Fact Check: ಕೇಂದ್ರ ಸರ್ಕಾರದ 2.5 ಲಕ್ಷ ರುಪಾಯಿ ಮಾಸಿಕ ಆದಾಯದ ಭರವಸೆ; ವೈರಲ್ ಸುದ್ದಿಯ ಅಸಲಿಯತ್ತೇನು?
ಕೇಂದ್ರ ಸರ್ಕಾರ ಹೊಸ ಮಾಸಿಕ ಆದಾಯದ ಯೋಜನೆಯೊಂದನ್ನು ಪ್ರಕಟಿಸಿದೆ ಎನ್ನುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಏನಿದು ಯೋಜನೆ? ಈ ವೈರಲ್ ವಿಡಿಯೊದ ಅಸಲಿಯತ್ತೇನು ಎಂಬುದರ ಕುರಿತು ಪತ್ರಿಕಾ ಮಾಹಿತಿ ಬ್ಯೂರೋ ನೀಡಿರುವ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ () ಅವರು ಮಾಸಿಕ 2.5 ಲಕ್ಷ ರೂಪಾಯಿ ಭರವಸೆ ನೀಡುವ ಯೋಜನೆಯ ಕುರಿತು ಪ್ರಚಾರ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ನಕಲಿ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಲಾಗಿದೆ ಎಂಬುದಾಗಿ ಪತ್ರಿಕಾ ಮಾಹಿತಿ ಬ್ಯೂರೋ ತಿಳಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ಘಟಕವು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಡಿಯೊ ಕುರಿತು ಸತ್ಯ ಪರಿಶೀಲನೆ ನಡೆಸಿ ಇದೊಂದು ನಕಲಿ ವಿಡಿಯೊ ಎಂಬುದಾಗಿ ಘೋಷಿಸಿದೆ.
ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪತ್ರಿಕಾ ಮಾಹಿತಿ ಬ್ಯೂರೋ ನಡೆಸಿರುವ ಸತ್ಯ ಪರಿಶೀಲನೆ ವರದಿಯನ್ನು ಪ್ರಕಟಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಹಣಕಾಸು ಸಚಿವರ ವಿಡಿಯೊವನ್ನು ಕೃತಕ ಬುದ್ಧಿಮತ್ತೆ ಬಳಸಿ ಡಿಜಿಟಲ್ ಮೂಲಕ ತಯಾರಿಸಲಾಗಿದೆ. ಇದರಲ್ಲಿ ಸಚಿವರು ಮಾಸಿಕ ಆದಾಯದ ಯೋಜನೆಯನ್ನು ಅನುಮೋದಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದಾಗಿ ಹೇಳಿದೆ.
ವೈರಲ್ ಸುದ್ದಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಗರಿಕರಿಗೆ ಹೊಸ ಹೂಡಿಕೆ ಯೋಜನೆಯನ್ನು ಘೋಷಿಸಿದ್ದಾರೆ. ಇದರಲ್ಲಿ 22,000 ರೂಪಾಯಿನಿಂದ ಆರಂಭಿಕ ಹೂಡಿಕೆ ಮಾಡಿ 2.5 ಲಕ್ಷ ರೂಪಾಯಿ ಖಚಿತ ಮಾಸಿಕ ಆದಾಯವನ್ನು ಗಳಿಸಬಹುದು ಎಂಬುದಾಗಿ ಹೇಳಿದ್ದಾರೆ.
ಇದು ಸುಳ್ಳು ಸುದ್ದಿ ಎಂದು ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನೆ ವಿಭಾಗವು ಸ್ಪಷ್ಟಪಡಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ಭಾರತ ಸರ್ಕಾರ ಅಂತಹ ಯಾವುದೇ ಹೂಡಿಕೆ ಅಥವಾ ಯೋಜನೆಯನ್ನು ಅನುಮೋದಿಸಿಲ್ಲ. ಆನ್‌ಲೈನ್‌ಗಳಲ್ಲಿ ಪ್ರಸಾರವಾಗುವ ಇಂತಹ ಸುಲಭ ಹಣಗಳಿಸುವ ವಂಚನೆಗಳಿಗೆ ಬಲಿಯಾಗದಿರಿ ಎಂದು ಎಚ್ಚರಿಕೆಯನ್ನು ನೀಡಿದೆ.
