Minister Krishna Byre Gowda: ಕಂದಾಯ ಸೇವೆಗಳ ಸಮರ್ಪಣ ಮಹಾವೇದಿಕೆಯಲ್ಲಿ ಜಿಲ್ಲೆಯ 25 ಸಾವಿರ ಕಂದಾಯ ಸೇವೆಗಳ ವಿತರಣೆ
ಸಾರ್ವಜನಿಕರ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಇಲಾಖೆಗಳ ಪೈಕಿ ಕಂದಾಯ ಇಲಾಖೆಗೆ ಅಗ್ರಸ್ಥಾನವಿದೆ. ಇಲ್ಲಿ ಎಲ್ಲವೂ ಸರಿಯಾಗಿದ್ದರೆ ನಾಗರೀಕರ ಬದುಕಲ್ಲ ಸಂತೋಷ ವಿರಲಿದೆ. ಇಲ್ಲಿ ತಪ್ಪಾದರೆ ಜೀವನ ಪರ್ಯಂತ ರೈತರು ಕೋರ್ಟು ಕಛೇರಿ ತಾಲೂಕು ಆಫೀಸು ಎಸಿ, ಆಫೀಸು, ಡಿ.ಸಿ.ಆಫೀಸು ಎಂದೆಲ್ಲಾ ಅಲೆಯುತ್ತಲೇ ತಮ್ಮ ಬದುಕನ್ನು ಕೊನೆಗಾಣಿಸಿ ಕೊಳ್ಳುತ್ತಾರೆ.
-
ಚಿಕ್ಕಬಳ್ಳಾಪುರ: ಕಳೆದ 1 ಸಾವಿರ ದಿನಗಳಲ್ಲಿ ರಾಜ್ಯ ಸರಕಾರ ಕಂದಾಯ ಇಲಾಖೆಯಲ್ಲಿ ಮೂಡಿಸಿದ ಗುಣಾತ್ಮಕ ಬದಲಾವಣೆಯ ಬಿರುಗಾಳಿಯ ಅನಾವರಣವೇ ಕಂದಾಯ ಸೇವೆ ಗಳ ಗ್ಯಾರೆಂಟಿ ಸಮರ್ಪಣಾ ಸಮಾವೇಶವಾಗಿದೆ. ಇದು ಕೇವಲ ಪ್ರಚಾರದ ಕಾರ್ಯಕ್ರಮ ವಾಗುವ ಬದಲಿಗೆ ಸಾರ್ಥಕ ಸೇವೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಬೆಳಕಾದ ನೈಜದಾಖಲಾತಿಗಳನ್ನು ಒದಗಿಸುವ ಕಳಕಳಿಯ ಕಾರ್ಯಕ್ರಮವಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ(Revenue Minister Krishna Byre Gowda) ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಹಳ್ಳಿ ಸಮೀಪದ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಬಳಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯ ಕಂದಾಯ ಸೇವೆಗಳ ಗ್ಯಾರೆಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಲೆದಾಟಕ್ಕೆ ಮುಕ್ತಿ
ಸಾರ್ವಜನಿಕರ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಇಲಾಖೆಗಳ ಪೈಕಿ ಕಂದಾಯ ಇಲಾಖೆಗೆ ಅಗ್ರಸ್ಥಾನವಿದೆ. ಇಲ್ಲಿ ಎಲ್ಲವೂ ಸರಿಯಾಗಿದ್ದರೆ ನಾಗರೀಕರ ಬದುಕಲ್ಲ ಸಂತೋಷವಿರಲಿದೆ. ಇಲ್ಲಿ ತಪ್ಪಾದರೆ ಜೀವನ ಪರ್ಯಂತ ರೈತರು ಕೋರ್ಟು ಕಛೇರಿ ತಾಲೂಕು ಆಫೀಸು ಎಸಿ, ಆಫೀಸು, ಡಿ.ಸಿ.ಆಫೀಸು ಎಂದೆಲ್ಲಾ ಅಲೆಯುತ್ತಲೇ ತಮ್ಮ ಬದುಕನ್ನು ಕೊನೆಗಾಣಿಸಿಕೊಳ್ಳುತ್ತಾರೆ. ಇದಕ್ಕೆ ಅಂತ್ಯ ಹಾಡಲು ಮುಂದಾಗಿರುವ ಸರಕಾರ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಿಸಿ ಮನೆಯಿಂದಲೇ ದಾಖಲೆ ಪಡೆಯುವ ಯೋಜನೆಗೆ ಚಾಲನೆ ನೀಡಿದೆ ಎಂದರು.
