ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R Ashok: ಜಿಬಿಎ: ಯೋಜನೆಗಳನ್ನು ಮುಖ್ಯಮಂತ್ರಿಯೇ ಅನುಮೋದಿಸುವ ಮನೆಹಾಳು ಕೆಲಸ ಮಾಡುತ್ತಿದ್ದಾರೆ: ಆರ್.ಅಶೋಕ್ ಕಿಡಿ

Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಭೆ ಶುಕ್ರವಾರ ನಡೆದಿದೆ. ಇದನ್ನು ಸರ್ಕಾರ ಎನ್ನಬೇಕೇ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌, ಸರ್ಕಾರ ಎಂದರೆ ಕಾನೂನು, ಸುವ್ಯವಸ್ಥೆ, ಸಂವಿಧಾನ ಎಲ್ಲ ಇರಬೇಕು. ಇವರು ನಿನ್ನೆ ಸಭೆ ಇರುವುದಾಗಿ ಫೋನ್ ಮಾಡಿದ್ದಾರೆ. ಮಧ್ಯಾಹ್ನ 12ಕ್ಕೆ ಕಾರ್ಯಸೂಚಿ ಮನೆಗೆ ಕಳಿಸಿ, ಸಂಜೆ 4ಕ್ಕೆ ಸಭೆ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಜಿಬಿಎ ವಿಷಯದಲ್ಲಿ ಮನೆಹಾಳು ಕೆಲಸ: ಆರ್. ಅಶೋಕ್

-

Profile Siddalinga Swamy Oct 10, 2025 8:27 PM

ಬೆಂಗಳೂರು: ಸಂವಿಧಾನದ 74ನೇ ತಿದ್ದುಪಡಿಯು ಸ್ಥಳೀಯ ಸಂಸ್ಥೆಗಳಿಗೆ ಭಗವದ್ಗೀತೆ ಇದ್ದಂತೆ. ಹೊಸ ಪಾಲಿಕೆಗೆ ಮೇಯರ್ ಸುಪ್ರೀಂ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇದ್ದರೆ ಅವರೇ ಸುಪ್ರೀಂ. ಯೋಜನೆಗಳನ್ನು ಮುಖ್ಯಮಂತ್ರಿಯೇ ಅನುಮೋದಿಸುವ ಮನೆಹಾಳು ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆಕ್ಷೇಪಿಸಿದ್ದಾರೆ. ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಪಾಲಿಕೆ ಯಾಕೆ ಬೇಕು? ನೀವೇ ಪ್ಲಾನಿಂಗ್ ಅಥಾರಿಟಿ. ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ ಎಂಜಿನಿಯರನ್ನು ಸಿಇಒ ಮಾಡಿದ್ದಾರೆ. ಇವರೇ ಮುಂದೆ ಟೆಂಡರ್ ಮಾಡುತ್ತಾರೆ. ಮೆಟ್ರೊ, ಅಂಡರ್‌ಪಾಸ್ ಟನೆಲನ್ನೂ ಇವರೇ ಮಾಡಲಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಯೇ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತಾರೆ. ಕೈಯಿಂದ ಜೇಬಿಗೆ ಇಟ್ಟುಕೊಳ್ಳುವ ಪದ್ಧತಿ ಇದೆಂದು ವ್ಯಂಗ್ಯವಾಡಿದ ಅವರು, ಕೌನ್ಸಿಲ್ ಒಪ್ಪಿಗೆ ಸೂಚಿಸಿ ಮೇಯರ್ ಮೂಲಕ ಸರ್ಕಾರಕ್ಕೆ ಕಳಿಸಬೇಕಿತ್ತು. ಇವರೇ ಅದನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಇದೇ ಸಭೆಯು ರಸ್ತೆ ಕಾಮಗಾರಿಯನ್ನೂ ಅನುಮೋದಿಸುತ್ತದೆ. ಅಂದಮೇಲೆ ಪಾಲಿಕೆ ನೆಗೆದುಬಿದ್ದು ಹೋದಂತೆ ಎಂದು ಆರೋಪಿಸಿದರು.

ಎಲ್ಲ ಪತ್ರಿಕೆಗಳಿಗೆ ಸರ್ಕಾರದ ದುಡ್ಡಿನಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಿಗೆ ಕರೆಯುತ್ತಿಲ್ಲ. ಇದು ಸಂವಿಧಾನದ ಉಲ್ಲಂಘನೆ ಎಂದು ದೂರಿದ ಅವರು, ಎಲ್ಲ ಕ್ಷೇತ್ರದಲ್ಲೂ ಇದು ನಡೆದಿದೆ ಎಂದು ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಭೆಯನ್ನು ಶುಕ್ರವಾರ ರಾಜ್ಯ ಸರ್ಕಾರ ಕರೆದಿತ್ತು. ಇದನ್ನು ಸರ್ಕಾರ ಎನ್ನಬೇಕೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಎಂದರೆ ಕಾನೂನು, ಸುವ್ಯವಸ್ಥೆ, ಸಂವಿಧಾನ ಎಲ್ಲ ಇರಬೇಕು. ಇವರು ನಿನ್ನೆ ಸಭೆ ಇರುವುದಾಗಿ ಫೋನ್ ಮಾಡಿದ್ದಾರೆ. ಮಧ್ಯಾಹ್ನ 12ಕ್ಕೆ ಕಾರ್ಯಸೂಚಿ ಮನೆಗೆ ಕಳಿಸಿ, ಸಂಜೆ 4ಕ್ಕೆ ಸಭೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಏನೇ ನೋಟಿಸ್ ಕೊಡುವುದಾದರೂ 7 ದಿನಗಳ ಮೊದಲು ಕೊಡಬೇಕಿತ್ತು. ಪ್ರಾಧಿಕಾರದ ಸಭೆಗೆ ನೀತಿ ನಿಯಮಗಳಿವೆ. ಬೇಕಾಬಿಟ್ಟಿ ಕೊಡಲು ಬರುವುದಿಲ್ಲ ಎಂದು ಟೀಕಿಸಿದ ಅವರು, ನಾನು ಬೆಳಗ್ಗೆ ಕಾರ್ಯಕ್ರಮಕ್ಕೆಂದು ಮನೆಯಿಂದ ತೆರಳಿದ್ದೆ ಎಂದರು. ಇವರ ಯೋಗ್ಯತೆ ಇದರಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಕೌನ್ಸಿಲ್ ಸಭೆಗೆ ಸಭಾಂಗಣಗಳು ಎಲ್ಲಿವೆ?

5 ಪಾಲಿಕೆ ಮಾಡಲು ಹೊರಟಿದ್ದಾರೆ. ಬೆಂಗಳೂರು ಕೇಂದ್ರ ಹೊರತುಪಡಿಸಿ 120 ಜನರ ಕೌನ್ಸಿಲ್ ಸಭೆ ನಡೆಸಲು ಇನ್ನೆಲ್ಲಿ ಅವಕಾಶ ಇದೆ ಎಂದು ಆರ್.ಅಶೋಕ್ ಪ್ರಶ್ನಿಸಿದರು. ನಾಮನಿರ್ದೇಶಿತರು 20 ಜನ, 40 ಜನ ಅಧಿಕಾರಿಗಳು ಕುಳಿತುಕೊಳ್ಳಬೇಕು. 30 ಜನ ಮಾಧ್ಯಮದವರೂ ಇರುತ್ತಾರೆ. 200 ಜನರು ಕುಳಿತುಕೊಳ್ಳುವ 4 ಸಭಾಂಗಣ ಎಲ್ಲಿದೆ ಎಂದು ಕೇಳಿದರು. ಈ ಸಭೆ ಕಾನೂನಿನ ಪ್ರಕಾರ ನಡೆದಿದೆಯೇ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | BY Vijayendra: ಜಿಬಿಎ ಚುನಾವಣೆಗೆ ಎಲ್ಲಿದೆ ರಾಜ್ಯ ಸರ್ಕಾರದ ತಯಾರಿ? ಬಿ.ವೈ. ವಿಜಯೇಂದ್ರ ಪ್ರಶ್ನೆ

ಕೌನ್ಸಿಲ್‍ನಲ್ಲಿ ಹೋರಾಟ ಮಾಡಿದ್ದೇವೆ. ಈಗ ಕಾನೂನು ಪ್ರಕಾರ ಪಿಐಎಲ್ ಹಾಕಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಶಾಸಕರಾದ ಎಸ್.ಆರ್. ವಿಶ್ವನಾಥ್, ಮುನಿರತ್ನ, ಎಸ್. ಮುನಿರಾಜು, ಎಸ್. ರಘು, ಸಿ.ಕೆ. ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಉಪಸ್ಥಿತರಿದ್ದರು.