VB-G RAM G act: ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಗ್ರಾಮೀಣ ಆಸ್ತಿ ಸೃಜನೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ' (MGNREGA) ಯನ್ನು ಈ ಹಿಂದಿನಂತೆ ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ. -
ಬೆಂಗಳೂರು, ಫೆ.4: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರುಜಾರಿ ಮಾಡಬೇಕು ಎಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ನಿರ್ಣಯವನ್ನು ವಿಪಕ್ಷ ಶಾಸಕರ ವಿರೋಧದ ನಡುವೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ.
ಮನರೇಗಾ ಪರವಾಗಿ, ವಿಬಿ ಜಿ ರಾಮ್ ಜಿ ವಿರುದ್ಧವಾಗಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ನೆನ್ನೆ ನಿರ್ಣಯ ಮಂಡಿಸಿದ್ದರು. ಈ ನಿರ್ಣಯವನ್ನು ಇಂದು ಸ್ಪೀಕರ್ ಮತಕ್ಕೆ ಹಾಕಿದ್ದರು. ಧ್ವನಿ ಮತದ ಮೂಲಕ ಖಂಡನಾ ನಿರ್ಣಯ ಅಂಗೀಕಾರವಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು. ನಿರ್ಣಯ ಅಂಗೀಕಾರವಾದ ಬಳಿಕ ಅನಿರ್ದಿಷ್ಟಾವಧಿಗೆ ಕಲಾಪವನ್ನು ಸ್ಪೀಕರ್ ಮುಂದೂಡಿದರು.
ವಿಬಿ ಜಿ ರಾಮ್ ಜಿ ರದ್ದುಗೊಳಿಸಬೇಕು: ಸಿಎಂ
ಕರ್ನಾಟಕ ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ, ಒಕ್ಕೂಟ ತತ್ವಕ್ಕೆ ವಿರೋಧವಾಗಿರುವ ಮತ್ತು ರಾಜ್ಯದ ಬೊಕ್ಕಸಕ್ಕೆ ತೀವ್ರ ಹೊರೆ ಉಂಟುಮಾಡುವ 'ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-GRAM-G)' ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು. ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿರುವ ಗ್ರಾಮ ಪಂಚಾಯತಿಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿರುವ ಈ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮಂಗಳವಾರ ತಿಳಿಸಿದ್ದರು.
ಬಡವರ ಸಂವಿಧಾನಬದ್ಧ ಕೆಲಸದ ಹಕ್ಕನ್ನು ವಿಬಿ ಜಿ ರಾಮ್ ಜಿ ಕಸಿದುಕೊಂಡಿದೆ: ಸಿಎಂ ಕಿಡಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ 'ಹಕ್ಕು' ಹಾಗೂ 'ಬೇಡಿಕೆ ಆಧಾರಿತ'ವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಹಂಗಿಗೆ ಒಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದೆಹಲಿಯ ದಂತ ಗೋಪುರದಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ, ಗ್ರಾಮಸಭೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದ್ದು, ಉಳಿದ ಕಡೆಗಳಲ್ಲಿ ಉದ್ಯೋಗದ ಹಕ್ಕನ್ನು ನಿರಾಕರಿಸಲಾಗಿದೆ.
ಗ್ರಾಮೀಣ ಆಸ್ತಿ ಸೃಜನೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ' (MGNREGA) ಯನ್ನು ಈ ಹಿಂದಿನಂತೆ ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಈ ಸದನವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ." ಆದುದರಿಂದ, ಕೇಂದ್ರ ಸರ್ಕಾರಕ್ಕೆ ಹಾಗೂ ಗೌರವಾನ್ವಿತ ರಾಷ್ಟ್ರಪತಿಗಳಿಗೆ ನಿರ್ಣಯವನ್ನು ಕಳುಹಿಸಿಕೊಡಬೇಕೆಂದು ಈ ಸದನವು ನಿರ್ಣಯಿಸುತ್ತದೆ ಎಂದು ಸಿಎಂ ಹೇಳಿದ್ದರು.