ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ವರುಣನ ಕೃಪೆಗೆ ಕತ್ತೆಗಳ ಮದುವೆ..!!

ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಕಂಗೆಟ್ಟ ಈ ಕಚ್ಚೇನಹಳ್ಳಿ ಮತ್ತು ಯರಬಳ್ಳಿ ರೈತರು ಒಂದು ವಾರದ ಮುಂಚೆಯೇ ಕತ್ತೆಗಳ ಮದುವೆಗೆ ಸಜ್ಜಾಗಿದ್ದರು. ಗಂಡು ಕತ್ತೆ ಹಾಗೂ ಹೆಣ್ಣು ಕತ್ತೆಗಳನ್ನು ಕರೆತಂದು ಗಂಡು ಕತ್ತೆಗೆ ಹೊಸ ಪಂಚೆ ಟಾವಲ್ ಹಾಗೂ ಹೆಣ್ಣು ಕತ್ತೆಗೆ ಹೊಸ ಹಸಿರು ಸೀರೆ, ಬಳೆ ಗಳನ್ನು ತೊಡಿಸಿ ವಧು ವರ ರೀತಿಯಲ್ಲಿ ಅಲಂಕರಿಸಿದ್ದರು.

Gubbi News: ವರುಣನ ಕೃಪೆಗೆ ಕತ್ತೆಗಳ ಮದುವೆ..!!

-

Profile
Ashok Nayak Jul 21, 2026 11:49 PM

ಗುಬ್ಬಿ: ಸಕಾಲಕ್ಕೆ ಮಳೆ ಆಗದೇ ಕೃಷಿ ಚಟುವಟಿಕೆಗೆ ತೊಂದರೆಯಾದಾಗ ಆಕಾಶದತ್ತ ಮುಖ ಮಾಡುವ ರೈತರು ಮಳೆರಾಯನ ಅವಕೃಪೆಗೆ ಕತ್ತೆಗಳ ಮದುವೆ ಮಾಡಿದಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ತಾಲ್ಲೂಕಿನ ಚೇಳೂರು ಹೋಬಳಿಯ ಕಚ್ಚೇನಹಳ್ಳಿ ಹಾಗೂ ಹಾಗಲವಾಡಿ ಹೋಬಳಿ ಯರಬಳ್ಳಿ ಗ್ರಾಮದ ಜನರು ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.

ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಕಂಗೆಟ್ಟ ಈ ಕಚ್ಚೇನಹಳ್ಳಿ ಮತ್ತು ಯರಬಳ್ಳಿ ರೈತರು ಒಂದು ವಾರದ ಮುಂಚೆಯೇ ಕತ್ತೆಗಳ ಮದುವೆಗೆ ಸಜ್ಜಾಗಿದ್ದರು. ಗಂಡು ಕತ್ತೆ ಹಾಗೂ ಹೆಣ್ಣು ಕತ್ತೆಗಳನ್ನು ಕರೆತಂದು ಗಂಡು ಕತ್ತೆಗೆ ಹೊಸ ಪಂಚೆ ಟಾವಲ್ ಹಾಗೂ ಹೆಣ್ಣು ಕತ್ತೆಗೆ ಹೊಸ ಹಸಿರು ಸೀರೆ, ಬಳೆಗಳನ್ನು ತೊಡಿಸಿ ವಧು ವರ ರೀತಿಯಲ್ಲಿ ಅಲಂಕರಿಸಿದ್ದರು. 

