ಸ್ವಚ್ಛತಾ ನಿಯಮ ಉಲ್ಲಂಘನೆಗೆ 1.72 ಕೋಟಿ ರುಪಾಯಿ ದಂಡ
ಬೆಂಗಳೂರು ನಗರದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಘನ ತ್ಯಾಜ್ಯ ನಿರ್ವಹಣಾ ನಿಯಮ ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಬಿಎ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿ ಕಳೆದ ಮೂರು ತಿಂಗಳಲ್ಲಿ (ಫೆಬ್ರವರಿ 2026 ರಿಂದ ಏಪ್ರಿಲ್ 2026ರವರೆಗೆ) ಒಟ್ಟು 1.72 ಕೋಟಿ ರು.ದಂಡ ಸಂಗ್ರಹಿಸಲಾಗಿದೆ.
-
ವೈಭವ ಸಿ. ಕೊಳ್ಳಿ ಬೆಂಗಳೂರು
ಮಾರ್ಷಲ್‌ಗಳಿಂದ 1.29 ಕೋಟಿ ರು. ಸಂಗ್ರಹ, ಮಹದೇವಪುರ ವಿಭಾಗ ಅಗ್ರಸ್ಥಾನ
ಮೇ 28ರಂದು ಒಂದೇ ದಿನ 384 ಪ್ರಕರಣಗಳು ಪತ್ತೆ, 3.98ಲಕ್ಷ ರು. ದಂಡ ವಸೂಲಿ
ಬೆಂಗಳೂರು ನಗರದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಘನ ತ್ಯಾಜ್ಯ ನಿರ್ವಹಣಾ ನಿಯಮ ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಬಿಎ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿ ಕಳೆದ ಮೂರು ತಿಂಗಳಲ್ಲಿ (ಫೆಬ್ರವರಿ 2026 ರಿಂದ ಏಪ್ರಿಲ್ 2026ರವರೆಗೆ) ಒಟ್ಟು 1.72 ಕೋಟಿ ರು.ದಂಡ ಸಂಗ್ರಹಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ತ್ಯಾಜ್ಯವನ್ನು ವಿಂಗಡಿಸದೆ ನೀಡುವುದು, ಅನಧಿಕೃತವಾಗಿ ಕಸ ವಿಲೇವಾರಿ ಮಾಡುವುದು ಸೇರಿದಂತೆ ವಿವಿಧ ಸ್ವಚ್ಛತಾ ನಿಯಮ ಉಲ್ಲಂಘನೆಗಳಿಗೆ ಈ ದಂಡ ವಿಧಿಸಲಾಗಿದೆ.
ದಂಡ ವಸೂಲಿಯಲ್ಲಿ ಮಾರ್ಷಲ್‌ಗಳ ಪಾತ್ರ ಪ್ರಮುಖವಾಗಿದ್ದು, ಅವರು ಒಟ್ಟು 1.29 ಕೋಟಿ ರು. ದಂಡ ಸಂಗ್ರಹಿಸಿದ್ದಾರೆ. ಆರೋಗ್ಯ ಇಲಾಖೆಯ ಜೂನಿಯರ್ ಹೆಲ್ತ್ ಇನ್ ಸ್ಪೆಕ್ಟರ್‌ಗಳು (ಜೆಎಚ್‌ಐ) 43.71 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ.
ನಗರದ ವಿವಿಧ ವಲಯಗಳಲ್ಲಿ ನಿರಂತರ ತಪಾಸಣೆ, ವಿಶೇಷ ಕಾರ್ಯಾಚರಣೆಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Fine for No helmet wearing: ಹೆಲ್ಮೆಟ್ ಇಲ್ಲದವರಿಗೆ ದಂಡದ ಬಿಸಿ ಮುಟ್ಟಿಸಿದ ಚಿಂತಾಮಣಿ ಪೊಲೀಸರು
ವಿಭಾಗವಾರು ದಂಡ ಸಂಗ್ರಹದ ಅಂಕಿಅಂಶಗಳನ್ನು ಪರಿಶೀಲಿಸಿದರೆ ಮಹದೇವಪುರ ವಿಭಾಗವು 17.93 ಲಕ್ಷ ರು.ದಂಡ ವಸೂಲಿ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಗಾಂಧಿ ನಗರ ವಿಭಾಗ 15.13 ಲಕ್ಷ ರು. ಹಾಗೂ ಬಿಟಿಎಂ ಲೇಔಟ್ ವಿಭಾಗ 15.12 ಲಕ್ಷ ರು. ದಂಡ ಸಂಗ್ರಹಿಸಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ.
