ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕಠಿಣ ನಿಯಮ ಜಾರಿ; ಬೆಂಗಳೂರು ಕಮಿಷನರ್ ಮಹತ್ವದ ಸುದ್ದಿಗೋಷ್ಠಿ

chinnaswamy stadium: ಮಾರ್ಚ್ 28 ಮತ್ತು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಈ ಬಾರಿ ಐಪಿಎಲ್‌ ಪಂದ್ಯಗಳಿಗೆ ಟಿಕೆಟ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಖರೀದಿಸಬೇಕು. ಟಿಕೆಟ್ ಖರೀದಿಸಿದವರು ಮಾತ್ರ ಪಂದ್ಯ ವೀಕ್ಷಣೆಗೆ ಆಗಮಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಅನುಸರಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಐಪಿಎಲ್‌ 2026; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕಠಿಣ ನಿಯಮ

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ. -

Prabhakara R
Prabhakara R Mar 24, 2026 4:11 PM

ಬೆಂಗಳೂರು: ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (chinnaswamy stadium) ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆರ್‌ಸಿಬಿ ತಂಡವು ಎಸ್‌ಆರ್‌ಎಚ್‌ ವಿರುದ್ಧ ಸೆಣಸಲಿದ್ದು, ಈ ಮೂಲಕ ಟೂರ್ನಿಗೆ ಚಾಲನೆ ನೀಡಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಸಂಚಾರ ವ್ಯವಸ್ಥೆ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಮಾರ್ಚ್ 28 ಮತ್ತು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಈ ಬಾರಿ ಐಪಿಎಲ್‌ ಪಂದ್ಯಗಳಿಗೆ ಟಿಕೆಟ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಖರೀದಿಸಬೇಕು. ಟಿಕೆಟ್ ಖರೀದಿಸಿದವರು ಮಾತ್ರ ಪಂದ್ಯ ವೀಕ್ಷಣೆಗೆ ಆಗಮಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಅನುಸರಿಸಲಾಗುವುದು ಎಂದು ತಿಳಿಸಿದ್ದಾರೆ.

ಮ್ಯಾಚ್‌ ಟಿಕೆಟ್ ಹೊಂದಿದ್ದರೆ ಮೆಟ್ರೋ ಪ್ರಯಾಣ ಉಚಿತ

ಇದೇ ಸಂದರ್ಭದಲ್ಲಿ ಪ್ರೇಕ್ಷಕರ ಸೌಕರ್ಯ ಹಾಗೂ ಟ್ರಾಫಿಕ್ ನಿಯಂತ್ರಣದ ದೃಷ್ಟಿಯಿಂದ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟಿಕೆಟ್ ಹೊಂದಿರುವವರಿಗೆ ಮೆಟ್ರೋ ರೈಲು ಪ್ರಯಾಣವನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಸಮಿತಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.



ಪ್ರೇಕ್ಷಕರು ಸಾಧ್ಯವಾದಷ್ಟು ಮೆಟ್ರೋ ಸೇವೆಯನ್ನು ಬಳಸುವಂತೆ ಮನವಿ ಮಾಡಿರುವ ಆಯುಕ್ತರು, ಇದರಿಂದ ಸ್ಟೇಡಿಯಂ ಸುತ್ತಮುತ್ತ ವಾಹನಗಳ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದರು. ಪಂದ್ಯ ದಿನಗಳಲ್ಲಿ ಪ್ರತಿ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ ಇರಲಿದ್ದು, ಹೆಚ್ಚಿನ ಜನಸಂದಣಿಯನ್ನು ನಿಭಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಸ್ಟೇಡಿಯಂ ಸುತ್ತಲಿನ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಕ್ವೀನ್ಸ್ ರೋಡ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಕಬ್ಬನ್ ರೋಡ್‌ನಲ್ಲಿ ಏಳು ಪ್ರವೇಶ ದ್ವಾರಗಳನ್ನು ತೆರೆಯಲಾಗಿದೆ. ಒಟ್ಟು 28 ಎಂಟ್ರಿ ಪಾಯಿಂಟ್‌ಗಳ ಮೂಲಕ ಪ್ರೇಕ್ಷಕರನ್ನು ಸ್ಟೇಡಿಯಂ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪಂದ್ಯ ಆರಂಭಕ್ಕೂ ನಾಲ್ಕು ಗಂಟೆಗಳ ಮೊದಲು ಸ್ಟೇಡಿಯಂ ಗೇಟ್‌ಗಳನ್ನು ತೆರೆಯಲಾಗುತ್ತದೆ. ಆದ್ದರಿಂದ ಎಲ್ಲಾ ಪ್ರೇಕ್ಷಕರು ಮುಂಚಿತವಾಗಿಯೇ ಆಗಮಿಸುವಂತೆ ಸೂಚಿಸಲಾಗಿದೆ.

ನಾಲ್ಕು ಕಡೆ ವಾಹನ ಪಾರ್ಕಿಂಗ್‌ ವ್ಯವಸ್ಥೆ

ಇನು ಪಂದ್ಯಕ್ಕೆ ಆಗಮಿಸುವವರು ತಮ್ಮ ವಾಹನಗಳನ್ನು ಎಲ್ಲಿ ಪಾರ್ಕ್ ಮಾಡಬೇಕು ಎಂಬ ಮಾಹಿತಿ ಟಿಕೆಟ್ ಖರೀದಿ ಮಾಡುವಾಗಲೇ ನೀಡಲಾಗುತ್ತದೆ. ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್ ವಲಯವನ್ನು ಜಾರಿಗೊಳಿಸಲಾಗಿದೆ. ಗರುಡ ಮಾಲ್‌, ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈ ಸ್ಕೂಲ್‌ ಹಾಗೂ ಸೇಂಟ್‌ ಜೋಸೆಫ್‌ ಬಾಯ್ಸ್‌ ಹೈ ಸ್ಕೂಲ್‌, ಫ್ರೀಡಂ ಪಾರ್ಕ್‌ನಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್‌ ಬುಕ್‌ ಮಾಡುವಾಗಲೇ ಪಾರ್ಕಿಂಗ್‌ ಸ್ಥಳ ಆಯ್ಕೆಮಾಡಿಕೊಳ್ಳಬಹುದು. ಪಾರ್ಕಿಂಗ್‌ ಸ್ಥಳದಿಂದ ಕ್ರೀಡಾಂಗಣಕ್ಕೆ ಹೋಗಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹೇಗಿದೆ?

ಪ್ರೇಕ್ಷಕರು ರಸ್ತೆಯಲ್ಲಿ ನಿಲ್ಲುವಂತಿಲ್ಲ

ಈ ಬಾರಿ ಪ್ರೇಕ್ಷಕರಿಗೆ ರಸ್ತೆಯಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ಟಿಕೆಟ್‌ ಇರುವವರಿಗೆ ಕ್ರೀಡಾಂಗಣದಲ್ಲಿ ಹೋಲ್ಡಿಂಗ್‌ ಏರಿಯಾ ವ್ಯವಸ್ಥೆ ಮಾಡಲಾಗಿದೆ. ಪ್ರಾಕ್ಟೀಸ್‌ ಗ್ರೌಂಡ್‌ ಅನ್ನು ಹೋಲ್ಡಿಂಗ್‌ ಏರಿಯಾ ಮಾಡಲಾಗಿದೆ. ಟಿಕೆಟ್‌ ತೋರಿಸಿ ಒಳಗೆ ಹೋಗಬೇಕಾಗುತ್ತದೆ. ಜನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.