''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
Dadasaheb Phalke Award: 'ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ-ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್ ನಾಗ್‌ಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ರೀತಿ ಇದು. ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ಅನಂತ್ ನಾಗ್ (ಸಂಗ್ರಹ ಚಿತ್ರ) -
ದೆಹಲಿ, ಸೆ. 16: ಸ್ಯಾಂಡಲ್‌ವುಡ್‌ನ ಶ್ರೇಷ್ಠ ನಟರಲ್ಲಿ ಒಬ್ಬರಾದ, ಸಹಜಾಭಿನಯದ ಮೂಲಕ ಚಿತ್ರಪ್ರೇಮಿಗಳ ಮನಗೆದ್ದ ಅನಂತ್ ನಾಗ್ (Anant Nag) ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಘೋಷಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆ ಪರಗಣಿಸಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ. ಇದೀಗ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಿಶೇಷ ಎಂದರೆ ಮೋದಿ ಕನ್ನಡದಲ್ಲೇ ಶುಭಾಶಯ ತಿಳಿಸಿದ್ದಾರೆ. ''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ ಎಂದಿದ್ದಾರೆ.
ʼʼದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ. ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೇಂದ್ರ ಸಚಿವ ಎಚ್.ಡಿ. ಕಮಾರಸ್ವಾಮಿ ಮುಂತಾದ ರಾಜಕೀಯ ನಾಯಕರೂ ಶುಭಾಶಯ ಹೇಳಿದ್ದಾರೆ.
ಮೋದಿ ಅವರ ಎಕ್ಸ್ ಪೋಸ್ಟ್:
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ. ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
— Narendra Modi (@narendramodi) September 16, 2026
ಅನಂತ್ ನಾಗ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಆಯೋಜಿಸಲಾಗುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು. 78 ವರ್ಷದ ಅನಂತ್ ನಾಗ್ ಅವರಿಗೆ 2025ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು.
ಹಿರಿಯ ನಟ ಅನಂತ್ ನಾಗ್‌ಗೆ 2024ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಗರಿ
ಕನ್ನಡ ಚಲನಚಿತ್ರದ ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಅನಂಗ್ ನಾಗ್ ಕೂಡ ಒಬ್ಬರು. ಅವರು ನಟರಾಗಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಲೇಖಕರಾಗಿಯೂ ಅನಂತ್ ನಾಗ್ ದೊಡ್ಡ ಹೆಸರು ಮಾಡಿದ್ದಾರೆ. 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.
5 ದಶಕಗಳಿಂದ ಕಲಾ ಸೇವೆ
ಅನಂತ್ ನಾಗ್ 50 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ತೆರೆಕಂಡ ʼಸಂಕಲ್ಪʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಅನಂತ್ ನಾಗ್ ಸುಮಾರು 4 ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿ, ಈ ವರ್ಷ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.
ಪದ್ಮ ಭೂಷಣ ಪ್ರಶಸ್ತಿ ಘೋಷಣೆ; ಹಿರಿಯ ನಟ ಅನಂತ್ ನಾಗ್ ಹೇಳಿದ್ದೇನು?
ಪ್ರಮುಖ ಚಿತ್ರಗಳು
ʼಅರುಣರಾಗʼ, ʼಅನುಪಮʼ, ʼಮುಳ್ಳಿನ ಗುಲಾಬಿʼ, ʼಹೊಸ ನೀರುʼ, ʼಬಾಡದ ಹೂʼ, ʼಜನ್ಮಜನ್ಮದ ಅನುಬಂಧʼ, ʼಕೆಜಿಎಫ್ʼ, ʼಗೋಧಿ ಬಣ್ಣ ಸಾದಾರಣ ಮೈಕಟ್ಟುʼ ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಅನಂತ್ ನಾಗ್ ನಟಿಸಿದ ಪ್ರಮುಖ ಚಿತ್ರಗಳು. ನಾಯಕನಾಗಿ ಹಾಸ್ಯ ಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ʼಅಂಕುರ್ʼ, ʼನಿಶಾಂತ್ʼ, ʼಮಂಥನ್, ʼಭೂಮಿಕಾʼ ಮುಂತಾದ ಹಿಂದಿ ಸಿನಿಮಾಗಳಲ್ಲೂ ಅನಂತ್ ನಾಗ್ ಅಭಿನಯಿಸಿದ್ದಾರೆ.
ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.