Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
Bangalore To Mangalore Train: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಎಸ್ಎಂವಿಟಿ ಬೆಂಗಳೂರು-ಮಂಗಳೂರು ನಡುವೆ ಏಪ್ರಿಲ್ 17ರಂದು ವಿಶೇಷ ರೈಲು ಸಂಚರಿಸಲಿದೆ. ಈ ವಿಶೇಷ ರೈಲು 20 ಬೋಗಿಯನ್ನು ಒಳಗೊಂಡಿದ್ದು, ಈ ರೈಲಿನಲ್ಲಿ ಸಂಚರಿಸಲು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.


ಬೆಂಗಳೂರು: ಬೆಂಗಳೂರು-ಕರಾವಳಿ ಜಿಲ್ಲೆಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಎಸ್ಎಂವಿಟಿ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು (Bangalore To Mangalore Train ) ಸಂಚರಿಸಲಿದೆ. ಈ ವಿಶೇಷ ರೈಲು 20 ಬೋಗಿಯನ್ನು ಒಳಗೊಂಡಿದ್ದು, ಏಪ್ರಿಲ್ 17ರ ಗುರುವಾರ ಬೆಂಗಳೂರು ನಗರದಿಂದ ಹೊರಡಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ನಡುವೆ ಸಂಚಾರ ನಡೆಸುವ ವಿಶೇಷ ರೈಲಿನ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದ್ದು, ಈ ರೈಲಿನಲ್ಲಿ ಸಂಚರಿಸಲು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.
ರೈಲು ವೇಳಾಪಟ್ಟಿ:
ರೈಲು ನಂಬರ್ 06579 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸಲಿದೆ. ಈ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ ಏಪ್ರಿಲ್ 17ರಂದು ರಾತ್ರಿ 11.55ಕ್ಕೆ ಹೊರಡಲಿದೆ. ಮಂಗಳೂರು ಜಂಕ್ಷನ್‌ಗೆ ಮರುದಿನ 4 ಬೆಳಗ್ಗೆ ಗಂಟೆಗೆ ತಲುಪಲಿದೆ.
ರೈಲು ನಂಬರ್ 06580 ಮಂಗಳೂರು ಜಂಕ್ಷನ್-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಈ ರೈಲು ಮಂಗಳೂರು ಜಂಕ್ಷನ್‌ನಿಂದ ಏಪ್ರಿಲ್ 20ರಂದು ಮಧ್ಯಾಹ್ನ 2.10ಕ್ಕೆ ಹೊರಡಲಿದೆ. ಬೆಂಗಳೂರು ನಗರಕ್ಕೆ ಮರುದಿನ ಬೆಳಗ್ಗೆ 7.30ಕ್ಕೆ ತಲುಪಲಿದೆ. ಈ ವಿಶೇಷ ರೈಲುಗಳು 20 ಬೋಗಿಯನ್ನು ಒಳಗೊಂಡಿವೆ. 1 ಫಸ್ಟ್ ಕ್ಲಾಸ್ ಎಸಿ ಬೋಗಿ, 2 ಎಸಿ 2 ಟೈರ್ ಬೋಗಿ, 4 ಎಸಿ ತ್ರಿ ಟೈರ್ ಬೋಗಿ, 7 ಸ್ಲೀಪರ್ ಕೋಚ್‌ಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಜನರಲ್ ಸೆಕೆಂಡ್ ಕ್ಲಾಸ್ ಲಗೇಜ್ ಕಂ ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ) ಒಳಗೊಂಡಿವೆ.
ಬೇಸಿಗೆ ವಿಶೇಷ ರೈಲು:
ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನೈರುತ್ಯ ರೈಲ್ವೆ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಹುಬ್ಬಳ್ಳಿ ಮತ್ತು ಗುಜರಾತ್ ಅಹಮದಾಬಾದ್ ಹತ್ತಿರವಿರುವ ವಾಟ್ವಾ ನಿಲ್ದಾಣಗಳ ನಡುವೆ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.
ರೈಲು ಸಂಖ್ಯೆ 07333 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ವಾಟ್ವಾ ಏಪ್ರಿಲ್ 13 ರಿಂದ ಜೂನ್ 15ರವರೆಗೆ ಸಂಚಾರ ನಡೆಸಲಿದೆ. ಪ್ರತಿ ಭಾನುವಾರದ ಸಂಜೆ 7:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದೆ. ಈ ರೈಲು ಮರುದಿನ ಸೋಮವಾರ ಸಂಜೆ 6:45 ಗಂಟೆಗೆ ವಾಟ್ವಾ ತಲುಪಲಿದೆ.
ರೈಲು ಸಂಖ್ಯೆ 07334 ವಾಟ್ವಾದಿಂದ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಏಪ್ರಿಲ್ 14 ರಿಂದ ಜೂನ್ 16 ರವರೆಗೆ ಸಂಚಾರ ನಡೆಸಲಿದೆ. ಪ್ರತಿ ಸೋಮವಾರ ವಾಟ್ವಾದಿಂದ ರಾತ್ರಿ 9:45 ಗಂಟೆಗೆ ರೈಲು ಹೊರಡಲಿದೆ. ಮಂಗಳವಾರ ರಾತ್ರಿ 7:45ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ರೈಲು 1-ಎಸಿ ಫಸ್ಟ್ ಕಮ್ ಎಸಿ 2 ಟೈರ್, 1-ಎಸಿ 2-ಟೈರ್, 3-ಎಸಿ 3-ಟೈರ್, 8-ಸ್ಲಿಪರ್ ಕ್ಲಾಸ್, 5-ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2-ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ಸುದ್ದಿಯನ್ನೂ ಓದಿ | Class 1 age limit: ಪೋಷಕರಿಗೆ ಗುಡ್ ನ್ಯೂಸ್; 1ನೇ ತರಗತಿ ಪ್ರವೇಶಕ್ಕೆ ಮಕ್ಕಳ ಕನಿಷ್ಠ ವಯೋಮಿತಿ ಸಡಿಲಿಕೆ