ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Internal Reservation: ಒಳ ಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದಲೇ ಅಡ್ಡಿ: ಪದ್ಮಶ್ರೀ ಮಂದಕೃಷ್ಣ ಮಾದಿಗ ಆರೋಪ

ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಒಂದೇ ಸಮಿತಿ ವರದಿ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಿದೆ. ಆದರೆ ಕರ್ನಾಟಕದಲ್ಲಿ ಮೂರು ಸಮಿತಿಗಳ ವರದಿಗಳಿದ್ದರೂ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವಿರುದ್ಧದ ನಿಲುವು ತಳೆಯುತ್ತಿದೆ ಎಂದು ಪದ್ಮಶ್ರೀ ಮಂದಕೃಷ್ಣ ಮಾದಿಗ ಕಿಡಿಕಾರಿದ್ದಾರೆ.

ಒಳ ಮೀಸಲಾತಿ ಜಾರಿಗೆ ಮಲ್ಲಿಕಾರ್ಜುನ ಖರ್ಗೆ ಅಡ್ಡಿ: ಮಂದಕೃಷ್ಣ ಮಾದಿಗ

ಮಲ್ಲಿಕಾರ್ಜುನ ಖರ್ಗೆ ಮತ್ತು ಪದ್ಮಶ್ರೀ ಮಂದಕೃಷ್ಣ ಮಾದಿಗ -

Prabhakara R
Prabhakara R Mar 12, 2026 9:49 PM

ಬೆಂಗಳೂರು: ಎಸ್‌ಸಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಜಾರಿ ಮಾಡಲು ವಿಳಂಬ ಮಾಡುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಆಗಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ನಿಯಂತ್ರಿಸುತ್ತಿರುವುದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಖರ್ಗೆ ಅವರು ಹೊಲೆಯ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಕಾಂಗ್ರೆಸ್ ಹೈಕಮಾಂಡ್ ಒಳ ಮೀಸಲಾತಿಯನ್ನು (SC Internal Reservation) ಜಾರಿಗೆ ತರಲು ಅವಕಾಶ ನೀಡುತ್ತಿಲ್ಲ ಎಂದು ಮಾದಿಗರ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ಸಂಸ್ಥಾಪಕ ಅಧ್ಯಕ್ಷ ಪದ್ಮಶ್ರೀ ಮಂದಕೃಷ್ಣ ಮಾದಿಗ (Manda Krishna Madiga) ಆರೋಪಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಒಳ ಮೀಸಲಾತಿ ಹೋರಾಟ ಸಮಿತಿ' ನೇತೃತ್ವದಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಕರ್ನಾಟಕಲ್ಲಿ ಸಿದ್ದರಾಮಯ್ಯ ಸರ್ಕಾರವು ಬಲಗೈ (ಹೊಲೆಯ) ವರ್ಗಕ್ಕೆ ಸೇರಿದ ಪರಮೇಶ್ವರ್, ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರ ಪ್ರಭಾವದಿಂದ ಒಳ ಮೀಸಲಾತಿ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಿದೆ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ ಒಳ ಮೀಸಲಾತಿ ಹೋರಾಟಗಾರ ಮಂದಕೃಷ್ಣ ಮಾದಿಗ ಆರೋಪಿಸಿದ್ದಾರೆ.

ಕರ್ನಾಟಕದ ಒಳ ಮೀಸಲಾತಿ ಹೋರಾಟಗಾರರು ಒಂದೇ ವೇದಿಕೆಗೆ ಬಂದು, ಸಮುದಾಯದ ಹಕ್ಕುಗಳಿಗಾಗಿ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಸಂತೋಷದ ವಿಷಯ. ಆದರೆ ಇಷ್ಟೊಂದು ಒತ್ತಡವಿದ್ದರೂ ಕರ್ನಾಟಕ ಸರ್ಕಾರ ಒಳ ಮೀಸಲಾತಿಯನ್ನು ಸರಿಯಾಗಿ ಜಾರಿಗೊಳಿಸುತ್ತಿಲ್ಲ. ಕರ್ನಾಟಕದಲ್ಲಿ ಹೊಲೆಯ ಸಮುದಾಯವು ಶೇ. 15ರಷ್ಟು ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಅನುಭವಿಸುತ್ತಿದೆ. ಇದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. 1965ರಲ್ಲಿ ಕೇಂದ್ರ ಸರ್ಕಾರದ ಲೋಕೂರ್ ಸಮಿತಿಯು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಶಿಫಾರಸು ಮಾಡಿತ್ತು. ಆದರೆ ಅಂದಿನಿಂದ ಕಾಂಗ್ರೆಸ್‌ನಲ್ಲಿ ಹೊಲೆಯ ಸಮುದಾಯದ ಪ್ರಾಬಲ್ಯವಿದ್ದ ಕಾರಣ, ಅದನ್ನು ಜಾರಿಯಾಗದಂತೆ ತಡೆಯಲಾಗಿದೆ ಎಂದು ತಿಳಿಸಿದರು.

ಮಂದಕೃಷ್ಣ ಮಾದಿಗ ಅವರ ಭಾಷಣದ ವಿಡಿಯೊ



1996ರಲ್ಲಿ ಆರಂಭವಾದ ಹೋರಾಟ ಇಂದು ಮಾದಿಗ ಮೀಸಲಾತಿಯನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ನಮ್ಮ ಹೋರಾಟದಲ್ಲಿ ನ್ಯಾಯ ಮತ್ತು ಧರ್ಮವಿದೆ. ಎಲ್ಲಾ ರಾಜ್ಯಗಳಲ್ಲೂ ಒಳ ಮೀಸಲಾತಿಗೆ ಒಲವು ತೋರಿದ್ದಾರೆ. ಕರ್ನಾಟಕದಲ್ಲೂ ಎಲ್ಲಾ ಪಕ್ಷಗಳು ಒಳ ಮೀಸಲಾತಿಗೆ ಬೆಂಬಲ ನೀಡುತ್ತೇವೆ ಎನ್ನುತ್ತಿವೆ. ನಮ್ಮ ಹೋರಾಟದಲ್ಲಿ ನ್ಯಾಯವಿಲ್ಲದಿದ್ದರೆ ಈ ಪಕ್ಷಗಳು ಯಾಕೆ ಬೆಂಬಲಿಸುತ್ತಿದ್ದವು? ಎಂದು ಪ್ರಶ್ನಿಸಿದ್ದಾರೆ.

ಹರಿಯಾಣದಲ್ಲಿ ಆಗಸ್ಟ್ 2024ರ ತೀರ್ಪಿನ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆಂಧ್ರಪ್ರದೇಶದಲ್ಲಿ ಈ ಹಿಂದೆ ಚಂದ್ರಬಾಬು ಸರ್ಕಾರ ಒಳ ಮೀಸಲಾತಿ ಜಾರಿಗೆ ಆದೇಶಿಸಿತ್ತು, ಆದರೆ ಹೊಲೆಯ ಸಮುದಾಯದವರು ಅದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2004ರಲ್ಲಿ ಯುಪಿಎ ಸರ್ಕಾರವು ಒಳ ಮೀಸಲಾತಿ ಪರವಾಗಿ ಅಫಿಡವಿಟ್ ಸಲ್ಲಿಸದ ಕಾರಣ ಸುಪ್ರೀಂ ಕೋರ್ಟ್ ವಿರುದ್ಧವಾಗಿ ತೀರ್ಪು ನೀಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಿರಂತರವಾಗಿ ಒಳ ಮೀಸಲಾತಿ ವಿರುದ್ಧದ ನಿಲುವು ತಳೆದಿತ್ತು ಮತ್ತು ಉಷಾ ಮೆಹ್ರಾ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸುವ ಮೂಲಕ ಕಾಲಹರಣ ಮಾಡಿತ್ತು ಎಂದು ಆರೋಪಿಸಿದರು.

