ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿಜಿಟಲ್ ಅರೆಸ್ಟ್ ಪ್ರಕರಣ; ಬೆಂಗಳೂರಿನ ವೃದ್ಧೆಗೆ 24 ಕೋಟಿ ವಂಚಿಸಿದ್ದ 6 ಸೈಬರ್ ಖದೀಮರ ಬಂಧನ

Bengaluru digital arrest case: ಹರಿಯಾಣದ ಗುರುಗ್ರಾಮದಲ್ಲಿ ಕಚೇರಿ ಮಾಡಿಕೊಂಡಿದ್ದ ಗ್ಯಾಂಗ್,​ ಈ ಕೇಸ್​ಗೂ ಮುನ್ನ ಹಲವು ಸೈಬರ್ ಅರೆಸ್ಟ್ ಪ್ರಕರಣದಲ್ಲಿ ಭಾಗಿಯಾಗಿತ್ತು. ನಿವೃತ್ತರಾದವರನ್ನೇ ಟಾರ್ಗೆಟ್ ಮಾಡಿ, ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ವೃದ್ಧೆಯ ಡಿಜಿಟಲ್ ಅರೆಸ್ಟ್ ಕೇಸ್‌; 6 ಸೈಬರ್ ಖದೀಮರ ಬಂಧನ

-

Prabhakara R
Prabhakara R May 25, 2026 9:30 PM

ಬೆಂಗಳೂರು: ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್​​​ ಪ್ರಕರಣವೊಂದು (Digital Arrest) ಭಾನುವಾರ ಬೆಳಕಿಗೆ ಬಂದಿತ್ತು. ವೃದ್ಧೆಯನ್ನು ಡಿಜಿಟಲ್​ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂ. ವಂಚಿಸಿದ್ದ ಖದೀಮರರನ್ನು ಬಂಧಿಸುವಲ್ಲಿ ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 6 ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಸಿಟಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ದೇಶದ ವಿವಿಧೆಡೆ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂಬೈನ ಎ. ಮಲ್ಲಿಕ್, ತಮಿಳುನಾಡಿನ ಶಿವಗ್ಯಾನಂ, ಗುಜರಾತ್‌ನ ಪಾಲಕ್ ಬೈ ಪಟೇಲ್, ಮೊಹಮ್ಮದ್ ಹಮೀದ್, ದೆಹಲಿಯ ಓಂ ಪ್ರಕಾಶ್ ಸೇರಿ 6 ಆರೋಪಿಗಳನ್ನು ಬಂಧಿಸಲಾಗಿದೆ.

ಹರಿಯಾಣದ ಗುರುಗ್ರಾಮದಲ್ಲಿ ಕಚೇರಿ ಮಾಡಿಕೊಂಡಿದ್ದ ಗ್ಯಾಂಗ್,​ ಈ ಕೇಸ್​ಗೂ ಮುನ್ನ ಹಲವು ಸೈಬರ್ ಅರೆಸ್ಟ್ ಪ್ರಕರಣದಲ್ಲಿ ಭಾಗಿಯಾಗಿತ್ತು. ಬ್ಯಾಂಕ್​ಗಳ ಮೂಲಕ ಮಾಹಿತಿ ಪಡೆದುಕೊಂಡು ದೊಡ್ಡ ಉದ್ಯೋಗದಲ್ಲಿದ್ದು ನಿವೃತ್ತರಾದವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಬಂದ ನಂತರ ಹಲವು ಮ್ಯೂಲ್ ಖಾತೆ​ಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಈ ಸೈಬರ್ ವಂಚಕರ ಗ್ಯಾಂಗ್ ವಿಸ್ತರಿಸಿಕೊಂಡಿದೆ. ಸದ್ಯ ಆರೋಪಿಗಳ ಅಕೌಂಟ್​ನಲ್ಲಿದ್ದ 60 ಲಕ್ಷ ರೂ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.

ಕರ್ನಾಟಕದಲ್ಲೂ ತನ್ನ ಗ್ಯಾಂಗ್​ನ್ನು​ ವಿಸ್ತರಿಸಿಕೊಂಡಿದ್ದ ಆರೋಪಿಗಳು ರಾಜ್ಯದಲ್ಲಿ ಹುಡುಗರನ್ನು ಇಟ್ಟುಕೊಂಡು ಮಾಹಿತಿ ಪಡೆಯುತ್ತಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಯಲಾಗಿದೆ.

ಮನಿ ಲ್ಯಾಂಡರಿಂಗ್ ಹೆಸರಿನಲ್ಲಿ ವೃದ್ಧೆಯನ್ನು ಬೆದರಿಸಿ ವಂಚನೆ

ಬೆಂಗಳೂರಿನ ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ (74) ಎಂಬುವರನ್ನು ಡಿಜಿಟಲ್‌ ಅರೆಸ್ಟ್‌ ಮೂಲಕ ಖದೀಮರು ವಂಚಿಸಿದ್ದರು. ಮನಿ ಲ್ಯಾಂಡರಿಂಗ್ ಕೇಸ್ ಹೆಸರಿನಲ್ಲಿ ತಿಂಗಳಗಟ್ಟಲೆ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂ ವಂಚನೆ ಮಾಡಿದ್ದರು. ಲಕ್ಷ್ಮೀ ರಾಮಮೂರ್ತಿ ಅವರು ಈ ಹಿಂದೆ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.

ಬೆಂಗಳೂರು ಮತ್ತು ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿ ಅಮೆರಿಕದಲ್ಲಿರುವ ಮಕ್ಕಳ ಜತೆ ನೆಲೆಸಲು ವೃದ್ಧೆ ಮುಂದ್ದಾಗಿದ್ದರು. ಆದರೆ ಇದೇ ಹಣದ ಮೇಲೆ ಕಣ್ಣು ಹಾಕಿದ್ದ ಸೈಬರ್ ಖದೀಮರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿದ್ದರು. ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಾ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಮತ್ತು ಅಕೌಂಟ್ ಮನಿ ಲ್ಯಾಂಡರಿಂಗ್‌ಗೆ ಬಳಕೆಯಾಗಿದೆ. ಎಲ್ಲಾ ಹಣವನ್ನು ಪರಿಶೀಲನೆಗೆ ಕಳುಹಿಸಿ ಎಂದು ಆರ್​ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.

6 ವರ್ಷದ ನೆರೆ ಮನೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ 9ನೇ ತರಗತಿಯ ಬಾಲಕ; ತ್ರಿಪುರಾದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಅಮಾನುಷ ಘಟನೆ

ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ವೃದ್ದೆಯನ್ನು ಬೆದರಿಸಿದ್ದ ವಂಚಕರು, ಹಂತ ಹಂತವಾಗಿ ಬರೋಬ್ಬರಿ 24 ಕೋಟಿ ರೂ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಬಗ್ಗೆ ಬೆಂಗಳೂರು ಸಿಟಿ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು.