ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಾಗಿ ಪಿ. ತ್ಯಾಗರಾಜ್, ರಾಘವೇಂದ್ರ ಭಟ್ ಸೇರಿ ಮೂವರ ನೇಮಕ

Media Secretary to Chief Minister: ಪಿ. ತ್ಯಾಗರಾಜ್ ಅವರು ಕರ್ನಾಟಕ ಮಾಧ್ಯಮ ರಂಗದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಹಿರಿಯ ಪತ್ರಕರ್ತರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿಯೂ ಪಿ. ತ್ಯಾಗರಾಜ್ ಕಾರ್ಯನಿರ್ವಹಿಸಿದ್ದರು. ಇದೀಗ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಮೇಲೆ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಸಿಎಂ ಮಾಧ್ಯಮ ಕಾರ್ಯದರ್ಶಿಗಳಾಗಿ ಪಿ. ತ್ಯಾಗರಾಜ್ ಸೇರಿ ಮೂವರ ನೇಮಕ

ಪಿ. ತ್ಯಾಗರಾಜ್, ರಾಘವೇಂದ್ರ ಭಟ್ ಮತ್ತು ಸಿಎಂ ಡಿ.ಕೆ.ಶಿವಕುಮಾರ್‌. -

Prabhakara R
Prabhakara R Jul 8, 2026 7:48 PM

ಬೆಂಗಳೂರು: ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು (Media Secretary to Chief Minister) ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗಾಯತ್ರಿ ಜಿ.ಎನ್.‌ ಅವರು ಆದೇಶ ಹೊರಡಿಸಿದ್ದಾರೆ.

ಹಿರಿಯ ಪತ್ರಕರ್ತ ಪಿ. ತ್ಯಾಗರಾಜ್ (Thyagaraj P) ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ -1, ಆರ್. ಜಯಪ್ರಕಾಶ್ ಅವರನ್ನು ಸಿಎಂ ಮಾಧ್ಯಮ ಕಾರ್ಯದರ್ಶಿ - 2 ಹಾಗೂ ರಾಘವೇಂದ್ರ ಭಟ್ ಅವರನ್ನು ಸಿಎಂ ಮಾಧ್ಯಮ ಕಾರ್ಯದರ್ಶಿ - 3 ಹುದ್ದೆಗೆ ನೇಮಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ-1 ಆಗಿ ನೇಮಕವಾಗಿರುವ ಪಿ. ತ್ಯಾಗರಾಜ್ ಅವರು ಕರ್ನಾಟಕ ಮಾಧ್ಯಮ ರಂಗದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಹಿರಿಯ ಪತ್ರಕರ್ತರಾಗಿದ್ದಾರೆ. ಈ ಹಿಂದೆ 'ವಿಜಯ ಕರ್ನಾಟಕ' ಮತ್ತು 'ಕನ್ನಡ ಪ್ರಭ' ಪತ್ರಿಕೆಗಳಲ್ಲಿ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ 'ವಿಶ್ವವಾಣಿ' ದಿನಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಇತಿಹಾಸ ಇವರಿಗಿದೆ.

ಮಾಧ್ಯಮ ಕಾರ್ಯದರ್ಶಿ-2 ಆಗಿ ನೇಮಕವಾಗಿರುವ ಆರ್. ಜಯಪ್ರಕಾಶ್ ಅವರು ಪ್ರತಿಷ್ಠಿತ ಸುದ್ದಿ ಸಂಸ್ಥೆಯಾದ ಪಿಟಿಐನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯದ ಹಲವು ಮಹತ್ವದ ವಿದ್ಯಮಾನಗಳನ್ನು ವರದಿ ಮಾಡಿದ ಹಿನ್ನೆಲೆ ಉಳ್ಳವರಾಗಿದ್ದಾರೆ.

ಅದೇ ರೀತಿ, ಮಾಧ್ಯಮ ಕಾರ್ಯದರ್ಶಿ-3 ಆಗಿ ನೇಮಕಗೊಂಡಿರುವ ರಾಘವೇಂದ್ರ ಭಟ್ ಅವರು ಕೂಡ 'ವಿಜಯ ಕರ್ನಾಟಕ', ಉದಯವಾಣಿ ಮತ್ತು ವಿಶ್ವವಾಣಿಯಲ್ಲಿ ಮುಖ್ಯ ವರದಿಗಾರರಾಗಿ ಪತ್ರಿಕೋದ್ಯಮದಲ್ಲಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವ ಹೊಂದಿದ್ದಾರೆ.