ಕೆ.ಆರ್.ಪುರಂ ವಿಭಾಗ, ಬೊಮ್ಮನಹಳ್ಳಿ ವಿಭಾಗ, ಬ್ಯಾಟರಾಯನಪುರ ವಿಭಾಗ ಸೇರಿದಂತೆ 27 ವಿಭಾಗದಿಂದ 1,72,71,750 ರು. ದಂಡ ಸಂಗ್ರಹವಾಗಿದೆ. ನಗರದ ಸ್ವಚ್ಛತೆ ಕಾಪಾಡು ವುದು ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲ, ನಾಗರಿಕರ ಸಹಭಾಗಿತ್ವವೂ ಅತ್ಯಗತ್ಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು, ತ್ಯಾಜ್ಯವನ್ನು ಮೂಲದ ವಿಂಗಡಿಸಿ ನೀಡುವುದು ಹಾಗೂ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವ ಮೂಲಕ ನಾಗರಿಕರು ನಗರದ ಸ್ವಚ್ಛತೆಗೆ ಸಹಕರಿಸಬೇಕು.
ಸ್ವಚ್ಛ ಬೆಂಗಳೂರು ನಿರ್ಮಾಣದ ಗುರಿಯನ್ನು ಸಾಧಿಸಲು ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮಗಳನ್ನು ಮುಂದುವರಿಸಲಾಗುವುದು. ಜತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹೆಚ್ಚಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
25 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ
ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಹಾಗೂ ಘನ ತ್ಯಾಜ್ಯ ನಿರ್ವಹಣಾ ನಿಯಮಗಳ ಉಲ್ಲಂಘನೆ ವಿರುದ್ಧ ಜಿಬಿಎ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೇ 28ರಂದು ಒಟ್ಟು 384 ಪ್ರಕರಣಗಳು ಪತ್ತೆಯಾಗಿದ್ದು, 3,98,800 ದಂಡ ವಸೂಲಿ ಮಾಡಲಾಗಿದೆ. ಕಾರ್ಯಾಚರಣೆ ವೇಳೆ 25 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಿಇಒ ಕರೀಗೌಡ
ತಿಳಿಸಿದ್ದಾರೆ.
![]()
ಕಾನೂನು ಮತ್ತು ಸ್ವಚ್ಛತಾ ನಿಯಮಗಳನ್ನು ಪಾಲಿಸದವರ ವಿರುದ್ಧ ದಂಡ ವಿಧಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಮಾರ್ಷಲ್‌ಗಳು ಹಾಗೂ ಜಂಟಿ ಆರೋಗ್ಯ ನಿರೀಕ್ಷಕರು ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುತ್ತಿದ್ದಾರೆ. ಮೇ ತಿಂಗಳಿನಲ್ಲಿ ನಗರದಲ್ಲಿ ಪ್ರತಿದಿನ ಸರಾಸರಿ 3 ಲಕ್ಷ ರು.ದಷ್ಟು ದಂಡ ಸಂಗ್ರಹವಾಗುತ್ತಿದ್ದು, ತಿಂಗಳಿಗೆ ಸುಮಾರು 1 ಕೋಟಿಯಷ್ಟು ದಂಡ ವಸೂಲಾಗುವ ನಿರೀಕ್ಷೆಯಿದೆ.
- ಕರೀಗೌಡ, ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಿಇಒ