ರೇಣುಕಾಸ್ವಾಮಿ ಕೊಲೆ ಕೇಸ್: ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇಕೆ ನಟ ದರ್ಶನ್?
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವಿಳಂಬಗತಿಯನ್ನು ಉಲ್ಲೇಖಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಟ ದರ್ಶನ್ ತೂಗುದೀಪ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸಲು ದರ್ಶನ್ ಕೋರಿದ್ದಾರೆ.
-
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ವಿಳಂಬ ಗತಿಯನ್ನು ಉಲ್ಲೇಖಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ಮೇ 15 ರಂದು ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ, ಒಂದು ವರ್ಷದ ಒಳಗಾಗಿ ವಿಚಾರಣೆಯಲ್ಲಿ ಗಮನಾರ್ಹ ಪ್ರಗತಿ ಕಾಣದಿದ್ದರೆ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ನೀಡಿತ್ತು.
ಇದೀಗ ಅದರ ಬೆನ್ನಲ್ಲೇ ದರ್ಶನ್ ಈ ಹೊಸ ಕಾನೂನು ಹೆಜ್ಜೆ ಇಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಲಾಗಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ದರ್ಶನ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಒಂದು ವರ್ಷದ ಅವಧಿಯನ್ನು ಮರುಪರಿಶೀಲಿಸಿ, ಕಡಿಮೆ ಮಾಡುವಂತೆ ಅರ್ಜಿಯಲ್ಲಿ ನಟ ಕೋರಿದ್ದಾರೆ.
Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ
ಅರ್ಜಿಯಲ್ಲಿನ ಪ್ರಮುಖ ವಾದಗಳೇನು?
ತಮ್ಮ ಇತ್ತೀಚಿನ ಅರ್ಜಿಯಲ್ಲಿ ದರ್ಶನ್, ಪ್ರಕರಣದಲ್ಲಿ ಹೊಸ ಬೆಳವಣಿಗೆಗಳು ಉಂಟಾದರೆ ಅದಕ್ಕಿಂತ ಮುಂಚಿತವಾಗಿಯೇ ಜಾಮೀನು ಕೋರುವುದಕ್ಕೆ ಸುಪ್ರೀಂ ಕೋರ್ಟ್‌ನ ಹಳೆಯ ಆದೇಶವು ತಡೆಯಾಗಬಾರದು ಎಂದು ಸ್ಪಷ್ಟಪಡಿಸುವಂತೆ ಕೋರಿದ್ದಾರೆ. ಒಂದು ವೇಳೆ ವಿಚಾರಣೆಯು ಅತ್ಯಂತ ನಿಧಾನಗತಿಯಲ್ಲಿ ಸಾಗಿದರೆ, ತಾವು ದೀರ್ಘಕಾಲ ಜೈಲಿನಲ್ಲೇ ಉಳಿಯಬೇಕಾಗಿ ಬಂದರೆ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದರೆ ಅಥವಾ ಇತರ ಯಾವುದೇ ಪ್ರಮುಖ ಸಂದರ್ಭಗಳು ಸೃಷ್ಟಿಯಾದರೆ ತಮಗೆ ಜಾಮೀನು ಕೋರಲು ಅವಕಾಶ ನೀಡಬೇಕು ಎಂದು ದರ್ಶನ್ ಅರ್ಜಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್‌ನ ಹಳೆಯ ಆದೇಶವೇನು?
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಮೇ 15 ರಂದು ನೀಡಿದ್ದ ಆದೇಶವನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಂದು ಪೀಠವು ಜಾಮೀನು ನಿರಾಕರಿಸಿದ್ದಲ್ಲದೆ, ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ, ಪ್ರಕರಣದ ನಿಧಾನಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಧೀಶರು, ಮೊದಲು 60 ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಸೂಚಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ; ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ
ದರ್ಶನ್ ಪರ ಕಣಕ್ಕಿಳಿದ ಕ್ರಿಮಿನಲ್ ಲಾಯರ್ ಹಶ್ಮತ್ ಪಾಷಾ
ದರ್ಶನ್ ಪರ ವಕಾಲತ್ತು ವಹಿಸುತ್ತಿದ್ದ ಸುನೀಲ್ ಕುಮಾರ್ ನಿರ್ಗಮನದ ಬೆನ್ನಲ್ಲೇ ಕ್ರಿಮಿನಲ್ ಡಿಫೆನ್ಸ್ ವಕೀಲರಾದ ಹಶ್ಮತ್ ಪಾಷಾ ಅವರು ದರ್ಶನ್ ಪರ ವಕಾಲತ್ತು ಹಾಕಿದ್ದಾರೆ. ಈ ವಿಷಯವನ್ನು ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ಅವರ ಗಮನಕ್ಕೆ ತಂದಿತು. ಈ ಬಗ್ಗೆ ನನ್ನ ಕುಟುಂಬಸ್ಥರ ಬಳಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಹೇಳುತ್ತೇನೆ ಎಂದು ದರ್ಶನ್ ಕೋರ್ಟ್‌ಗೆ ತಿಳಿಸಿದ್ದಾರೆ. ಇನ್ನು ಕೇಸ್‌ಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಹೊಸ ವಕೀಲರಿಗೆ ವರ್ಗಾಯಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರಿನ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಸಕ್ರಿಯರಾಗಿರುವ ಹಶ್ಮತ್ ಪಾಷಾ ಅವರು ಸಾವಿರಕ್ಕೂ ಹೆಚ್ಚು ಸಂಕೀರ್ಣ ಕ್ರಿಮಿನಲ್ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಶಕಗಳ ಅನುಭವ ಹೊಂದಿದ್ದಾರೆ. ಕರ್ನಾಟಕ ಹೈಕೋರ್ಟ್ ಇವರನ್ನು 'ಡೆಸಿಗ್ನೇಟೆಡ್ ಸೀನಿಯರ್ ಅಡ್ವೊಕೇಟ್' ಎಂದು ನಾಮನಿರ್ದೇಶನ ಮಾಡಿದೆ. ಈಗ ಇವರ ಎಂಟ್ರಿ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ.