ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಚಾರಣೆಗೆ ಹಾಜರಾದ ವ್ಯಕ್ತಿಯಿಂದ 9 ಪೊಲೀಸರ ಮೇಲೆ ಹಲ್ಲೆ; ಠಾಣೆಯಿಂದ ದ್ವಿಚಕ್ರ ವಾಹನ ಎಗರಿಸಿ ಪರಾರಿಯಾಗುವ ವೇಳೆ ಎನ್‌ಕೌಂಟರ್‌

Delhi Crime: ದೆಹಲಿಯ ಜಮಾ ಮಸ್ಜೀದ್‌ ಪೊಲೀಸ್‌ ಠಾಣೆಗೆ ವಿಚಾರಣೆಗೆಂದು ಹಾಜರಾದ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು, ಕನಿಷ್ಠ 9 ಪೊಲೀಸರು ಗಾಯಗೊಂಡಿದ್ದಾರೆ. ಬಳಿಕ ಪರಾರಿಯಾಗಲು ಯತ್ನಿಸಿದ ಆತನನ್ನು ಪೊಲೀಸರು ಎನ್‌ಕೌಂಟರ್‌ ಮೂಲಕ ಬಂಧಿಸಿದ್ದಾರೆ.

ವಿಚಾರಣೆಗೆ ಹಾಜರಾದ ವ್ಯಕ್ತಿಯಿಂದ 9 ಪೊಲೀಸರ ಮೇಲೆ ಹಲ್ಲೆ

ನಬೀಲ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 23, 2026 7:47 PM

ದೆಹಲಿ, ನ. 23: ವಿಚಾರಣೆಗೆಂದು ಹಾಜರಾದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ದಾಳಿ ನಡೆಸಿದ್ದು, ಕನಿಷ್ಠ 9 ಪೊಲೀಸರು ಗಾಯಗೊಂಡಿದ್ದಾರೆ. ದೆಹಲಿಯ ಜಮಾ ಮಸ್ಜೀದ್‌ ಪೊಲೀಸ್‌ ಠಾಣೆಯಲ್ಲಿ ಸೋಮವಾರ (ನವೆಂಬರ್‌ 23) ಈ ಘಟನೆ ನಡೆದಿದೆ. ದಾಳಿ ಬಳಿಕ ಆತ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ (). ದಾಳಿಗೊಳಗಾದ ಪೊಲೀಸರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದೆಹಲಿಯ ಸರ್‌ ಗಂಗಾ ರಾಮ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿ ನಡೆನಸಿದ ವ್ಯಕ್ತಿಯನ್ನು ನಬೀಲ್‌ ಎಂದು ಗುರುತಿಸಲಾಗಿದೆ. ತಾಯಿ ಮತ್ತು ಸಹೋದರಿಗೆ ಕಿರುಕುಳ ನೀಡಿದ ದೂರಿನ ಹಿನ್ನೆಲೆಯಲ್ಲಿ ಆತನನನ್ನು ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ಆತ ಇದ್ದಕ್ಕಿದ್ದಂತೆ ಚಾಕು ಹೊರ ತೆಗೆದು ದಾಳಿ ನಡೆಸಿದ್ದಾನೆ. ಇದರಿಂದ ಪೊಲೀಸ್‌ ಸಿಬ್ಬಂದಿಯ ಮುಖ, ಕುತ್ತಿಗೆಗಳಿಗೆ ಗಾಯವಾಗಿದೆ. ʼʼನನಗೆ ನೋಟಿಸ್‌ ಕೊಡಲು ನಿಮಗೆಷ್ಟು ಧೈರ್ಯ?ʼʼ ಎಂದು ಪ್ರಶ್ನಿಸಿ ಚಾಕುವಿನಿಂದ ಇರಿದಿದ್ದಾನೆ.

ಗಾಯಗೊಂಡವರಲ್ಲಿ ಇಬ್ಬರು ಸಬ್‌-ಇನ್ಸ್‌ಪೆಕ್ಟರ್‌, ಇಬ್ಬರು ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಓರ್ವ ಅಸಿಸ್ಟಂಟ್‌ ಸಬ್‌-ಇನ್ಸ್‌ಪೆಕ್ಟರ್‌ ಸೇರಿದ್ದಾರೆ. ಅಪರಾಹ್ನ ಸುಮಾರು 2:30ಕ್ಕೆ ಈ ಘಟನೆ ಸಂಭವಿಸಿದೆ.

