ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ನಿಧನ; ಗಣ್ಯರಿಂದ ಸಂತಾಪ
ರಾಜ್ಯದ ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ (87) ಅವರು ಇಂದು (ಮೇ 7) ಬೆಳಗ್ಗೆ 8.45ಕ್ಕೆ ಕೆಂಗೇರಿಯ ಅವರ ನಿವಾಸದಲ್ಲಿ ನಿಧನರಾದರು. ಇವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ಹಾಗೂ ದಿ. ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅಪಾರ ಅನುಭವ ಹೊಂದಿದ್ದರು.
ಸಂಗ್ರಹ ಚಿತ್ರ -
ಬೆಂಗಳೂರು: ರಾಜ್ಯದ ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ (87) (Prahlad Kulali) ಅವರು ಇಂದು (ಮೇ 7) ಬೆಳಗ್ಗೆ 8.45ಕ್ಕೆ ಕೆಂಗೇರಿಯ ಅವರ ನಿವಾಸದಲ್ಲಿ ನಿಧನರಾದರು. ಇವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ಹಾಗೂ ದಿ. ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅಪಾರ ಅನುಭವ ಹೊಂದಿದ್ದರು. ಅವರ ಅಂತ್ಯಕ್ರಿಯೆ ಮಧ್ಯಾಹ್ನ 1.30 ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಕುಳಲಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹೊಸಕೋಟ ಗ್ರಾಮದವರಾದ ಪ್ರಹ್ಲಾದ್ ಕುಳಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹುಬ್ಬಳ್ಳಿ ಸಂಯುಕ್ತ ಕರ್ನಾಟಕದಲ್ಲಿ 1956 ರಿಂದ 57 ರವರೆಗೆ, ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ 1997 ರವರೆಗೆ ಸುಮಾರ 40 ವರ್ಷಗಳ ಸತತ ಸೇವೆ ಸಲ್ಲಿಸಿದ ನಂತರ ಸೇವಾ ನಿವೃತ್ತಿ ಹೊಂದಿದರು. ಅಷ್ಟೇ ಅಲ್ಲದೇ ಬೆಂಗಳೂರು ವರದಿಗಾರರ ಕೂಟ (ಬಿಆರ್‌ಜಿ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಅದರ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಕುಳಲಿ ಅವರು ಸೇವೆ ಸಲ್ಲಿಸಿದ್ದಾರೆ.
ಕುಳಲಿ ಅವರು ಪತ್ರಿಕೋದ್ಯಮದ ಜೊತೆಗೆ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಲ್ಲಿಯೂ 13 ವರ್ಷಗಳಿಗೂ ಹೆಚ್ಚು ಕಾಲ ಕ್ಯಾಷುವಲ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಹಲವು ಪ್ರಮುಖ ವಿಶೇಷ ತನಿಖಾ ವರದಿಗಳು ಸೇರಿದಂತೆ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಅವರ ಸೇವೆಯನ್ನು ಗುರುತಿಸಿ 2 ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರು ವರದಿಗಾರರ ಕೂಟದ ವಾರ್ಷಿಕ ಪ್ರಶಸ್ತಿಯೂ ಎರಡು ಬಾರಿ ಲಭಿಸಿದೆ. ಇಷ್ಟೇ ಅಲ್ಲದೆ ಹಲವು ಸನ್ಮಾನಗಳು ಸಂದಿವೆ.
ನಟ ವಿಜಯ್ ಸಹೋದರಿ ವಿದ್ಯಾ ಸಾವನ್ನಪ್ಪಿದ್ದು ಹೇಗೆ? ʻದಳಪತಿʼ ಬದುಕನ್ನೇ ಬದಲಿಸಿತು ತಂಗಿಯ ನಿಧನ!
ಐತಿಹಾಸಿಕ ವರದಿಗಾರಿಕೆ
1986ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ಕ್ (SAARC) ಶೃಂಗಸಭೆಯ ಪ್ರಮುಖ ವರದಿಗಾರರಲ್ಲಿ ಇವರು ಒಬ್ಬರಾಗಿ ಕೆಲಸ ಮಾಡಿದ್ದಾರೆ. 1993ರಲ್ಲಿ ಮಹಾರಾಷ್ಟ್ರದ ಕಿಲಾರಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಸ್ಥಳಕ್ಕೆ ಭೇಟಿ ನೀಡಿ ಅವರು ನೀಡಿದ ಮಾನವೀಯ ವರದಿಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದವು.