Bengaluru Metro: ಮೆಟ್ರೋ ಕೈಕೊಟ್ಟಿದ್ದಕ್ಕೆ ಲಾರಿ ಹತ್ತಿದ ಪ್ರಯಾಣಿಕರು; ಥರ್ಡ್ ಕ್ಲಾಸ್ ಆಡಳಿತ ಎಂದು ತೇಜಸ್ವಿ ಸೂರ್ಯ ಕಿಡಿ
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮನೆ ಸೇರಲು ಲಾರಿ, ಟ್ರಕ್ ಹತ್ತಿಕೊಂಡು ಹೋಗುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋ ರೈಲು ಕೆಟ್ಟು ನಿಂತ ಹಿನ್ನೆಲೆ ಬೆಂಗಳೂರಿನಲ್ಲಿ ಲಾರಿ ಏರಿದ ಪ್ರಯಾಣಿಕರು. -
ಬೆಂಗಳೂರು: ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ರಾಜಧಾನಿಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋವನ್ನೇ (Bengaluru Metro) ಅವಲಂಬಿಸಿದ್ದಾರೆ. ಆದರೆ, ಮಂಗಳವಾರ ಸಂಜೆ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಒಂದು ಮೆಟ್ರೋ ರೈಲು ಕೆಟ್ಟು ನಿಂತ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಇದರಿಂದ ಹಲವರು ಲಾರಿ, ಟ್ರಕ್‌ಗಳನ್ನು ಏರಿ ಮನೆಗಳತ್ತ ಹೊರಟಿರುವುದು ಕಂಡುಬಂದಿತ್ತು. ಸದ್ಯ ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿವೆ.
ತಾಂತ್ರಿಕ ದೋಷದ ಹಿನ್ನೆಲೆ ಮಂಗಳವಾರ ಸಂಜೆಯಿಂದ ಇಂದು ಮುಂಜಾನೆವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಯಶಸ್ವಿಯಾಗಿ ಸರಿಪಡಿಸಿದ ಹಿನ್ನೆಲೆ ಇಂದು ಬೆಳಿಗ್ಗೆ 5 ಗಂಟೆಯಿಂದ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲು ಸಂಚಾರವು ನಿಯಮಿತ ವೇಳಾಪಟ್ಟಿಯಂತೆ ಸಂಪೂರ್ಣವಾಗಿ ಪುನರಾರಂಭಗೊಂಡಿತ್ತು.
ಮೆಟ್ರೋ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮನೆ ಸೇರಲು ಲಾರಿ, ಟ್ರಕ್ ಹತ್ತಿಕೊಂಡು ಹೋಗುತ್ತಿದ್ದ ವಿಡಿಯೊಗಳು ಹೊರಬಿದ್ದ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
First-world tech talent. Third-world governance.
— Tejasvi Surya (@Tejasvi_Surya) June 24, 2026
That is the story of Bengaluru.
Metro disruptions have become alarmingly frequent. And every time the Metro fails, the entire city descends into chaos. Cabs disappear. Autos refuse rides. Citizens are stranded.
Yesterday,… pic.twitter.com/0URP0FbtFK
ರಾಜ್ಯ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಆಕ್ರೋಶ
ಮೆಟ್ರೋ ಸಂಚಾರದಲ್ಲಿ ವ್ಯತ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಕಿಡಿಕಾಡಿದ್ದಾರೆ. ಫಸ್ಟ್ ವರ್ಲ್ಡ್ ಟೆಕ್ ಟ್ಯಾಲೆಂಟ್, ಥರ್ಡ್ ಕ್ಲಾಸ್ ಆಡಳಿತ. ಇದು ನಮ್ಮ ಬೆಂಗಳೂರಿನ ಕಥೆಯಾಗಿದೆ. ಇತ್ತೀಚೆಗೆ ಮೆಟ್ರೋ ಸೇವೆಗಳಲ್ಲಿನ ವ್ಯತ್ಯಯಗಳು ಆತಂಕಕಾರಿ ರೀತಿಯಲ್ಲಿ ಪದೇಪದೆ ಮರುಕಳಿಸುತ್ತಿವೆ. ಮೆಟ್ರೋ ಕೈಕೊಟ್ಟ ಪ್ರತಿ ಬಾರಿಯೂ ಇಡೀ ನಗರವೇ ಗೊಂದಲದ ಗೂಡಾಗುತ್ತದೆ. ಕ್ಯಾಬ್‌ಗಳು ಮಾಯವಾಗುತ್ತವೆ, ಆಟೋ ಚಾಲಕರು ರೈಡ್ ನಿರಾಕರಿಸುತ್ತಾರೆ. ಇದರಿಂದ ಪ್ರಯಾಣಿಕರು ರಸ್ತೆಗಳಲ್ಲಿ ಪರದಾಡುತ್ತಾರೆ.
Bengaluru Metro: ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್‌ನಲ್ಲಿ ಕೆಟ್ಟು ನಿಂತ ಮೆಟ್ರೋ ರೈಲು; ಪ್ರಯಾಣಿಕರ ಪರದಾಟ
ನೆನ್ನೆ, ಭಾರತದ ಸಿಲಿಕಾನ್ ವ್ಯಾಲಿಯ ಕಷ್ಟಪಟ್ಟು ದುಡಿಯುವ ವೃತ್ತಿಪರರು, ಕಚೇರಿ ಮುಗಿಸಿ ಮನೆಗೆ ತಲುಪಲು ಲಾರಿ ಮತ್ತು ಟ್ರಕ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿತ್ತು. ಅವರು ನಾಳೆ ಬೆಳಿಗ್ಗೆ ಮತ್ತೆ ಎದ್ದು, ಕಚೇರಿಗೆ ಹೋಗಿ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ, ಅದೇ ಹದಗೆಟ್ಟ ವ್ಯವಸ್ಥೆಯನ್ನು ಮೌನವಾಗಿ ಸಹಿಸಿಕೊಳ್ಳುತ್ತಾ ಮತ್ತೆ ತಮ್ಮ ದಿನಚರಿ ಮುಂದುವರಿಸುತ್ತಾರೆ ಎಂದು ಟೀಕಿಸಿದ್ದಾರೆ.