ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Digital arrest: ಎನ್‌ಐಎ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆ, ಪುತ್ರಿಯ ಡಿಜಿಟಲ್‌ ಅರೆಸ್ಟ್;‌ 2.1 ಕೋಟಿ ರೂ. ವಂಚಿಸಿದ ಸೈಬರ್‌ ಕಳ್ಳರು!

ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನೊಬ್ಬ ನಿಮ್ಮ ಹೆಸರಿನಲ್ಲಿ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದಾನೆ, ನಿಮ್ಮ ಪುತ್ರಿಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಹೆದರಿಸಿದ್ದ ಸೈಬರ್‌ ಖದೀಮರು, ಒಟ್ಟು 2.1 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾರೆ.

ವೃದ್ಧೆ, ಪುತ್ರಿಯ ಡಿಜಿಟಲ್‌ ಅರೆಸ್ಟ್ ಮಾಡಿ 2.1 ಕೋಟಿ ರೂ. ವಂಚನೆ

-

Prabhakara R
Prabhakara R May 8, 2026 4:09 PM

ಬೆಂಗಳೂರು: ಎನ್‌ಐಎ ಅಧಿಕಾರಿಗಳ ಸೋಗಿನಲ್ಲಿ 78 ವರ್ಷದ ವೃದ್ಧೆ ಮತ್ತು ಅವರ ಪುತ್ರಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ ಸೈಬರ್‌ ವಂಚಕರು, 2.1 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಜಯನಗರದ ನಿವಾಸಿ ಪ್ರಸನ್ನ ಪಾರ್ವತಿ ಎಂಬವರು ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೆನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಏ.13ರಂದು ವಾಟ್ಸ್‌ಆ್ಯಪ್‌ ಮೂಲಕ ವಂಚಕರು, ಪ್ರಸನ್ನ ಪಾರ್ವತಿ ಅವರಿಗೆ ಕರೆ ಮಾಡಿ, ತಾವು ಎನ್ಐಎ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ಬಳಿಕ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನೊಬ್ಬ ನಿಮ್ಮ ಹೆಸರಿನಲ್ಲಿ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದಾನೆ, ನಿಮ್ಮ ಪುತ್ರಿಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಹೆದರಿಸಿದ್ದಾರೆ. ಕರೆ ಮಾಡಿರುವುದನ್ನು ಯಾರಿಗೂ ತಿಳಿಸಬಾರದು ಎಂದಿರುವ ವಂಚಕರು, ವೃದ್ಧೆ ಹಾಗೂ ಅವರ ಮಕ್ಕಳಿಂದ ಎಲ್ಲ ದಾಖಲೆಗಳನ್ನೂ ಪಡೆದುಕೊಂಡಿದ್ದಾರೆ. ಪೊಲೀಸ್ ಠಾಣೆಯಂತೆ ಕಾಣುವ ಕೊಠಡಿಯಿಂದ ಆರೋಪಿಗಳು ವಿಡಿಯೊ ಕರೆ ಮಾಡಿದ್ದಾರೆ. ಈ ವಿಡಿಯೊ ಕಾಲ್ ವೀಕ್ಷಿಸಿದ ವೃದ್ಧೆ, ಎನ್‌ಐಎ ಅಧಿಕಾರಿಗಳೇ ಇರಬಹುದೆಂದು ಭಾವಿಸಿ, ತಮ್ಮೆಲ್ಲಾ ಮಾಹಿತಿ ನೀಡಿದ್ದಾರೆ.

ನಂತರ ವಿಡಿಯೊ ಕಾಲ್ ಆರೋಪಿ ತನ್ನನ್ನು ಪ್ರದೀಪ್ ಜಸ್ವಾಲ್ ಎಂದು ಪರಿಚಯಿಸಿಕೊಂಡಿದ್ದ. ಹೇಳಿಕೆ ದಾಖಲಿಸಿಕೊಳ್ಳುವಂತೆ ನಾಟಕವಾಡಿದ್ದ. ಸರಿಯಾದ ಮಾಹಿತಿ ನೀಡದಿದ್ದರೆ ಬಂಧಿಸಲಾಗುವುದು ಎಂದು ಬೆದರಿಸಿದ್ದ. ನಂತರ ಬ್ಯಾಂಕ್‌ ವ್ಯವಹಾರವನ್ನು ಪರಿಶೀಲಿಸಬೇಕು, ತಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನೂ ವರ್ಗಾವಣೆ ಮಾಡುವಂತೆ ಸೂಚಿಸಿ ಕೆಲವು ಖಾತೆಗಳ ವಿವರವನ್ನು ನೀಡಿದ್ದ. ಆರ್‌ಬಿಐ ಮಾರ್ಗಸೂಚಿಯಂತೆ ಪರಿಶೀಲಿಸಿ ಬಳಿಕ ಹಣ ಮರಳಿಸಲಾಗುವುದು ಎಂದು ನಂಬಿಸಿದ್ದ. ವಂಚಕನ ಮಾತು ನಂಬಿದ ವೃದ್ಧೆ, ಹಂತ ಹಂತವಾಗಿ ಹಣ ವರ್ಗಾಯಿಸಿದ್ದರು.

ಬೆಂಗಳೂರಿನ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ; ವಿಡಿಯೊ ವೈರಲ್‌

ಹಣ ಇಲ್ಲದ ಕಾರಣ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಆ ಹಣವನ್ನು ವೃದ್ಧೆ ವರ್ಗಾವಣೆ ಮಾಡಿದ್ದರು. ಹೀಗೆ ಏಪ್ರಿಲ್ 15ರಿಂದ 23ರ ವರೆಗೆ ಒಟ್ಟು 2.1 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.