ಇದನ್ನೂ ಓದಿ: Gubbi News: ಹಳೆ ವಿದ್ಯಾರ್ಥಿಗಳ ಸಂಘ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲಿ : ಪ್ರಾಂಶುಪಾಲ ಡಾ.ಓ.ನಾಗರಾಜ್

ಗಂಡು ಹಾಗೂ ಹೆಣ್ಣು ಕತ್ತೆಗಳಿಗೆ ಬಾಸಿಂಗ ಕಟ್ಟಿ ಶೃಂಗಾರ ಮಾಡಿ ಗ್ರಾಮದ ಹಿರಿಯರಲ್ಲಿ ಎರಡು ಗುಂಪು ರಚಿಸಿಕೊಂಡು ಗಂಡಿನ ಕಡೆಯವರು ಹಾಗೂ ಹೆಣ್ಣಿನ ಕಡೆಯವರು ಎಂದು ಮದುವೆಯ ರೀತಿಯಲ್ಲಿ ಶಾಸ್ತ್ರ ಸಂಪ್ರದಾಯ ನಡೆಸಿದರು.

ಚೇಳೂರು ಹೋಬಳಿಯ ಕಚ್ಚೇನಹಳ್ಳಿ ಮತ್ತು ಹಾಗಲವಾಡಿ ಹೋಬಳಿ ಯರಬಳ್ಳಿ ಗ್ರಾಮದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಎರಡೂ ಗ್ರಾಮವೂ ಹಬ್ಬದ ರೀತಿ ಸಿಂಗಾರ ಗೊಂಡಿತ್ತು. ಚಪ್ಪರ ದಿಬ್ಬಣ ರಂಗು ರಂಗಾಗಿಯೇ ನಡೆಯಿತು. ಊರಿನಲ್ಲಿ ಮದುವೆ ದಿಬ್ಬಣ ಮೆರವಣಿಗೆ ಚೆನ್ನಾಗಿಯೇ ನಡೆದು ಮದುವೆ ಊಟ ಕೂಡಾ ತಯಾರಿಸಿ ಗ್ರಾಮಸ್ಥರು ಸಿಹಿ ಊಟ ಸೇವಿಸಿ ಊರಿನ ದೇವರಲ್ಲಿ ಹರಕೆ ಹೊತ್ತು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಯಾವ ಮದುವೆಗೂ ಕಡಿಮೆ ಇಲ್ಲದಂತೆ ಕತ್ತೆಗಳ ಮದುವೆ ನಡೆದಿದ್ದು, ಮಾಂಗಲ್ಯಧಾರಣೆ ಮಂತ್ರ ಹೇಳುತ್ತಿದ್ದಂತೆ, ಗಟ್ಟಿಮೇಳದೊಂದಿಗೆ ಜನರೆಲ್ಲ ಅಕ್ಷತೆಯ ಮಳೆಗೈದರು. ಕೆಲವು ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು. ನವ ಜೋಡಿಗಳಿಗೆ ಮುತ್ತೈದೆಯರು ಸೋಬಾನೆ ಪದಗಳನ್ನು ಹೇಳಿ ಆರತಿ ಮಾಡಿ ಹರಿಸಿದರು. ಮದುವೆ ಖರ್ಚಿಗಾಗಿ ಗ್ರಾಮದ ಎಲ್ಲ ಸಮಾಜದ ಜನರು ಕಾಣಿಕೆ ನೀಡಿದ್ದೇ ಇಲ್ಲಿ ವಿಶೇಷವಾಗಿತ್ತು.

image

ಮಳೆ ಇಲ್ಲದೆ ಕಂಗಾಲಾಗಿರುವ ರೈತರು ಒಂದಡೆ ಸೇರಿ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ಊರಿನ ಗ್ರಾಮಸ್ಥರು ಸೇರಿ ಕತ್ತೆಗಳ ಕರೆಸಿ ಅದ್ದೂರಿ ಮದುವೆ ಮಾಡಿದ್ದಾರೆ. ಗ್ರಾಮಸ್ಥರೆಲ್ಲರೂ ಚಂದಾ ನೀಡಿ ಮಾಡಿದ ಮದುವೆಯ ಫಲವಾಗಿ ಮಳೆ ಬರುವಿಕೆಗೆ ಜನರು ಕಾದಿದ್ದಾರೆ.

-ಮೇಲೇಗೌಡ, ಗ್ರಾಮಸ್ಥ, ಕಚ್ಚೇನಹಳ್ಳಿ.