ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದು ಕರ್ನಾಟಕ ಬಂದ್‌; ಬಸ್‌ ಸಂಚಾರ ಇರುತ್ತಾ? ಬೆಳಗ್ಗೆಯಿಂದ ಹೇಗಿದೆ ಪರಿಸ್ಥಿತಿ

ಕಾವೇರಿ ನೀರಿನ ಸಮಸ್ಯೆಯನ್ನು ಪ್ರತಿಭಟಿಸಿ ಮತ್ತು ಮೇಕೆದಾಟು, ಮಹದಾಯಿ ಮತ್ತು ಕಳಸಾ-ಬಂಡೂರಿ ಸೇರಿದಂತೆ ಯೋಜನೆಗಳ ಕುರಿತು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿದ್ದು, ಬಂದ್‌ಗೆ ಅಂದುಕೊಂಡಷ್ಟು ಬೆಂಬಲ ಸಿಕ್ಕಿಲ್ಲ.

ಇಂದು ಕರ್ನಾಟಕ ಬಂದ್‌; ಬಸ್‌ ಸಂಚಾರ ಇರುತ್ತಾ?

ಇಂದು ಕರ್ನಾಟಕ ಬಂದ್‌ -

Vishakha Bhat Heggar
Vishakha Bhat Heggar Aug 13, 2026 7:16 AM

ಬೆಂಗಳೂರು: ಕಾವೇರಿ ನೀರಿನ ಸಮಸ್ಯೆಯನ್ನು ಪ್ರತಿಭಟಿಸಿ ಮತ್ತು ಮೇಕೆದಾಟು, ಮಹದಾಯಿ ಮತ್ತು ಕಳಸಾ-ಬಂಡೂರಿ ಸೇರಿದಂತೆ ಯೋಜನೆಗಳ ಕುರಿತು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್​​ಗೆ (Karnataka Bandh) ಕರೆ ನೀಡಲಾಗಿದ್ದು, ಬಂದ್‌ಗೆ ಅಂದುಕೊಂಡಷ್ಟು ಬೆಂಬಲ ಸಿಕ್ಕಿಲ್ಲ. ಕೆಲವು ಸಂಘಟನೆಗಳು ಮಾತ್ರ ಬೆಂಬಲ ಸೂಚಿಸಿವೆ. ಬೆಳಿಗ್ಗೆಯಿಂದಲೇ ಬಿಎಂಟಿಸಿ ಮತ್ತು ಖಾಸಗಿ ಬಸ್​​ಗಳ ಸಂಚಾರವೂ ಎಂದಿನಂತೆ ಆರಂಭವಾಗಿದೆ.

ಕರ್ನಾಟಕ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಮುಖ್ಯವಾಗಿ ನಗರದ ಕೇಂದ್ರ ವಿಭಾಗ, ಪಶ್ಚಿಮ ವಿಭಾಗ, ವಾಯವ್ಯ ವಿಭಾಗ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಮಿಳು ಭಾಷಿಕರ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಲು ನಗರ ವ್ಯಾಪ್ತಿಯ ಎಲ್ಲಾ ಡಿಸಿಪಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸೂಚನೆ ನೀಡಿದ್ದಾರೆ. ಅಲ್ಲದೆ ಬಂದ್​​ ಹೆಸರಲ್ಲಿ ಸರ್ಕಾರಿ ಬಸ್, ಇತರೆ​ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಬಾರದು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟು ಬಂದ್​ ಮಾಡಿಸಬಾರದು. ಒಂದೊಮ್ಮೆ ಆ ರೀತಿ ನಡೆದುಕೊಂಡಲ್ಲಿ ಕ್ರಮದ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ. ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಹೊರಗೆ ಧರಣಿ, ರ್ಯಾಲಿ ನಡೆಸಿದರೆ ವಶಕ್ಕೆ ಪಡೆಯಲು ಪೊಲೀಸ್​ ಸಿಬ್ಬಂದಿಗೆ ಕಮಿಷನರ್ ಸೂಚಿಸಿದ್ದಾರೆ.

ಏನೆಲ್ಲ ಸೇವೆ ಇರುತ್ತದೆ?

ಆಸ್ಪತ್ರೆ, ಔಷಧ ಅಗಡಿ, ಹಾಲು, ಮೊಸರು, ತರಕಾರಿಯಂತಹ ಎಲ್ಲಾ ಅಗತ್ಯ ವಸ್ತುಗಳು ಸಿಗಲಿದೆ.

ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ತೆರೆಯಲಿದೆ.

KSRTC, BMTC ಬಸ್‌ ಸೇವೆಗಳು ಎಂದಿನಂತೆ ಇರಲಿದೆ.

ಖಾಸಗಿ ಬಸ್‌ ಸೇವೆಗಳೂ ಸಹ ಇರಲಿದೆ.

ಕ್ಯಾಬ್‌, ಮೆಟ್ರೋ, ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಹೋಟೆಲ್‌ ಮಾಲೀಕರ ಸಂಘ ಈ ಬಂದ್‌ಗೆ ಬೆಂಬಲ ಸೂಚಿಸಿಲ್ಲದ ಕಾರಣ ಹೋಟೆಲ್‌ಗಳು ಎಂದಿನಂತೆ ತೆರೆದಿರಲಿದೆ.

ಪ್ರತಿಭಟನೆ ಹೇಗಿರಲಿದೆ?

ಬಂದ್​​ಗೆ ಕರೆ ನೀಡಿರುವ ವಾಟಾಳ್​​ ನಾಗರಾಜ್​​, ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್​​​​ಗೆ ಆಗಮಿಸಲಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​​ ನಿಲ್ದಾಣಕ್ಕೆ ಬರಲಿರುವ ಹೋರಾಟಗಾರರು ಬಂದ್​​​​​​ಗೆ ಬೆಂಬಲ ನೀಡುವಂತೆ KSRTC, BMTC ಸಿಬ್ಬಂದಿಗೆ ಮನವಿ ಮಾಡಲಿದ್ದಾರೆ. ನಂತರ ಟೌನ್​ಹಾಲ್​ ಬಳಿ ತೆರಳಿ ಅಲ್ಲಿಂದ ಫ್ರೀಡಂಪಾರ್ಕ್​ವರೆಗೆ ಪ್ರತಿಭಟನಾಮೆರವಣಿಗೆಗೆ ನಿರ್ಧರಿಸಲಾಗಿದೆ. ತೆರೆದ ವಾಹನದಲ್ಲಿ ವಾಟಾಳ್​​ ಪ್ರತಿಭಟನಾ ರ್ಯಾಲಿ ನಡೆಸಲಿದ್ದು, ಟೌನ್​ಹಾಲ್​ನಿಂದ ಹಲಸೂರು ಗೇಟ್​​ ಪೊಲೀಸ್ ಠಾಣೆ, ಮೈಸೂರು ಬ್ಯಾಂಕ್ ಸರ್ಕಲ್, ಓಣಿ ಆಂಜನೇಯ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಫ್ರೀಡಂಪಾರ್ಕ್ ತಲುಪಲಿದೆ.