ಗೃಹಲಕ್ಷ್ಮಿ ಯೋಜನೆ ರೀತಿ ನಮಗೂ 2000 ರೂ. ಕೊಡಿ; ಸಿಎಂ ಡಿಕೆಶಿಗೆ ಬಾಲಕನ ಮನವಿ, ವಿಡಿಯೊ ವೈರಲ್!
ವಿದ್ಯಾರ್ಥಿಯರಿಗೆ ನೀಡಿದಂತೆ ನಮಗೂ ಬಸ್ ಫ್ರೀ ಮಾಡಿದ್ದಾರೆ. ಅದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ತಿಳಿಸ್ತೀವಿ. ಅದೇ ರೀತಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಿದಂತೆ, ನಮಗೂ ನೀಡಿದರೆ ಅನುಕೂಲವಾಗುತ್ತದೆ ಎಂದು ಬಾಲಕ ಮನವಿ ಮಾಡಿದ್ದಾನೆ.
-
ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ನೀಡಿದಂತೆ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಮೊದಲ ಸಚಿವ ಸಂಪುಟ ಸಭೆಯಲ್ಲೇ ನೂತನ ಸಿಎಂ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದರು. ಇದಕ್ಕೆ ಸಂಬಂಧಿಸಿ ಸರ್ಕಾರದಿಂದ ಅಧಿಕೃತ ಆದೇಶ ಕೂಡ ಹೊರಡಿಸಲಾಗಿದೆ. ಈ ನಡುವೆ ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ನೀಡುತ್ತಿರುವಂತೆ ತಮಗೂ ಸೌಲಭ್ಯ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬಾಲಕನೊಬ್ಬ ಮನವಿ ಮಾಡಿರುವುದು ಕಂಡುಬಂದಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೊದಲ್ಲಿ ಏನಿದೆ?
ಸುದ್ದಿ ವಾಹಿನಿಯೊಂದರ ಜತೆ ಬಾಲಕ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿಯರಿಗೆ ನೀಡಿದಂತೆ ನಮಗೂ ಬಸ್ ಫ್ರೀ ಮಾಡಿದ್ದಾರೆ. ಅದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ತಿಳಿಸ್ತೀವಿ. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಯಾವಾಗಲೂ ಜನಜಂಗುಳಿ ಇರುತ್ತದೆ. ನಮಗೆ ಬಸ್‌ನಲ್ಲು ನಿಲ್ಲಲೂ ಜಾಗ ಸಿಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು.
ಇನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಣ್ಣುಮಕ್ಕಳಿಗೆ 2,000 ರೂ. ಸಿಗುವಂತೆ, ನಮಗೂ ಹಣ ನೀಡಿದರೆ ನಮಗೆ ಬಹಳ ನೆರವಾಗುತ್ತದೆ. ನಾವು ಬಡವರಾಗಿದ್ದು, ಆ ಹಣವನ್ನು ಕಾಲೇಜು ಫೀಸ್ ಮತ್ತು ದಿನನಿತ್ಯದ ಖರ್ಚುಗಳಿಗೆ ಬಳಸಲು ಸಹಾಯವಾಗುತ್ತದೆ. ನಾವು ಚೆನ್ನಾಗಿ ಓದಿದರೆ ಮುಂದೆ ನಮ್ಮ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಬಾಲಕ ಹೇಳಿದ್ದಾನೆ.
ಬಾಲಕ ಮಾತನಾಡಿರುವ ವಿಡಿಯೊಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಪ್ರಯಾಣದ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಸರ್ಕಾರ ಆದೇಶ
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ನಡೆದಿದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಗೆ ತಾತ್ವಿಕ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸಲು ನಿರ್ಧರಿಸಲಾಗಿತ್ತು. ರಾಜ್ಯದಲ್ಲಿ ಇನ್ಮುಂದೆ ವಿದ್ಯಾರ್ಥಿನಿಯರಂತೆ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೂ ಕೂಡ ಉಚಿತ ಬಸ್ ಪಾಸ್ ನೀಡಲಾಗುವುದು. ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಇದಕ್ಕಾಗಿ ಅರ್ಜಿ ವಿತರಣೆ ಬಗ್ಗೆ ಸಾರಿಗೆ ಇಲಾಖೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು.
'ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಸ್‌ಗಳಲ್ಲಿ ಪ್ರಯಾಣಿಸುವ ಕರ್ನಾಟಕದ ಎಲ್ಲ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಿಸಲು ಸರ್ಕಾರ ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.