರಿತ AI ಕಾಲ್ ಸೆಂಟರ್ ಸೌಲಭ್ಯ
- ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು
- ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾಯ್ದುಕೊಳ್ಳುವುದು
ಅರ್ಜಿ ವಿಲೇವಾರಿ & ಸಂಪರ್ಕ ವಿವರ:
- ಎಲ್ಲಾ ಅರ್ಜಿಗಳು ಐಜಿಪಿಆರ್‌ಎಸ್ ತಂತ್ರಾಂಶದ ಮೂಲಕ ನೇರವಾಗಿ ಇಲಾಖೆಗಳಿಗೆ ರವಾನೆ
- ಪ್ರತಿ ಬುಧವಾರ ತಾಲೂಕು, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ 3 ಹಂತಗಳ ಪರಿಶೀಲನೆ
- ನಿಗದಿತ ಅವಧಿಯಲ್ಲಿ ಬಗೆಹರಿಯದ ಅರ್ಜಿಗಳು ಸ್ವಯಂಚಾಲಿತವಾಗಿ ಮೇಲಧಿಕಾರಿಗಳಿಗೆ ವರ್ಗಾವಣೆ
- ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಸಹಾಯವಾಣಿ : 1902
- ವೆಬ್‌ಸೈಟ್: ipgrs.karnataka.gov.in
ಯಾವೆಲ್ಲಾ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಬಹುದು?
- ಪಿಂಚಣಿ
- ರಸ್ತೆ ಅಭಿವೃದ್ಧಿ
- ಪೊಲೀಸ್ ಸೇವೆ
- ಪಹಣಿ
- ಕುಡಿಯುವ ನೀರು
- ಖಾಸಗಿ ಉದ್ಯೋಗ
- ವಸತಿ
- ದೇವಸ್ಥಾನ ಜೀರ್ಣೋದ್ಧಾರ
- ಕೆರೆ ತುಂಬಿಸುವ ಯೋಜನೆ
- ಹೊಸ ಪಡಿತರ ಚೀಟಿ
- ಸರಕಾರಿ ಶಾಲೆ ಹಾಗೂ ಅಂಗನವಾಡಿಗಳ ಅಭಿವೃದ್ಧಿ
- ಗ್ಯಾರಂಟಿ ಯೋಜನೆಗಳು
- ಸಾರಿಗೆ
- ಇತರೆ ಸಮಸ್ಯೆಗಳು
- ವಿಬಿಜಿ ರಾಮ್‌ಜಿ
‘ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ’: ಸಿಎಂ
ನಮ್ಮ ದೇಶದಲ್ಲಿ ಪ್ರಭುಗಳ ಕಾಲ ಮುಗಿದು ಪ್ರಜಾಪ್ರಭುತ್ವ ಬಂದಿದೆ, ನನ್ನನ್ನು ‘ನಾಡಿನ ದೊರೆ’ ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ ನನಗೆ ಅತೀವ ಸಂತೋಷವಾಗುತ್ತದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ. ಸರ್ಕಾರದ ಆಡಳಿತವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು ಎನ್ನುವ ಪವಿತ್ರ ಉದ್ದೇಶದಿಂದ ʼಪ್ರಜಾಸೇವಾ ಅಭಿಯಾನ ಕಾರ್ಯಕ್ರಮʼ ರೂಪಿಸಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ ನೂತನ 'ಪ್ರಜಾಸೇವಾ ಇಲಾಖೆ'ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಧಾನಸೌಧ, ಡಿಸಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಕುಳಿತು ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಚಿವರು, ಶಾಸಕರು ಅಥವಾ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ನೇರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆ ಕಾರ್ಯನಿರ್ವಹಿಸಲಿದೆ. ಇದು ಕೇವಲ ಒಂದು ಸರ್ಕಾರಿ ಇಲಾಖೆಯಾಗದೆ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನಪರ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ.
Raksha Bandhan: ಸಿಎಂ ಡಿ.ಕೆ. ಶಿವಕುಮಾರ್ ಕೈಗೆ ಆರ್‌ಎಸ್‌ಎಸ್ ರಾಖಿ ಕಟ್ಟಿದ ಬಿಜೆಪಿ ರಾಜ್ಯಸಭಾ ಸದಸ್ಯ!
ಯಾವುದೇ ರಾಜಕೀಯ, ಧರ್ಮ-ಜಾತಿ ಭೇದವಿಲ್ಲದೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಣ್ಣ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.