ಇದನ್ನೂ ಓದಿ: Chikkaballapur News: 25 ಸಾವಿರ ಫಲಾನುಭವಿಗಳಿಗೆ ಕಂದಾಯ ಸವಲತ್ತುಗಳ ವಿತರಣೆ: ಜಿಲ್ಲಾಧಿಕಾರಿ ಜಿ.ಪ್ರಭು
ಪಾರದರ್ಶಕ ಆಡಳಿತ!!
ನಮ್ಮ ಸರಕಾರ ಜನಪರ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದು, ದರಖಾಸ್ತು ಪೋಡಿ, ಕಂದಾಯ ಗ್ರಾಮಗಳ ಹಕ್ಕುಪತ್ರ, ಫೌತಿ ಖಾತೆ, ಸಾಮಾಜಿಕ ಭದ್ರತೆಯ ಸೇವೆ ಗಳನ್ನು ಅರ್ಜಿ ಪಡೆಯದೆ, ಫಲಾನುಭವಿಗಳಿಂದ ನಯಾಪೈಸೆ ಹಣ ಪಡೆಯದೆ ನೇರವಾಗಿ ಅವರಿಗೆ ತಲುಪಿಸುವುದು,ಅರ್ಹ ರೈತರ ಹೆಸರಿಗೆ ಕಂದಾಯ ದಾಖಲೆಗಳ ಹಸ್ತಾಂತರ ಮಾಡುವ ಕ್ರಾಂತಿ ಸದ್ದಿಲ್ಲದೆ ಸಾಗಿದೆ.ಇದು ಕಾಂಗ್ರೆಸ್ ಸರಕಾರದ ಕಂದಾಯ ಗ್ಯಾರೆಂಟಿ ಯಾಗಿದೆ ಎಂದರು.
ಶುಕ್ರವಾರ ನಡೆದ ಕಂದಾಯ ಸೇವೆಗಳ ಗ್ಯಾರೆಂಟಿ ಸಮಾವೇಶದಲ್ಲಿ ಜಿಲ್ಲೆಗೆ ಸಂಬಂಧಿಸಿ ದಂತೆ 3 ಸಾವಿರ ದರಖಾಸ್ತು ಪೋಡಿ, ೨ಸಾವಿರ ಕಂದಾಯ ಗ್ರಾಮಗಳ ಹಕ್ಕುಪತ್ರ, 16500 ಫೌತಿ ಖಾತೆ, ಹಾಗೂ 3500 ಸಾಮಾಜಿಕ ಭದ್ರತಾ ಯೋಜನೆಯ ಆದೇಶಪತ್ರ ಒಟ್ಟು 25 ಸಾವಿರ ಕಂದಾಯ ಸೇವೆಗಳ ದಾಖಲೆ ವಿತರಣೆ ಮಾಡಿ ಫಲಾನುಭವಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.
ನುಡಿದಂತೆ ನಡೆ!!
ಈ ವೇಳೆ ಮಾತನಾಡಿದ ಸಚಿವರು 2018ರಿಂದ 2023ತನಕ ಹಿಂದೆ ಇದ್ದ ಬಿಜೆಪಿ ಸರಕಾರ 5 ವರ್ಷದ ಅವಧಿಯಲ್ಲಿ ಕೇವಲ 179 ದರಖಾಸ್ತು ಪೋಡಿ ಮಾಡಿದೆ.ನಮ್ಮ ಸರಕಾರ ಅಧಿಕಾರಕ್ಕೆ ಬಂದ 1 ಸಾವಿರ ದಿನಗಳಲ್ಲಿ ಬರೋಬ್ಬರಿ 3 ಸಾವಿರ ದರಖಾಸ್ತು ಪೋಡಿ ಗಳನ್ನು ಮಾಡಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ನಮ್ಮ ಸರಕಾರ ಕೇವಲ ಮಾತಿನಲ್ಲಿ ಹೇಳುವುದಷ್ಟೆ ಅಲ್ಲ ಕೆಲಸ ಮಾಡಿ ತೋರಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.
ನಕಲಿಗೆ ಬ್ರೇಕ್??
ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ. ಸಾಗುವಳಿ ಜಮೀನುಗಳಿಗೆ ನಕಲಿ ಮಾಡಲು ಆಗದೇ ಇರುವ ವ್ಯವಸ್ಥೆಯಡಿ ಶಾಶ್ವತ ಹಕ್ಕು ಪತ್ರ ನೀಡಲಾಗಿದೆ,ಖುದ್ದು ತಹಸೀಲ್ದಾರರೇ ಫಲಾನುಭವಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಜಮೀನಿನ ಕ್ರಯಪತ್ರ ಮಾಡಿಕೊಟ್ಟು ಬಡ ಸಾಗುವಳಿ ದಾರರನ್ನು ಜಮೀನಿನ ಮಾಲೀಕರನ್ನಾಗಿ ಮಾಡುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ.
ಭೂ ಗ್ಯಾರೆಂಟಿ!!
ತಮ್ಮ ಜಮೀನಿನ ಹಕ್ಕು ದಾಖಲೆಗಾಗಿ ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆದು ಸೊರಗಿ ಸುಸ್ತಾಗಿದ್ದ ರೈತರ ಸಮಸ್ಯೆಗೆ ಅದೇ ತಾಲ್ಲೂಕು ಕಚೇರಿಯ ಮೂಲಕವೇ ಮುಕ್ತಿ ಕಾಣಿಸಿ ಅವರ ಮುಖದಲ್ಲಿ ಭೂ ಮಾಲೀಕತ್ವದ ಸಂತಸದ ಮಂದಹಾಸ ಮೂಡಿಸುವ ಕೆಲಸವನ್ನು ಕಂದಾಯ ಇಲಾಖೆ ಇಂದು ಮಾಡುತ್ತಿದೆ. ಕಂದಾಯ ಗ್ರಾಮಗಳ ಮೂಲಕ ಹಕ್ಕು ಪತ್ರ ಪಡೆದುಕೊಂಡವರು ಎಂದಿಗೂ ಯಾವ ಕಚೇರಿಗೂ ಮತ್ತೆ ಅಲೆಯಬಾರದು ಎಂಬ ದೃಷ್ಟಿಯಿಂದ ಅವರಿಗೆ ಸರ್ಕಾರವೇ ಮನೆಯ ಇ ಸ್ವತ್ತು ನೀಡಲಿದ್ದು, ಅವರೆಂದೂ ತಮ್ಮ ಮಾಲೀಕತ್ವದ ವಿಚಾರದಲ್ಲಿ ಯಾವ ಇಲಾಖೆಯ ಕಡೆಗೂ ತಿರುಗಿ ನೋಡದೆ ನೆಮ್ಮದಿ ಕಾಣುವಂತ ಭೂ ಗ್ಯಾರಂಟಿ ಯೋಜನೆಯನ್ನು ನೀಡಲಾಗುತ್ತಿದೆ ಎಂದರು.
19 ಲಕ್ಷ ಫವತಿ ಖಾತೆ
ರಾಜ್ಯದಲ್ಲಿ ಪ್ರಸ್ತುತದ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಒಟ್ಟು 49 ಲಕ್ಷ ಜಮೀನಿನ ಖಾತೆಗಳು ಮೃತಪಟ್ಟವರ ಹೆಸರಿನಲ್ಲಿದ್ದವು. ಮಾಲೀಕರು ಮೃತಪಟ್ಟರೂ ಅವರ ಹೆಸರಿ ನಲ್ಲೇ ಪಹಣಿಗಳು ಮುಂದುವರೆದು ಅವರ ವಾರಸುದಾರರಿಗೆ ಫವತಿ ಖಾತೆ ಮೂಲಕ ವರ್ಗಾವಣೆಯಾಗದೆ ಉಳಿದು ಬಿಟ್ಟಿದ್ದವು. ಇದನ್ನು ಮನಗಂಡು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಳೆದ 1000 ದಿನಗಳಲ್ಲಿ 18,50,000 ಫವತಿ ಖಾತೆಗಳನ್ನು ಮಾಡಿ ರೈತರ ಮನೆ ಬಾಗಿಲಿಗೇ ತಲುಪಿಸಲಾಗಿದೆ ಎಂದು ಸಚಿವ ತಿಳಿಸಿದರು.
