ವಚನ ಗ್ಲೋಬಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಭೂಮಿ, ಅನುದಾನ ಕಲ್ಪಿಸಿ: ಸಿಎಂಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮನವಿ
Vachana Global University: ಬಸವ ತತ್ವವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ವಚನ ಗ್ಲೋಬಲ್ ವಿಶ್ವವಿದ್ಯಾಲಯವನ್ನು ಸಾರ್ವಜನಿಕ ದತ್ತಿಯ ಅಡಿಯಲ್ಲಿ ಸ್ಥಾಪನೆ ಮಾಡಲು ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಮುಂದಾಗಿದೆ. ಇದಕ್ಕಾಗಿ ಅಗತ್ಯ ಅನುದಾನ ಮತ್ತು ಭೂಮಿ ಮಂಜೂರು ಮಾಡಲು ಕೋರಿ ಸಿಎಂ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮನವಿ ಮಾಡಿದೆ.
ಸಿಎಂ ಸಿದ್ದರಾಮಯ್ಯಗೆ ಲಿಂಗಾಯತ ಸ್ವಾಮೀಜಿಗಳ ಮನವಿ. -
ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ ʼವಚನ ಗ್ಲೋಬಲ್ ವಿಶ್ವವಿದ್ಯಾಲಯʼ (Vachana Global University) ಸ್ಥಾಪಿಸುವ ನಿಟ್ಟಿನಲ್ಲಿ ಭಾಲ್ಕಿ ಮಠದ ನಾಡೋಜ ಡಾಕ್ಟರ್ ಬಸವಲಿಂಗ ಪಟ್ಟದೇವರು ಅವರ ನೇತೃತ್ವದ ಮಠಾಧೀಶರ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಶುಕ್ರವಾರ ಭೇಟಿಯಾಗಿ ಚರ್ಚಿಸಿ ಮನವಿ ಸಲ್ಲಿದರು.
ಮನವಿ ಪತ್ರದಲ್ಲಿ ಏನಿದೆ?
ಬಸವಾದಿ ಶರಣರ ಅಶಯಗಳನ್ನು ನಿಜಾರ್ಥದಲ್ಲಿ ಜಾರಿಗೆ ತರಬೇಕಾದರೆ ಇರಬೇಕಾದ ಸ್ವರೂಪ ಏನು ಎಂಬುದನ್ನೂ, ಈ ಹೊತ್ತು ದೇಶದ ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸವಾಲನ್ನೂ ಅವರೆಲ್ಲರೂ ಗಂಭೀರವಾಗಿ ಚರ್ಚಿಸಿದರು. ಕಾಲಾನುಕ್ರಮದಲ್ಲಿ ನಡೆಯುವ ಬೆಳವಣಿಗೆಗಳಿಂದ ಯಾವುದೇ ತೊಂದರೆಯಾಗದಂತೆ ಇಂತಹದೊಂದು ವಿಶ್ವವಿದ್ಯಾಲಯವು ವಿಸ್ತಾರವಾಗಲು ಯಾವ ರೀತಿಯ ರಚನೆ ಹೊಂದಿರಬೇಕು ಎಂಬುದನ್ನು ಗಮನಕ್ಕೆ ತೆಗೆದುಕೊಂಡು, ಈ ವಿಚಾರದ ಬಗ್ಗೆ ಕೆಲವು ನಿಲುವುಗಳಿಗೆ ತಲುಪಲಾಯಿತು.
ಬಸವ ತತ್ವವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನಿಮ್ಮ ಸರ್ಕಾರದ ಬದ್ಧತೆಯನ್ನು ಗೌರವಿಸುತ್ತಾ, ಇಂತಹದೊಂದು ವಿಶ್ವವಿದ್ಯಾಲಯವು ಸಾರ್ವಜನಿಕ ದತ್ತಿಯ ಅಡಿಯಲ್ಲಿ ಸ್ಥಾಪನೆಯಾಗುವುದೇ ಸೂಕ್ತವೆಂಬ ತೀರ್ಮಾನಕ್ಕೆ ಬಂದು ತಮ್ಮ ಮುಂದೆ ಈ ಕೆಳಗಿನ ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ.
- ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ - 'ವಚನ ಗ್ಲೋಬಲ್ ವಿಶ್ವವಿದ್ಯಾಲಯ'ದ ಸ್ಥಾಪನೆಗೆಂದೇ ಪ್ರತ್ಯೇಕ ಸಾರ್ವಜನಿಕ ದತ್ತಿಯನ್ನು ರೂಪಿಸುತ್ತದೆ ಮತ್ತು ಬಸವಾದಿ ಶರಣರ ಆಶಯಗಳಿಗೆ ತಕ್ಕಂತೆ ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅದು ತೆಗೆದುಕೊಳ್ಳುತ್ತದೆ. ಇದಕ್ಕೆ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ನೆರವನ್ನು ಕೊಡಬೇಕೆಂದು ಕೋರುತ್ತೇವೆ.
- ಸಾರ್ವಜನಿಕ ದತ್ತಿಯಡಿ ನಿರ್ಮಾಣವಾಗುವ ಈ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಕಲ್ಪಿಸಲು ವಿಧಾನಮಂಡಲದಲ್ಲಿ ಕಾಯ್ದೆಯ ಅಂಗೀಕಾರದ ಅಗತ್ಯವಿದೆ. ಅದನ್ನು ಮುಂದಿನ ಅಧಿವೇಶನದಲ್ಲಿ ಸಾಧ್ಯವಾಗಿಸಿಕೊಡಬೇಕೆಂದು ಮನವಿ ಮಾಡುತ್ತೇವೆ.
- ಇಡೀ ವಿಶ್ವವಿದ್ಯಾಲಯವು ಸಾಕಾರಗೊಳ್ಳಲು ಭಾರೀ ಪ್ರಮಾಣದ ದತ್ತಿಯ ಅಗತ್ಯವಿದ್ದು, ಅದನ್ನು ಜಗತ್ತಿನಾದ್ಯಂತ ಇರುವ ಬಸವಾನುಯಾಯಿಗಳಿಂದ ಮತ್ತು ಶಿಕ್ಷಣಾಸಕ್ತರಿಂದ ಸಂಗ್ರಹಿಸುವ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತೇವೆ. ಆ ಶಕ್ತಿ ಬಸವಾದಿ ಶರಣರ ಆಶಯಕ್ಕೆ ಇದೆ ಎಂಬ ವಿಶ್ವಾಸ ನಮಗಿದೆ. ಸರ್ಕಾರದ ಸಹಭಾಗಿತ್ವವೂ ಇದ್ದಲ್ಲಿ, ನಮ್ಮ ಉತ್ಸಾಹವು ಇಮ್ಮಡಿಗೊಳ್ಳಲಿದೆ. ಹೀಗಾಗಿ, ವಿಶ್ವವಿದ್ಯಾಲಯದಡಿ ಸ್ಥಾಪಿಸುವ ವಚನ ಸಂಶೋಧನಾ ಕೇಂದ್ರ ಮತ್ತು ಕಾಯಕ ವಿಸ್ತರಣಾ ಕೇಂದ್ರಗಳಿಗೆ ತಲಾ ಐವತ್ತು ಕೋಟಿ ರೂ.ಗಳ ಅನುದಾನ ನೀಡಬೇಕೆಂದು ಕೋರುತ್ತೇವೆ.
- ಈ ವಿಶ್ವವಿದ್ಯಾಲಯಕ್ಕೆ ಕನಿಷ್ಠ 200 ಎಕರೆ ಜಮೀನಿನ ಅಗತ್ಯವಿದ್ದು, ಬಸವಕಲ್ಯಾಣ ಮತ್ತು ಒಟ್ಟು ಬೀದರ್ ಜಿಲ್ಲೆಯಲ್ಲಿ ನೂರು ಎಕರೆಯಷ್ಟು ಜಮೀನನ್ನು ನಾವು ಹೊಂದಿಸುತ್ತೇವೆ. ಸರ್ಕಾರದ ವತಿಯಿಂದ ಬಸವಕಲ್ಯಾಣದಲ್ಲಿ ನೂರು ಎಕರೆಗಳಷ್ಟು ಭೂಮಿಯನ್ನು ಮಂಜೂರು ಮಾಡಬೇಕೆಂದು ಈ ಮೂಲಕ ಕೋರುತ್ತೇವೆ. ಇವೆಲ್ಲವನ್ನೂ ಹೆಚ್ಚು ವಿಳಂಬವಿಲ್ಲದೇ ಆದಷ್ಟು ಬೇಗ ಕಾರ್ಯಸಾಧುವಾಗುವಂತೆ ಮಾಡಲು ತಮ್ಮ ಕಡೆಯಿಂದ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು ಮನವಿ ಮಾಡಲಾಗಿದೆ.
ಕರ್ನಾಟಕವು 'ಸಿಲಿಕಾನ್ ವ್ಯಾಲಿ' ಮಾತ್ರವಲ್ಲ, ಡಿಜಿಟಲ್ ಪ್ರಪಂಚದ 'ಸೃಜನಶೀಲ ರಾಜಧಾನಿ': ಸಿಎಂ
ಈ ಸಂದರ್ಭದಲ್ಲಿ ಗದಗಿನ ಪೂಜ್ಯ ಶ್ರೀ ಜಗದ್ಗುರು ಡಾ. ತೋಟದ ಸಿದ್ದರಾಮಯ್ಯಗಳು, ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಹಂದಿಗುಂದ, ಭಾಲ್ಕಿಯ ಕಿರಿಯ ಶ್ರೀಗಳು, ಕುಂಬಳಗೋಡು ಬಸವ ಮಂಟಪದ ಶ್ರೀಗಳು ಹಾಗೂ ಸಚಿವರಾದ ಎಂ. ಬಿ. ಪಾಟೀಲ್ , ಈಶ್ವರ ಖಂಡ್ರೆ, ಶಾಸಕ ಬಿ.ಆರ್.ಪಾಟೀಲ್ ಉಪಸ್ಥಿತರಿದ್ದರು.