Farmers Protest for 128th day: 128ನೇ ದಿನಕ್ಕೂ ಮುಂದುವರಿದ ಜಂಗಮಕೋಟೆ ರೈತರ ಹೋರಾಟ; ಸರ್ಕಾರಕ್ಕೆ 'ಪಿಂಡ ಪ್ರದಾನ' ಮಾಡಿ ಆಕ್ರೋಶ
ಜಂಗಮಕೋಟೆ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಬಾರದು. ಕೃಷಿಗೆ ಯೋಗ್ಯವಲ್ಲದ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ನಮ್ಮ ವಿರೋಧವಿಲ್ಲ. ಆದರೆ ಅನ್ನ ಬೆಳೆಯುವ ಫಲವತ್ತಾದ ಭೂಮಿಯನ್ನು ಉಳಿಸಬೇಕು ಎಂದು ರೈತರು ಒತ್ತಾಯಿಸಿದರು.
-
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಸುಮಾರು 2,390 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 128ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ವಿರುದ್ಧ ಪಿಂಡ ಪ್ರದಾನ ಹಾಗೂ ಪೊರಕೆ ಪೂಜೆ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ರೈತರ ಹುತಾತ್ಮ ದಿನಾಚರಣೆ ಅಂಗವಾಗಿ ರೈತ ಸಂಘ, ಹಸಿರು ಸೇನೆ ಹಾಗೂ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ನಡೆದ ಪ್ರತಿಭಟನೆ ಯಲ್ಲಿ ಭಾಗವಹಿಸಿದ ರೈತರು, "ನಮ್ಮ ಭೂಮಿ ನಮ್ಮ ಹಕ್ಕು... ಪ್ರಾಣ ಬೇಕಾದರೂ ಕೊಡುತ್ತೇವೆ, ಭೂಮಿ ಕೊಡುವುದಿಲ್ಲ" ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Bidadi Farmers protest: ಬಿಡದಿ ಟೌನ್‌ಶಿಪ್ ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದು ಕಳಿಸಿದ ರೈತ ಮಹಿಳೆಯರು!
ಜಂಗಮಕೋಟೆ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಬಾರದು. ಕೃಷಿಗೆ ಯೋಗ್ಯವಲ್ಲದ ಪ್ರದೇಶ ದಲ್ಲಿ ಕೈಗಾರಿಕೆ ಸ್ಥಾಪಿಸಲು ನಮ್ಮ ವಿರೋಧವಿಲ್ಲ. ಆದರೆ ಅನ್ನ ಬೆಳೆಯುವ ಫಲವತ್ತಾದ ಭೂಮಿ ಯನ್ನು ಉಳಿಸಬೇಕು ಎಂದು ರೈತರು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್ ರೆಡ್ಡಿ ಮಾತನಾಡಿ, ಕಳೆದ 128 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ರೈತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಸರ್ಕಾರ ರೈತರ ಪರವೋ ಅಥವಾ ಕಾರ್ಪೊರೇಟ್ ಪರವೋ ಎಂಬುದನ್ನು ಸ್ಪಷ್ಟ ಪಡಿಸಬೇಕು. ರೈತರ ಪಾಲಿಗೆ ಸರ್ಕಾರ ಸತ್ತುಹೋಗಿದೆ ಎಂಬ ಸಂಕೇತವಾಗಿ ಪಿಂಡ ಪ್ರದಾನ ನಡೆಸಲಾಗಿದೆ. ಫಲವತ್ತಾದ ಭೂಮಿಯನ್ನು ಉಳಿಸಿಕೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ ಮಾತನಾಡಿ, ಕೈಗಾರಿಕೆ ಗಳಿಗೆ ಕೃಷಿಯೇತರ ಭೂಮಿಯನ್ನು ಬಳಸಿಕೊಳ್ಳಲಿ. ಆದರೆ ರೈತರ ಬದುಕಿನ ಆಧಾರವಾಗಿರುವ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳುವುದು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ. ನೂರಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರು ವುದು ನೋವಿನ ಸಂಗತಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮಹಿಳೆಯರು, "ದೇಶದ ಬೆನ್ನೆಲುಬಾದ ರೈತರ ಭೂಮಿಯ ಮೇಲೆ ಸರ್ಕಾರ ಕಣ್ಣು ಹಾಕಬಾರದು. ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ" ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಗೋಪಾಲ್, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ, ಕಾರ್ಯಾಧ್ಯಕ್ಷ ಅಶ್ವತ್ಥನಾರಾಯಣಗೌಡ, ಉಪಾಧ್ಯಕ್ಷ ಅಜಿತ್ ಕುಮಾರ್, ತಾದೂರು ಮಂಜುನಾಥ್, ಮರಳಕುಂಟೆ ರಾಮಾಂಜಿನಪ್ಪ, ಗುಡಿಬಂಡೆ ಸೋಮಶೇಖರ್, ರಮೇಶ್, ನಾರಾಯಣಸ್ವಾಮಿ, ಅಂಬಿಕಾ, ಗೌರಮ್ಮ, ಲಕ್ಷ್ಮಮ್ಮ, ರತ್ನಮ್ಮ ಸೇರಿದಂತೆ ನೂರಾರು ರೈತರು ಹಾಗೂ ಹೋರಾಟ ಸಮಿತಿ ಸದಸ್ಯರು ಭಾಗವಹಿಸಿದ್ದರು.