71 ಕೋಟಿ ಪುಟದ ದಾಖಲೆ ಡಿಜಿಟಲೀಕರಣ
ಭೂ ಸುರಕ್ಷಾ ಯೋಜನೆಯಡಿ ಈವರೆಗೆ ರಾಜ್ಯ ರಾಜ್ಯದಲ್ಲಿ 71 ಕೋಟಿ ಪುಟದಷ್ಟು ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಜೊತೆಗೆ ಡಿಜಿಟಲೀಕರಣಗೊಳಿಸಿ ಜನರು ಕಚೇರಿಗೆ ಅಲೆಯದೆ ಬೆರಳ ತುದಿಯಲ್ಲೇ ಆನ್ ಲೈನ್ ಮೂಲಕ ಕಂದಾಯ ದಾಖಲೆಗಳನ್ನು ಪಡೆದುಕೊಳ್ಳುವ ಮಹತ್ತರ ಸುಧಾರಣೆಯನ್ನು ತರಲಾಗಿದೆ. ಇದೊಂದು ಮೌನ ಕ್ರಾಂತಿ ಯಾಗಿ ಪರಿವರ್ತನೆಯಾಗಿ ಜನರು ದಾಖಲೆಗಳನ್ನು ಪಡೆಯುತ್ತಿರುವುದು ಸಾರ್ಥಕ ಭಾವನೆ ಮೂಡಿಸಿದೆ ಎಂದು ತಿಳಿಸಿದರು.
ಹಲವು ದಾಖಲೆಗಳು ಒಂದೇ ಕಡೆ ಲಭ್ಯ ಒಂದೇ ಕಡೆ ಎಲ್ಲಾ ದಾಖಲೆ??
ಪಹಣಿ, ಸ್ಕೆಚ್ ಕಾಪಿ,ಇಸಿ,ಎಂ.ಆರ್ ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಪ್ರಸ್ತುತ ಬೇರೆ ಬೇರೆ ಕಚೇರಿಗಳನ್ನು ಸಂಪರ್ಕಿಸಿ ಪಡೆಯಬೇಕಾಗಿದೆ. ಈ ವ್ಯವಸ್ಥೆಗೆ ಇತಿಶ್ರೀ ಹಾಡಿ ಈ ಎಲ್ಲಾ ದಾಖಲೆಗಳನ್ನು ಆನ್ ಲೈನ್ ಮೂಲಕ ಒಂದೇ ಕಡೆ ಅಥವಾ ಒಂದೇ ಕಚೇರಿಯಲ್ಲಿ ಲಭ್ಯವಾಗುವ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಇಲಾಖೆಯಲ್ಲಿ ಈಗಾಗಲೇ ಕೈಗೊಳ್ಳುತ್ತಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ,ಇಸಿ, ಎಂ.ಆರ್ ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಆನ್ ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಭರವಸೆ ನೀಡಿದರು.
ಇದು ಸಾಧ್ಯ!!!
ಮುಂದಿನ ವರ್ಷದಲ್ಲಿ 30 ಸಾವಿರ ದರಕಾಸ್ತು ಪೋಡಿಗಳನ್ನು, 59 ಸಾವಿರ ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ಜಿಲ್ಲಾಡಳಿತ ರೈತರಿಗೆ ವಿತರಿಸಲಿದೆ. 16500 ಫವತಿ ಖಾತೆಗಳು ಹಾಗೂ 3500 ಸಾಮಾಜಿಕ ಭದ್ರತೆಯ ಮಾಸಾಶನದ ಮಂಜೂರಾತಿ ಪತ್ರಗಳನ್ನು ಇಂದು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕಳೆದ ಎರಡೂ ಮುಕ್ಕಾಲು ವರ್ಷದಲ್ಲಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಕಂದಾಯ ಇಲಾಖೆ ಮಹತ್ತರ ಮತ್ತು ಕ್ರಾಂತಿಕಾರಕ ಬದಲಾವಣೆಗಳನ್ನು ಕಂಡಿದೆ. ದರಕಾಸ್ತು ಪೋಡಿ ಸಮಸ್ಯೆ, ಕಂದಾಯ ಗ್ರಾಮ ಸಮಸ್ಯೆ, ಪೌತಿ ಖಾತೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳೂ ಸೇರಿದಂತೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವಂತಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೆತ್ತಿಕೊಂಡ ಕಂದಾಯ ಸೇವೆಗಳ ವಿಶೇಷ ಅಭಿಯಾನದ ಭಾಗವಾಗಿ ಇಂದು 25 ಸಾವಿರ ಫಲಾನುಭವಿಗಳಿಗೆ ಕಂದಾಯ ಸೇವೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಕಂದಾಯ ಗ್ರಾಮಗಳ 2 ಸಾವಿರ ಫಲಾನು ಭವಿಗಳು, ಫವತಿ ಖಾತೆಯ 16500, ದರಕಾಸ್ತು ಪೋಡಿಯ 3500 ಹಾಗೂ ವಿಧವಾ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಡಿ 3500 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ಕಂದಾಯ ಇಲಾಖೆಯ ಇತಿಹಾಸ ದಲ್ಲಿಯೇ ಇದೊಂದು ಮೈಲಿಗಲ್ಲಿನ ಮತ್ತು ಐತಿಹಾಸಿಕ ಕಾರ್ಯಕ್ರಮ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಳಿಗೆಗಳನ್ನು ತೆರದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಬೃಹತ್ ವೇದಿಕೆಯಲ್ಲಿ ಫಲಾನುಭವಿಗಳನ್ನು ಕೂರಿಸಿ ಕಂದಾಯ ಸೇವೆಗಳ ಶಾಶ್ವತ ದಾಖಲೆಗಳನ್ನು ತಾಲ್ಲೂಕುವಾರು ವಿತರಿಸಿದ್ದು, ವಿಶೇಷ ಗಮನ ಸೆಳೆಯಿತು.
ದರಕಾಸ್ತು ಪೋಡಿ ಹಾಗೂ ಕಂದಾಯ ಗ್ರಾಮ ಹಕ್ಕುಪತ್ರಗಳ ವಿತರಣೆ ಕಾರ್ಯ ಪ್ರಕ್ರಿಯೆ ಯಲ್ಲಿ ಅಹರ್ನಿಶಿ ಶ್ರಮಿಸಿದ ಕಂದಾಯ ಇಲಾಖೆಯ 30 ಸಿಬ್ಬಂದಿಗೆ ಗೌರವಿಸಲಾಯಿತು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರಿಗೆ ಬದಲಿ ಪರಿಹಾರವಾಗಿ ಜಮೀನು ನೀಡುವ ದಾಖಲೆಗಳನ್ನು ರೈತರಿಗೆ ವಿತರಿಸಲಾಯಿತು.
ವಿವಿಧ ಯೋಜನೆಗಳಡಿ 25000 ಫಲಾನುಭವಿಗಳು ಕಂದಾಯ ಸೇವೆಯ ದಾಖಲೆಗಳನ್ನು ಪಡೆಯುವ ಮೂಲಕ ಜಿಲ್ಲೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಹಳ ಅರ್ಥಪೂರ್ಣ ಕಾರ್ಯಕ್ರಮಕ್ಕೆ 25000ಕ್ಕೂ ಹೆಚ್ಚು ಜನರು ಸಾಕ್ಷಿಯಾದರು. ಕಾರ್ಯಕ್ರಮ ಬಹಳ ಯೋಜಿತ ರೀತಿಯಲ್ಲಿ ಜರುಗಿದ್ದಕ್ಕೆ ಕಂದಾಯ ಸಚಿವರು ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್.ಸಂಪಂಗಿ, ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಗಮದ ಅಧ್ಯಕ್ಷ ಬಿ.ಜಿ. ಗಣೇಶ್, ಶಾಸಕರುಗಳಾದ, ಪ್ರದೀಪ್ ಈಶ್ವರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ಡಾ. ಹೆಚ್.ನರಸಿಂಹಯ್ಯ ವಿಜ್ಞಾನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್ ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ವೆಂಕಟರಾಜ, ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿ ಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಾ.ಡಿ.ಹೆಚ್.ಅಶ್ವಿನ್, ಎಲ್ಲಾ ತಾಲ್ಲೂಕು ಗಳ ತಹಸೀಲ್ದಾರ್ ಗಳು, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು, ಸಾರ್ವಜನಿಕರು ಇದ್ದರು.