ಎಸ್ʼಐಆರ್: ಈಗ ನೋಟೀಸ್ ಸರದಿ
ಚುನಾವಣಾ ಆಯೋಗದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 5.54 ಕೋಟಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿತ್ತು. ಈ ಪೈಕಿ 4.46 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಉಳಿದಂತೆ 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ
-
ಕರಡು ಮತದಾರರ ಪಟ್ಟಿ ಪ್ರಕಟ: 43.81 ಲಕ್ಷ ಮತದಾರರಿಗೆ ನೋಟಿಸ್ ಜಾರಿ
4.46 ಕೋಟಿ ಅರ್ಹ ಮತದಾರರು: 1.7 ಕೋಟಿ ಮಂದಿ ಎಎಸ್‌ಡಿಡಿಒ ಪಟ್ಟಿ
ಬೆಂಗಳೂರು ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕದಲ್ಲಿ ಜೂನ್ 30ರಿಂದ ಆಗ 17ರವರೆಗೆ ನಡೆದ ಎನ್ಯೂಮರೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದ 43.81 ಲಕ್ಷ ಮತದಾರರಿಗೆ ಶೀಘ್ರವೇ ನೋಟಿಸ್ ಜಾರಿಯಾಗಲಿದೆ. ಆಗ 24 ರಿಂದ ಆರಂಭವಾಗಲಿರುವ ಈ ವಿಶೇಷ ಪರಿಷ್ಕರಣೆಯಲ್ಲಿ ಬೆಂಗಳೂರಿನ ಸುಮಾರು 24 ಲಕ್ಷ ಜನರಿಗೆ ನೋಟಿಸ್ ತಲುಪಲಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ತಿಳಿಸಿದರು.
ಚುನಾವಣಾ ಆಯೋಗದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 5.54 ಕೋಟಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿತ್ತು. ಈ ಪೈಕಿ 4.46 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಉಳಿದಂತೆ 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಕರಡು ಪಟ್ಟಿಯಲ್ಲಿ 2.21 ಕೋಟಿ ಪುರುಷರು, 2.24 ಕೋಟಿ ಮಹಿಳೆಯರು ಹಾಗೂ 2871 ಇತರ ವರ್ಗದ ಮತದಾರರು ಇದ್ದಾರೆ. 18 ರಿಂದ 19 ವರ್ಷದೊಳಗಿನ ಯುವ ಮತದಾರರ ಸಂಖ್ಯೆ 3.70 ಲಕ್ಷ ಆಗಿದೆ. ಸಾಮಾನ್ಯ ಮತದಾರರು ಮತ್ತು ಸರ್ವಿಸ್ ಎಲೆಕ್ಟರ್‌ಗಳನ್ನು ಸೇರಿಸಿದರೆ ಕರ್ನಾಟಕದಲ್ಲಿ ಒಟ್ಟು 4,46,80,151 ಮತದಾರರು ಇದ್ದಾರೆ. 85 ವರ್ಷ ಮೇಲ್ಪಟ್ಟ 3.92 ಲಕ್ಷ ಮತದಾರರು ಇದ್ದಾರೆ. ಶೇ. 95.24 ಮತದಾರರ ಮ್ಯಾಪಿಂಗ್ ಪೂರ್ಣವಾಗಿದೆ. ಆದರೆ 2,345,005 ಮತದಾರರಿಂದ ಯಾವುದೇ ಮ್ಯಾಪಿಂಗ್ ಮಾಹಿತಿ ಲಭ್ಯವಾಗಿಲ್ಲ ಎಂದರು.
ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
1.07 ಜನರ ಮತಹಕ್ಕಿಗೆ ಸಂಚಕಾರ: 5.54 ಕೋಟಿ ಮತದಾರರ ಪೈಕಿ 1.7 ಕೋಟಿ ಮತದಾರರ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಗೈರು, ಶಾಶ್ವತ ಸ್ಥಳಾಂತರ ಮತ್ತು ಇತರೆ ವರ್ಗದಲ್ಲಿ ಗುರುತಿಸಿದ 84.46 ಲಕ್ಷ ಮಂದಿ ಮತದಾರರು ನಮೂನೆ-6ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ, ಮತಪಟ್ಟಿಗೆ ಸೇರಿಕೊಳ್ಳಲು ಅವಕಾಶವಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಬೆನ್ನ ಪರಿಶೀಲನಾ ಪ್ರಕ್ರಿಯೆ ಆರಂಭ ವಾಗಲಿದೆ. ಮ್ಯಾಪಿಂಗ್‌ನಲ್ಲಿ ಅನುಮಾನಾಸ್ಪದ ಅಥವಾ ಅಪೂರ್ಣ ಮಾಹಿತಿ ನೀಡಿರುವ ಸುಮಾರು 2,035,000 ಮತದಾರರು ಹಾಗೂ ಯಾವುದೇ ಮ್ಯಾಪಿಂಗ್ ಮಾಹಿತಿ ನೀಡದ 2,345,005
ಮತದಾರರು ಸೇರಿದಂತೆ ಒಟ್ಟು ಸುಮಾರು 4,381,000 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ನೋಟಿಸ್ ನೀಡಿದ ಬಳಿಕ ಸಂಬಂಧಪಟ್ಟ ಮತದಾರರಿಂದ ಅಗತ್ಯ ದಾಖಲೆ ಮತ್ತು ಮಾಹಿತಿಯನ್ನು ಪಡೆದು ವಿಚಾರಣೆ ನಡೆಸಲಾಗುತ್ತದೆ. ನಂತರ ಎಇಆರ್‌ಒ ಅಥವಾ ಇಆರ್‌ಒ ಅವರು ನಿಯಮಾನುಸಾರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
1873 ಹೊಸ ಮತಗಟ್ಟೆಗಳ ಸೇರ್ಪಡೆ: ಒಂದು ಮತಗಟ್ಟೆಯಲ್ಲಿ 1500ಕ್ಕಿಂತ ಹೆಚ್ಚು ಮತದಾರರು ಇರಬಾರದು ಎಂಬ ಚುನಾವಣಾ ಆಯೋಗದ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಮತಗಟ್ಟೆಗಳ ಪುನರ್ ವಿಂಗಡಣೆ ಮಾಡಲಾಗಿದೆ. ಇದರ ಪರಿಣಾಮವಾಗಿ ಸುಮಾರು 1873 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗ ರಾಜ್ಯದಲ್ಲಿ 59,050 ಮತಗಟ್ಟೆಗಳು ಇದ್ದವು. ಇದೀಗ ಪುನರ್ವಿಂಗಡಣೆ ಬಳಿಕ ಮತಗಟ್ಟೆಗಳ ಸಂಖ್ಯೆ 60573ಕ್ಕೆ ಏರಿಕೆ ಯಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಇದುವರೆಗೆ ವಿವಿಧ ನಮೂನೆಗಳ ಮೂಲಕ ಒಟ್ಟು 14.67 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅನ್ಬು ಕುಮಾರ್ ತಿಳಿಸಿದರು.
ಫಾರ್ಮ್ 6, 7, 8 ಯಾವುದಕ್ಕೆ?:ಫಾರ್ಮ್-6 ಹೊಸ ಮತದಾರರ ಸೇರ್ಪಡೆಗೆ, ಫಾರ್ಮ್-7 ಮತದಾರರ ಹೆಸರು ಅಳಿಸುವಿಕೆಗೆ, ಫಾರ್ಮ್-8 ಹೆಸರು, ವಿಳಾಸ ಮತ್ತಿತರ ವಿವರಗಳ ತಿದ್ದುಪಡಿ ಹಾಗೂ ಸ್ಥಳಾಂತರಕ್ಕೆ ಬಳಸಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 4.80 ಲಕ್ಷ ಮಂದಿ ಫಾರ್ಮ್-6 ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ದಿನ ಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಏಳು ದಿನಗಳ ಕಾಲಾವಕಾಶ ನೋಟಿಸ್ ನೀಡಿದ ದಿನದಿಂದ ವಿಚಾರಣೆಗೆ ಕನಿಷ್ಠ ಏಳು ದಿನಗಳ ಕಾಲಾವಕಾಶ ಇರಬೇಕು. ಹೀಗಾಗಿ ಆ.24ರಂದು ನೋಟಿಸ್ ನೀಡಿದರೆ ಮರುದಿನವೇ ವಿಚಾರಣೆಗೆ ಹಾಜರಾಗಲು ಸೂಚಿಸುವಂತಿಲ್ಲ. ಮೊದಲ ಹಂತದ ವಿಚಾರಣೆ ಆಗ 31ರಿಂದ ಆರಂಭವಾಗಲಿದೆ. ಒಂದು ನೋಟಿಸ್ ನೀಡಿದ ನಂತರ ಮತದಾರರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತೊಂದು ಅವಕಾಶ ಕೇಳಬಹುದು. ಒಟ್ಟಾರೆ ಎರಡು ಬಾರಿ ಅವಕಾಶ ನೀಡಲಾಗುತ್ತದೆ. ನೋಟಿಸ್‌ನಲ್ಲಿ ಮತದಾರರು ಯಾವ ಕಾರಣಕ್ಕೆ ನೋಟಿಸ್ ಪಡೆದಿzರೆ, ಯಾವ ದಾಖಲಾತಿಗಳನ್ನು ಸಲ್ಲಿಸಬೇಕು, ವಿಚಾರಣೆ ನಡೆಯುವ ಸ್ಥಳ, ದಿನಾಂಕ ಹಾಗೂ ಸಮಯದ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಲಾಗುತ್ತದೆ ಎಂದರು.
ನೋಟಿಸ್ ಮನೆಗೇ ತಲುಪಲಿದೆ
ನೋಟಿಸ್ ಅನ್ನು ವಾಟ್ಸ್‌ಆಪ್, ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಮಾತ್ರ ನೀಡಲು ಅವಕಾಶವಿಲ್ಲ. ಮುದ್ರಿತ ನೋಟಿಸ್‌ನ ಹಾರ್ಡ್ ಕಾಪಿ ಭೌತಿಕವಾಗಿ ಮತದಾರರಿಗೆ ತಲುಪಿಸುವುದು ಕಡ್ಡಾಯ. ಬಿಎಲ್ಒಗಳು ಮನೆಗೆ ತೆರಳಿ ನೋಟಿಸ್ ನೀಡಲಿದ್ದಾರೆ. ಮತದಾರರು ಮನೆಯಲ್ಲಿ ಲಭ್ಯವಿಲ್ಲದಿದ್ದರೆ, ಮತದಾರರು ಸೂಚಿಸಿರುವ ಕುಟುಂಬದ ಸದಸ್ಯರು, ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರಿಗೆ ನೋಟಿಸ್ ಹಸ್ತಾಂತರಿಸಬಹುದು. ಆದಾಗ್ಯೂ, ಮತದಾರರನ್ನು ಸಂಪರ್ಕಿಸಲು ಎಸ್ ಎಂಎಸ್ ಅಥವಾ ಇತರ ತಾಂತ್ರಿಕ ವಿಧಾನಗಳನ್ನು ಹೆಚ್ಚುವರಿಯಾಗಿ ಬಳಸುವುದಕ್ಕೆ ನಿರ್ಬಂಧವಿಲ್ಲ. ಆದರೆ ಅಧಿಕೃತ ನೋಟಿಸ್ ಮಾತ್ರ ಭೌತಿಕ ರೂಪದ ಸೇವೆಯಾಗ ಬೇಕು ಎಂದರು.
*
ಒಟ್ಟು ಮತದಾರರು
4,46,35,975
ಪುರುಷ ಮತದಾರರು
2,21,59,240
ಮಹಿಳಾ ಮತದಾರರು
2,24,73,864
ಇತರೆ
2871
![]()
ಹೊಸ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ನಗರಪಾಲಿಕೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಫಾರ್ಮ್ -6 ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ವಿಶೇಷ ಅಭಿಯಾನ ನಡೆಸುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿಕೊಂಡು ಅಗತ್ಯವಿದ್ದಲ್ಲಿ ಸೂಕ್ತ ನಮೂನೆಗಳ ಮೂಲಕ ಅರ್ಜಿ ಸಲ್ಲಿಸಬಹುದು.
-ಅನ್ಬು ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