Doctors strike: ರಾಜ್ಯ ಸರ್ಕಾರದ ಸಂಧಾನ ಯಶಸ್ವಿ; ಮುಷ್ಕರ ವಾಪಸ್ ಪಡೆದ ವೈದ್ಯರು
ವೈದ್ಯಾಧಿಕಾರಿಗಳ ಸಂಘದೊಂದಿಗೆ ಸಚಿವ ಮಹದೇವಪ್ಪ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡಿದ್ದು, ವೈದ್ಯರ ಬೇಡಿಕೆಗಳನ್ನು ಆಲಿಸಿ, ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಬುಧವಾರದಿಂದ ಕರೆದಿದ್ದ ಮುಷ್ಕರದಿಂದ ಹಿಂದೆ ಸರಿದಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಸರ್ಕಾರದ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆ ಓಪಿಡಿ ಮುಷ್ಕರದಿಂದ (Doctors strike) ವೈದ್ಯರು ಹಿಂದೆ ಸರಿದಿದ್ದಾರೆ. ಹೀಗಾಗಿ ನಾಳೆಯಿಂದ ಎಂದಿನಂತೆ ಓಪಿಡಿ ಕಾರ್ಯ ನಿರ್ವಹಿಸಲಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮಾರ್ಚ್ 10ರಿಂದ ಮುಷ್ಕರಕ್ಕೆ ಕರೆ ನೀಡಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಇಂದು ವೈದ್ಯಾಧಿಕಾರಿಗಳ ಸಂಘದ ಜೊತೆ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದೆ. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ವೈದ್ಯರು ಹಿಂಪಡೆದಿದ್ದಾರೆ.
ವೈದ್ಯಾಧಿಕಾರಿಗಳ ಸಂಘದೊಂದಿಗೆ ಸಚಿವ ಮಹಾದೇವಪ್ಪ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡಿದ್ದು, ವೈದ್ಯರ ಬೇಡಿಕೆಗಳನ್ನು ಆಲಿಸಿ, ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ.
ಸುಮಾರು 15 ಬೇಡಿಕೆಗಳ ಈಡೇರಿಕೆಗೆ ವೈದ್ಯಾಧಿಕಾರಿಗಳ ಸಂಘ ಒತ್ತಾಯ ಮಾಡಿತ್ತು. ಮುಂಬಡ್ತಿ, ವರ್ಗಾವಣೆ, ಜೇಷ್ಠತೆ ಪಟ್ಟಿ, ಔಷಧಿ ಪೂರೈಕೆ, ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟಿದ್ದರು. ಅದರಲ್ಲಿ ಕೆಲವೊಂದು ಬೇಡಿಕೆಗಳ ಬಗ್ಗೆ ಮುಂದಿನ ವಾರದಲ್ಲಿ ಚರ್ಚೆ ಮಾಡುತ್ತೇವೆ. ಇವತ್ತಿನ ಸಭೆ ಯಶಸ್ವಿಯಾಗಿದೆ. ಸಿಎಂಗೆ ನಾನು, ಮಹದೇವಪ್ಪನವರು ಮಾಹಿತಿ ಕೊಟ್ಟಿದ್ದೇವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಹೆಣ್ಣು ಭ್ರೂಣಹತ್ಯೆ ತಡೆಗೆ ನೋಡಲ್ ಆಫೀಸರ್ ನೇಮಕ
ಬೆಂಗಳೂರು: ಹೆಣ್ಣು ಭ್ರೂಣಹತ್ಯೆ ವಿರುದ್ಧ ಕಣ್ಗಾವಲು ಮತ್ತು ಕಟ್ಟುನಿಟ್ಟಿನ ಕ್ರಮವಹಿಸುವ ಸಲುವಾಗಿಯೇ ಪ್ರತಿ ಜಿಲ್ಲೆಯಲ್ಲಿ ನೋಡಲ್ ಆಫೀಸರ್ ನೇಮಿಸಲಾಗಿದೆ. PCPNDT ಕಾನೂನು ಕೂಡ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದಾಗ್ಯೂ, ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿವಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರ ಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿರುವ ಅವರು, ಗಂಡು-ಹೆಣ್ಣು ಸಮಾನರು, ಎರಡೂ ಮಕ್ಕಳನ್ನ ಸಮಾನವಾಗಿ ಕಾಣಬೇಕು, ಬೆಳೆಸಬೇಕು ಅನ್ನೋ ಭಾವನೆ ಎಲ್ಲಾ ಜನಸಮುದಾಯದಲ್ಲೂ ಮೂಡಿಸಲು ವ್ಯಾಪಕವಾಗಿ ಎಲ್ಲರನ್ನು ಒಳಗೊಂಡಂತೆ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಈ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜದ ಬಳಿ ವಿನಂತಿಸುವೆ, ಸರ್ಕಾರದೊಂದಿಗೆ ಕೈ ಜೋಡಿಸಿ, ಹೆಣ್ಣು ಭ್ರೂಣಹತ್ಯೆ ವಿರುದ್ಧ ಅರಿವು ಮೂಡಿಸಲು ಮುಂದಾಗಿರಿ ಎಂದು ಕರೆ ನೀಡಿದ್ದಾರೆ.