ಎನ್‌ಕೌಂಟರ್‌

ದಾಳಿಯ ಬಳಿಕ ನಬೀಲ್‌ ಠಾಣೆಯಲ್ಲಿದ್ದ ದ್ವಿಚಕ್ರ ವಾಹನ ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಹಿಂಬಾಲಿಸಿದ ಪೊಲೀಸರು ಹಳೆ ದೆಹಲಿಯ ಛಿಟ್ಲಿ ಕಬಾರ್‌ ಪ್ರದೇಶದಲ್ಲಿ ಅಡ್ಡಗಟ್ಟಿದರು. ಆ ವೇಳೆ ಆತ ಮತ್ತೊಮ್ಮೆ ಪೊಲೀಸರ ಮೇಲೆ ದಾಳಿ ಮುಂದುವರಿಸಿದ್ದ. ಈ ವೇಳೆ ನಾಲ್ವರು ಸಿಬ್ಬಂದಿ ಗಾಯಗೊಂಡರು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಅನಿವಾರ್ಯವಾಗಿ ಶೂಟ್‌ ಮಾಡಬೇಕಾಯ್ತು. ಈ ಗುಂಡಿನ ದಾಳಿಯಿಂದ ಆತನಿಗೆ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಡಿಸಿಪಿ ಸರ್‌ ಗಂಗಾ ರಾಮ್‌ ಆಸ್ಪತ್ರೆಗೆ ತೆರಳುತ್ತಿದ್ದು, ಗಾಯಗೊಂಡ ಅಧಿಕಾರಿಗಳ ಆರೋಗ್ಯ ವಿಚಾರಿಸಲಿದ್ದಾರೆ. ಜತೆಗೆ ಮಾಹಿತಿ ಕಲೆ ಹಾಕಲಿದ್ದಾರೆ. ಭಯೋತ್ಪಾದಕ ದಾಳಿಯ ಸಾಧ್ಯತೆಯನ್ನು ಪೊಲೀಸರು ಈಗಾಗಲೇ ತಳ್ಳಿ ಹಾಕಿದ್ದಾರೆ.

ಪೊಲೀಸರು ಹೇಳಿದ್ದೇನು?

ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ, 9 ಸಿಬ್ಬಂದಿ ಗಾಯಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ʼʼಪೊಲೀಸ್‌ ಠಾಣೆ ಒಳಗೆ ನಡೆದ ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಬಳಿಕ ನಡೆದ ದಾಳಿಯಲ್ಲಿ ನಾಲ್ವರಿಗೆ ಗಾಯವಾಗಿದೆʼʼ ಎಂದು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ನಬೀಲ್‌ನ 2 ಕಾಲಿಗೂ ಗಾಯವಾಗಿದ್ದು, 6 ಗುಂಡು ತಗುಲಿದೆ ಎನ್ನಲಾಗಿದೆ. ನಬೀಲ್‌ ದಾಳಿ ನಡೆಸುವ ವೇಳೆ ಆತನ ತಾಯಿ ಮತ್ತು ಸಹೋದರಿ ಪೊಲೀಸ್‌ ಠಾಣೆಯಲ್ಲೇ ಇದ್ದರು.

ಅಪರಾಧ ಹಿನ್ನೆಲೆ

ನಬೀಲ್‌ ಕ್ರಿಮಿನಲ್‌ ಬ್ಯಾಕ್‌ಗ್ರೌಂಡ್‌ ಹೊಂದಿದ್ದು, ಹಿಂದೆಯೂ ಈತನ ಮೇಲೆ ದೂರು ದಾಖಲಾಗಿತ್ತು. 2022ರಲ್ಲಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಬೀಲ್‌ ಮಾನಸಿಕವಾಗಿ ಸ್ಥಿರವಾಗಿದ್ದು, ಆತನಿಗೆ ಅಂತಹ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ದೃಢಪಟ್ಟಿದೆ.