ರಾಜ್ಯಕ್ಕೆ ಮತ್ತೊಂದು ಹೈ ಸ್ಪೀಡ್ ರೈಲ್ವೆ ಕಾರಿಡಾರ್; ರೈಲ್ವೆ ಸಚಿವರ ಜತೆ ಎಚ್.ಡಿ. ಕುಮಾರಸ್ವಾಮಿ ಮಾತುಕತೆ
ಈಗಾಗಲೇ ರಾಜ್ಯಕ್ಕೆ 2 ಹೈ ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತುಕತೆ. -
ನವದೆಹಲಿ ಫೆ. 4: ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಸಂಪರ್ಕಿಸಲು 7 ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಣೆ ಮಾಡಲಾಗಿತ್ತು. ಆದರೆ, ಬೆಂಗಳೂರು-ಪುಣೆ ನಡುವೆ ಇಂತಹ ಕಾರಿಡಾರ್ (Bengaluru-Pune high-speed railway corridor) ಬೇಕಿತ್ತು ಎಂದು ಕರ್ನಾಟಕದ ಹಲವು ಸಚಿವರು ಹೇಳಿದ್ದರು. ಇದರ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನೀಡಲು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಬಜೆಟ್ ನಂತರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಪ್ರಸಾರ ಖಾತೆ ಸಚಿವರಾದ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ರೈಲ್ವೆ ಮೂಲಸೌಕರ್ಯ ವೃದ್ಧಿಸುವ ಹಾಗೂ ರಾಜ್ಯದ ಇನ್ನೂ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ.
ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್
ಈಗಾಗಲೇ ರಾಜ್ಯಕ್ಕೆ ಹೈ ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲಾಗಿದೆ. ಈ ಮಾರ್ಗವು ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದು ಹೋಗಲಿದೆ ಎಂಬುದಾಗಿ ರೈಲ್ವೆ ಸಚಿವರು ತಮಗೆ ತಿಳಿಸಿದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅಲ್ಲದೆ, ಬೆಂಗಳೂರು-ಮುಂಬಯಿಗೆ ಹೊಸ ರೈಲು ಆರಂಭಿಸಲಾಗುವುದು ಎನ್ನುವ ಮಾಹಿತಿಯನ್ನು ರೈಲ್ವೆ ಸಚಿವರು ತಮಗೆ ನೀಡಿದರು. ಬೆಂಗಳೂರು-ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್ ಹಾಗೂ ಬೆಂಗಳೂರು-ಮುಂಬಯಿ ನಡುವಿನ ಹೊಸ ರೈಲಿನಿಂದ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಹೊಸ ರೈಲು ಸಂಪರ್ಕ ಮತ್ತು ಹಾಲಿ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್‌ಗಳ ಅನುಷ್ಠಾನದ ಕುರಿತು ವಿವರವಾದ ಮಾತುಕತೆ ನಡೆಸಲಾಯಿತು ಎಂದು ಸಚಿವರು ಹೇಳಿದ್ದಾರೆ.
ಮಂಡ್ಯದಲ್ಲಿ ರೈಲ್ವೆ ಮೂಲಸೌಕರ್ಯದ ಬಗ್ಗೆ ಚರ್ಚೆ:
ಮಂಡ್ಯ ಲೋಕಸಭೆ ಕ್ಷೇತ್ರವೂ ಸೇರಿ ಕರ್ನಾಟಕದ ಎಲ್ಲಾ ಬಾಕಿ ಇರುವ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್‌ಪ್ರೆಸ್ ರಾಮನಗರದಲ್ಲಿ ನಿಲುಗಡೆಯನ್ನು ಕೋರಿ ಮನವಿ ಮಾಡಲಾಯಿತು. ಅಲ್ಲದೆ, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮಂಡ್ಯ ಜಿಲ್ಲೆಯಲ್ಲಿ ಸುಧಾರಿತ ಆಧಾರ್ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಕೂಡ ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಯಿತು.
ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ, ಸಂಪರ್ಕ ಮತ್ತು ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರ ಜತೆ ನಡೆಸಿದ ಫ್ರಲಪ್ರದವಾಗಿತ್ತು ಎಂದು ಅವರು ಹೇಳಿದರು. ತಮ್ಮ ಮನವಿಗಳ ಬಗ್ಗೆ ಕೇಂದ್ರ ರೈಲ್ವೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಅವರು ಉಪಸ್ಥಿತರಿದ್ದರು.