Internal Reservation: ಒಳಮೀಸಲಾತಿ ಜಾರಿ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ; ನೇಮಕಾತಿಗಳಿಗೆ ಪರಿಷ್ಕೃತ ಅಧಿಸೂಚನೆ
ಏಪ್ರಿಲ್ 24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶೇ.15 ಎಸ್‌ಸಿ ಮೀಸಲಾತಿಯಲ್ಲೇ ವರ್ಗೀಕರಣಕ್ಕೆ ನಿರ್ಧರಿಸಿದ್ದ ಮಾಡಿದ್ದ ಸರ್ಕಾರ, ಎಸ್‌ಸಿ ಎಡಗೈ ಜಾತಿಗಳಿಗೆ ಶೇ. 5.25, ಬಲಗೈ ಜಾತಿಗಳಿಗೆ 5.25, ಬೋವಿ, ಲಂಬಾಣಿ, ಕೊರಚ, ಕೊರಮ ಸೇರಿ 59 ಅಲೆಮಾರಿ ಜಾತಿಗಳಿಗೆ 4.5 ಮೀಸಲಾತಿ ನೀಡಲು ತೀರ್ಮಾನಿಸಲಾಗಿತ್ತು. ಇದೀಗ ಒಳ ಮೀಸಲಾತಿ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದನ್ವಯ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17 ರಿಂದ ಶೇ.15ಕ್ಕೆ ಸೀಮಿತಗೊಳಿಸಿ, ಒಳಮೀಸಲಾತಿ (Internal Reservation) ಜಾರಿ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಏಪ್ರಿಲ್ 24ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ನಿಗದಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿತ್ತು. ಇದೀಗ ಒಳ ಮೀಸಲಾತಿ ಜಾರಿ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಆಶಾಕುಮಾರಿ ಎ.ಜೆ. ಆದೇಶ ಹೊರಡಿಸಿದ್ದಾರೆ.
ಎಸ್‌ಸಿ ಮೀಸಲಾತಿ ಪ್ರಮಾಣ ಶೇ.17 ರಿಂದ 15ಕ್ಕೆ ಸೀಮಿತ
27.02.2026ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ, 2022ನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ, ಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ, ದಿನಾಂಕ 27.11.2025ರ ನಂತರದಲ್ಲಿ ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ (ಮೀಸಲಾತಿ ಪ್ರಮಾಣ ಶೇ.50) ಅಧಿಸೂಚನೆಗಳನ್ನು ಹೊರಡಿಸುವಂತೆ ಎಲ್ಲಾ ನೇಮಕಾತಿ/ಆಯ್ಕೆ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು. ಅದರಂತೆ ನೇಮಕಾತಿ ಹಾಗೂ ಪ್ರವೇಶಾತಿಗಳಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಶೇಕಡಾ 17 ರಿಂದ 15ಕ್ಕೆ ಸೀಮಿತಗೊಳಿಸಿ ಅದಕ್ಕೆ ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
5.25, 5.25, 4.5 ಪ್ರಮಾಣದಲ್ಲಿ ಒಳ ಮೀಸಲಾತಿ ಅನುಷ್ಠಾನ
ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಶೇ.50% ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಅಳವಡಿಸಿಕೊಂಡು ನೇಮಕಾತಿ ಮುಂದುವರಿಸಲು ನಿರ್ಧರಿಸಿರುವುದರಿಂದ, ಅದರಂತೆ ನೇಮಕಾತಿ ಹಾಗೂ ಪ್ರವೇಶಾತಿಗಳಲ್ಲಿ ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇಕಡಾ 15 ಮೀಸಲಾತಿಯಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಪ್ರವರ್ಗ-ಸಿ ಗಳಿಗೆ ಒಳಮೀಸಲಾತಿಯನ್ನು ಕ್ರಮವಾಗಿ 5.25, 5.25, 4.5 ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಪ್ರವರ್ಗ-ಸಿಗೆ ಲಭ್ಯವಾಗುವ ಹುದ್ದೆಗಳಲ್ಲಿ/ಪ್ರವೇಶಾತಿ ಸೀಟುಗಳಲ್ಲಿ ಶೇಕಡಾ 20ರಷ್ಟು ಹುದ್ದೆಗಳನ್ನು/ಪ್ರವೇಶಾತಿ ಸೀಟುಗಳನ್ನು ಪರಿಶಿಷ್ಟ ಜಾತಿಗಳಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸುವುದು. ಒಂದು ವೇಳೆ, ಈ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದವರು ಲಭ್ಯವಾಗದಿದ್ದಲ್ಲಿ ಆ ಹುದ್ದೆಗಳನ್ನು ಹಾಗೂ ಪ್ರವೇಶಾತಿ ಸೀಟುಗಳನ್ನು ಪ್ರವರ್ಗ 'ಸಿ' ಯ ಇತರೆ ಜಾತಿಗಳಿಗೆ ಲಭ್ಯಗೊಳಿಸಬೇಕು.
ನೇಮಕಾತಿಗಳಲ್ಲಿ ಮೇಲಿನ ಮೀಸಲಾತಿ ಪ್ರಮಾಣವನ್ನು ಅನುಷ್ಠಾನಗೊಳಿಸಲು 400 ಬಿಂದುಗಳ ವರ್ತುಲಗಳನ್ನು ಅನುಪಾಲಿಸತಕ್ಕದ್ದು; ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಾಗುತ್ತಿದ್ದಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಪರಿಶಿಷ್ಟ ಜಾತಿ ಸಾಮಾನ್ಯ ಎಂದು ಪರಿಗಣಿಸಿ, ನೇಮಕಾತಿ ಮಾಡತಕ್ಕದ್ದು ಎಂದು ತಿಳಿಸಲಾಗಿದೆ.
ನೇಮಕಾತಿಗಳಿಗೆ ಪರಿಷ್ಕೃತ ಅಧಿಸೂಚನೆ
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 02 ಸೇಹಿಮ 2025 ದಿನಾಂಕ:03.09.2025ರನ್ವಯ ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ಅಳವಡಿಸಿಕೊಂಡು ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳನ್ನು ಅಥವಾ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 01 ಸೇಹಿಮ 2026 ದಿನಾಂಕ:27.02.2026 ರಂತೆ ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಮೇಲಿನಂತೆ ಒಳಮೀಸಲಾತಿ ಅಳವಡಿಸಿಕೊಂಡು ಪರಿಷ್ಕೃತ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ, ನೇಮಕಾತಿಗಳನ್ನು ಮಾಡಬೇಕು.
ಹೊಸ ಒಳ ಮೀಸಲಾತಿ ಅನ್ವಯ 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ: ಸಿಎಂ ಘೋಷಣೆ
ಮುಂದೆ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿಸಿರುವ ಶೇಕಡಾ 24ರಷ್ಟು ಮೀಸಲಾತಿ ಪ್ರಮಾಣವನ್ನು ಒಪ್ಪಿದಲ್ಲಿ ಶೇಕಡಾ 6 ರಷ್ಟು ಹುದ್ದೆಗಳನ್ನು ಬ್ಯಾಕ್‌ಲಾಗ್ ಹುದ್ದೆಗಳೆಂದು ಪರಿಗಣಿಸಿ ನೇಮಕಾತಿ ಮಾಡುವುದು; ಈಗಾಗಲೇ ಆರ್ಥಿಕ ಇಲಾಖೆಯು ಅನುಮೋದನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.