💰 Beware of Online Investment Scams ⚠️
— PIB Fact Check (@PIBFactCheck) August 3, 2026
A #Facebook advertisement is circulating an AI-generated video of Union Finance Minister @nsitharaman falsely promoting an investment scheme that promises an assured income of ₹5 lakh per week & upto ₹22 lakh month on an initial… pic.twitter.com/06dyzl8rjv
ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನೆ ಘಟಕವು ಈ ಕುರಿತು ಜನರನ್ನು ಎಚ್ಚರಿಸಿದ್ದು, ವಂಚಕರು ಹೆಚ್ಚಾಗಿ ಸಾರ್ವಜನಿಕ ವ್ಯಕ್ತಿಗಳ ಹಳೆ ವಿಡಿಯೊಗಳನ್ನು ಬಳಸಿಕೊಂಡು ಹೂಡಿಕೆ ಯೋಜನೆಗೆ ಜನರನ್ನು ಆಹ್ವಾನಿಸಿ ಮೋಸ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
ಭಾರತ ಸರ್ಕಾರಕ್ಕೆ ಸಂಬಂಧಿಸಿದ ಅನುಮಾನಾಸ್ಪದ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದರೆ ತಕ್ಷಣವೇ ಪಿಐಬಿ ಫ್ಯಾಕ್ಟ್ ಚೆಕ್‌ಗೆ ಅಧಿಕೃತ ವಾಟ್ಸಾಪ್ ಸಂಖ್ಯೆ ಅಥವಾ ಇಮೇಲ್ ಮೂಲಕ ವರದಿ ಮಾಡಬಹುದು. ಇದು ಇತರರಿಗೂ ಸತ್ಯವನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಇತರರು ಮೋಸ ಹೋಗದಂತೆ ತಡೆಯಬಹುದಾಗಿದೆ ಎಂದು ಹೇಳಿದೆ.
2025ರ ನವೆಂಬರ್‌ನಲ್ಲಿ ಇದೇ ರೀತಿಯ ಡೀಪ್‌ಫೇಕ್ ವಂಚನೆ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಇದರಲ್ಲಿ ನಿರ್ಮಲಾ ಸೀತಾರಾಮನ್ ಅವರ ನಕಲಿ ವಿಡಿಯೊ ನೋಡಿ ಮೋಸಕ್ಕೆ ಒಳಗಾದ ಗೃಹಿಣಿಯೊಬ್ಬರು 43.4 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಎಐ-ರಚಿತ ವಿಡಿಯೊ ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಂಡರು.
ಬಳಿಕ ಟ್ರೇಡಿಂಗ್ ಸಂಸ್ಥೆಯೊಂದು ಅವರನ್ನು ಸಂಪರ್ಕಿಸಿ ಹೂಡಿಕೆಗೆ ಆಹ್ವಾನಿಸಿದರು. ಅವರು ತಮ್ಮ ಉಳಿತಾಯದ ಎಲ್ಲಾ ಹಣವನ್ನು ಹೂಡಿಕೆ ಮಾಡಿದರು. ಬಳಿಕ ವಂಚಕರು ಆ್ಯಪ್ ಮೂಲಕ ಸಾಲ, ಚಿನ್ನಾಭರಣಗಳನ್ನು ಒತ್ತೆ ಇಡುವಂತೆ ಒತ್ತಾಯಿಸಿದ್ದು, ಇದರಿಂದ ಆಕೆ ಹೂಡಿಕೆ ಯೋಜನೆಯಿಂದ ಹಣ ಹಿಂದೆ ಪಡೆಯಲು ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಬ್ಯಾಂಕ್ ಆಕೆಯ ಅನಧಿಕೃತ ವಹಿವಾಟುಗಳನ್ನು ನೋಡಿ ಖಾತೆಯನ್ನು ಸ್ಥಗಿತಗೊಳಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ಆಕೆಗೆ ಅರಿವಾಗಿತ್ತು. ಬಳಿಕ ಪೂರ್ವ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.