ಅಮೆರಿಕ-ಇರಾನ್ ಸಂಘರ್ಷ ಮತ್ತೆ ತಾರಕಕ್ಕೆ: ಇಂದೇ ರಾತ್ರಿ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದರೆ ಇಂದೇ ರಾತ್ರಿ ಮತ್ತೆ ಭಾರಿ ಪ್ರಮಾಣದ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದದಂತೆ ತಡೆಯುವುದೇ ಅಮೆರಿಕದ ಗುರಿ ಎಂದು ಪುನರುಚ್ಚರಿಸಿದ ಅವರು, ಹೊರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಹಾಗೂ ಇತ್ತೀಚಿನ ದಾಳಿಗಳ ಬಳಿಕ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ ಹೆಚ್ಚಿದೆ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ಅಂಕಾರಾ (ಟರ್ಕಿ), ಜು. 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ನ್ಯಾಟೋ ಶೃಂಗಸಭೆಯ (NATO Summit) ವೇಳೆ ಮಾತನಾಡಿದ ಅವರು, "ನಿನ್ನೆ ರಾತ್ರಿ ನಾವು ಇರಾನ್ ಮೇಲೆ ಅತ್ಯಂತ ಪ್ರಬಲ ದಾಳಿ ನಡೆಸಿದ್ದೇವೆ. ಅಗತ್ಯವಿದ್ದರೆ ಇಂದು ರಾತ್ರಿ ಮತ್ತೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸುತ್ತೇವೆ. ಅದಕ್ಕೂ ಮುನ್ನ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಇರಾನ್ ಅಮೆರಿಕದ ಸೇನಾ ನೆಲೆಗಳು ಹಾಗೂ ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಹಡಗುಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ ಎಂದು ಆರೋಪಿಸಿದ ಟ್ರಂಪ್, "ಇರಾನ್ ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ದಬ್ಬಾಳಿಕೆ ನಡೆಸುವ ದೇಶವಾಗಿತ್ತು. ಆದರೆ ಈಗ ಆ ಸ್ಥಿತಿ ಇಲ್ಲ" ಎಂದು ಟೀಕಿಸಿದರು.
ಪರಮಾಣು ಶಸ್ತ್ರಾಸ್ತ್ರಗಳ ವಿಚಾರವಾಗಿ ಮಾತನಾಡಿದ ಟ್ರಂಪ್, "ನಮ್ಮ ಗುರಿ ಒಂದೇ – ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದಬಾರದು. ಮಾತುಕತೆ ನಡೆಸಿದರೂ, ನಂತರ ಮಾಧ್ಯಮಗಳ ಮುಂದೆ ಬಂದು ನಾವು ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳುತ್ತಾರೆ. ಅವರ ವರ್ತನೆ ವಿಚಿತ್ರವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಕಿಸ್ತಾನದಲ್ಲಿ ಐವರು ಪ್ರಯಾಣಿಕರೊಂದಿಗೆ ಬೋಯಿಂಗ್ ಕಾರ್ಗೋ ವಿಮಾನ ನಾಪತ್ತೆ
ಮುಂದಿನ ಕ್ರಮಗಳ ಕುರಿತು ಎಚ್ಚರಿಕೆ ನೀಡಿದ ಟ್ರಂಪ್, ಅಗತ್ಯವಿದ್ದರೆ ಇರಾನ್‌ನ ಇನ್ನಷ್ಟು ನೌಕಾಪಡೆ ಗುರಿಗಳು, ಬಂದರು, ವಿದ್ಯುತ್ ಹಾಗೂ ನೀರಿನ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸಲಾಗುವುದು ಎಂದು ಹೇಳಿದರು. ಬಳಿಕ, "ಆ ಪರಿಸ್ಥಿತಿ ಬರಬಾರದು ಎಂಬುದೇ ನನ್ನ ಆಶಯ" ಎಂದೂ ಸ್ಪಷ್ಟಪಡಿಸಿದರು.
ಈ ನಡುವೆ, ಅಮೆರಿಕವು ಹೊರ್ಮುಜ್ ಜಲಸಂಧಿಯಲ್ಲಿನ ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ ಬಂದರ್ ಅಬ್ಬಾಸ್, ಸಿರಿಕ್ ಮತ್ತು ಖೆಶ್ಮ್ ದ್ವೀಪದಲ್ಲಿರುವ ಇರಾನ್‌ನ ಸೇನಾ ಹಾಗೂ ತಂತ್ರಜ್ಞಾನದ ಗುರಿಗಳ ಮೇಲೆ ಭಾರಿ ವಾಯುದಾಳಿ ನಡೆಸಿದೆ. ಜತೆಗೆ, ಇರಾನ್ ತೈಲ ರಫ್ತಿಗೆ ನೀಡಿದ್ದ ವಿಶೇಷ ಅನುಮತಿಯನ್ನು (ಲೈಸೆನ್ಸ್) ಹಿಂಪಡೆದಿರುವುದಾಗಿ ಘೋಷಿಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಬಹ್ರೈನ್ ಮತ್ತು ಕುವೈತ್‌ನಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದ್ದು, ಎರಡೂ ರಾಷ್ಟ್ರಗಳ ನಡುವಿನ ತಾತ್ಕಾಲಿಕ ಯುದ್ಧ ವಿರಾಮ ಒಪ್ಪಂದ ಮುರಿಯುವ ಆತಂಕ ಎದುರಾಗಿದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಿಸಿವೆ.