Congress Protest: ಬಂಧನಕ್ಕೆ ಹೆದರಲ್ಲ; ಕೇಂದ್ರ ಸರ್ಕಾರ ಯುವಜನತೆಯ ಹೋರಾಟ ಹತ್ತಿಕ್ಕುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕಿಡಿ
ದೆಹಲಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಂಗಳವಾರ ಕಾಂಗ್ರೆಸ್ ಪ್ರತಿಭಟನೆ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯುವ ಸಮೂಹ ಈ ದೇಶದ ಭವಿಷ್ಯ. ಹೋರಾಟ ಅವರ ಹಕ್ಕು. ಅವರಿಗೆ ರಕ್ಷಣೆ ನೀಡುವುದು ನಮ್ಮ ಸಂವಿಧಾನದ ಹಕ್ಕು ಅವರು ತಿಳಿಸಿದ್ದಾರೆ.
-
ದೆಹಲಿ, ಜುಲೈ 21: "ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಈ ದೇಶದ ಯುವ ಜನತೆಯ ಭವಿಷ್ಯಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಯುವಜನತೆಯ ಹೋರಾಟ ಹತ್ತಿಕ್ಕುತ್ತಿರುವುದು ದುರದೃಷ್ಟಕರ. ನಮಗೆ ನ್ಯಾಯ ಬೇಕು. ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ" ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಗ್ರಹಿಸಿದರು.

ದೆಹಲಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆ ಬಳಿಕ ಶಿವಕುಮಾರ್ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದರು. "ಯುವ ಸಮೂಹ ಈ ದೇಶದ ಭವಿಷ್ಯ. ಹೋರಾಟ ಅವರ ಹಕ್ಕು. ಅವರಿಗೆ ರಕ್ಷಣೆ ನೀಡುವುದು ನಮ್ಮ ಸಂವಿಧಾನದ ಹಕ್ಕು. ನಾವೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ಈಗ ಬಲವಂತವಾಗಿ ಅವರು ನಮ್ಮನ್ನು ತಡೆಯಲು, ಬಂಧಿಸಲು ಪ್ರಯತ್ನಿಸುತ್ತಿದ್ದಾರೆ" ಎಂದರು.
𝐖𝐞 𝐬𝐭𝐚𝐧𝐝 𝐰𝐢𝐭𝐡 𝐬𝐭𝐮𝐝𝐞𝐧𝐭𝐬, 𝐚𝐧𝐝 𝐰𝐞 𝐰𝐢𝐥𝐥 𝐟𝐢𝐠𝐡𝐭 𝐮𝐧𝐭𝐢𝐥 𝐞𝐯𝐞𝐫𝐲 𝐬𝐭𝐮𝐝𝐞𝐧𝐭 𝐠𝐞𝐭𝐬 𝐣𝐮𝐬𝐭𝐢𝐜𝐞. pic.twitter.com/GeyWVnSIm9
— DK Shivakumar (@DKShivakumar) July 21, 2026
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ; ಪ್ರಧಾನಿ ನಿವಾಸದ ಮುಂದೆ ಹೈಡ್ರಾಮ
ಬಂಧನಕ್ಕೆ ಹೆದರುವುದಿಲ್ಲ:
"ಸುಮಾರು ನೂರಕ್ಕೂ ಹೆಚ್ಚು ಸಂಸತ್ ಸದಸ್ಯರು ಸೇರಿ ಪ್ರತಿಭಟಿಸುತ್ತಿದ್ದಾರೆ. ಈ ಬಂಧನಕ್ಕೆಲ್ಲಾ ಯಾರೂ ಹೆದರುವುದಿಲ್ಲ. ನಾವು ಅದನ್ನು ಎದುರಿಸುತ್ತೇವೆ. ನಮಗೆ ನ್ಯಾಯ ಬೇಕು. ಈ ದೇಶದ ಯುವಕರು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ವಿದ್ಯಾರ್ಥಿಗಳು ಎಷ್ಟು ನೋವನ್ನು ಅನುಭವಿಸಿದ್ದಾರೆಂದು ಮಾಧ್ಯಮಗಳು ನೋಡಿವೆ. ಈ ದೇಶದ ಭವಿಷ್ಯ ಅವರಲ್ಲಿದೆ" ಎಂದು ಹೇಳಿದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವರು ವಶಕ್ಕೆ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಹಗರಣದ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸದ ಬಳಿಗೂ ತಲುಪಿದೆ. ದೆಹಲಿಯ 7 ಲೋಕ್ ಕಲ್ಯಾಣ ಮಾರ್ಗ್‌ನಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಇದರಿಂದ ಪ್ರಧಾನಿ ನಿವಾಸದ ಬಳಿ ಹೈಡ್ರಾಮಾ ಮುಂದುವರಿದಿದೆ.