ಆಂಧ್ರಪ್ರದೇಶದಲ್ಲಿ 2023ರಲ್ಲಿ 'ಮಾದಿಗ ವಿಶ್ವರೂಪಂ' ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒಳ ಮೀಸಲಾತಿ ಪರ ಅಫಿಡವಿಟ್ ಸಲ್ಲಿಸಲು ಒತ್ತಡ ಹೇರಲಾಯಿತು. ಅದರಂತೆ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಒಳ ಮೀಸಲಾತಿ ಪರ ಅಫಿಡವಿಟ್ ಸಲ್ಲಿಸಿತು, ಇದರಿಂದಾಗಿ ಸುಪ್ರೀಂ ಕೋರ್ಟ್ ಸಕಾರಾತ್ಮಕ ತೀರ್ಪು ನೀಡಲು ಸಾಧ್ಯವಾಯಿತು. ರಾಜೀವ್ ರಂಜನ್ ಮಿಶ್ರಾ ಸಮಿತಿ ರಚನೆಯ ಮೂಲಕ ಆಂಧ್ರದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ತೆಲಂಗಾಣದಲ್ಲೂ ಜಾರಿಯಾಗಿದೆ. ತಮಿಳುನಾಡು ಬಹಳ ಹಿಂದೆಯೇ ಅರುಂಧತಿಯರ್ ಸಮುದಾಯಕ್ಕೆ ಶೇ. 3ರಷ್ಟು ಒಳ ಮೀಸಲಾತಿ ನೀಡಿದೆ. ಎಲ್ಲಾ ರಾಜ್ಯಗಳಲ್ಲಿ ಸಮಸ್ಯೆ ಇತ್ಯರ್ಥವಾಗುವ ಹಂತಕ್ಕೆ ಬಂದಿದೆ, ಆದರೆ ಕರ್ನಾಟಕದಲ್ಲಿ ಮಾತ್ರ ಪ್ರಕ್ರಿಯೆ ನಿಧಾನಗತಿಯಲ್ಲಿರುವುದು ನನಗೆ ನೋವುಂಟು ಮಾಡಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಕರ್ನಾಟಕದಲ್ಲಿ ಎ.ಜೆ. ಸದಾಶಿವ ಆಯೋಗ ಒಳ ಮೀಸಲಾತಿ ಪರ ವರದಿ ನೀಡಿದೆ. ಮಧುಸ್ವಾಮಿ ಸಮಿತಿಯೂ ವರದಿ ನೀಡಿದೆ. ಇವೆಲ್ಲವೂ ಸುಪ್ರೀಂ ಕೋರ್ಟ್ ತೀರ್ಪಿಗಿಂತ ಮೊದಲೇ ಆಗಿದ್ದವು. ಈಗ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯೂ ಒಳ ಮೀಸಲಾತಿ ಜಾರಿಗೆ ವರದಿ ನೀಡಿದೆ. ಹೀಗಿದ್ದರೂ ಸರ್ಕಾರ ಅದನ್ನು ಯಾಕೆ ಜಾರಿಗೊಳಿಸುತ್ತಿಲ್ಲ?" ಎಂದು ಪ್ರಶ್ನಿಸಿದರು.

SC Internal Reservation: ಒಳ ಮೀಸಲಾತಿಯಡಿ ಹುದ್ದೆಗಳ ಭರ್ತಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ

"ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಒಂದೇ ಸಮಿತಿ ವರದಿ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಿದೆ. ಆದರೆ ಕರ್ನಾಟಕದಲ್ಲಿ ಮೂರು ಸಮಿತಿಗಳ ವರದಿಗಳಿದ್ದರೂ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವಿರುದ್ಧದ ನಿಲುವು ತಳೆಯುತ್ತಿದೆ. ಇಂದು ಕರ್ನಾಟಕ ಕಾಂಗ್ರೆಸ್ ಹೊಲೆಯ (ಛಲವಾದಿ) ಸಮುದಾಯದ ಪ್ರಭಾವಕ್ಕೆ ಹೆದರುತ್ತಿದೆ. ಆದರೆ ಅವರು ಮಾದಿಗ ಸಮುದಾಯದ ಆಕ್ರೋಶ ಮತ್ತು ನೋವನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.