ಐಎಎಸ್ ಅಧಿಕಾರಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್; ಸ್ಪಷ್ಟನೆ ನೀಡಿದ ಜ್ಞಾನೇಂದ್ರ ಕುಮಾರ್
IAS officer Gyanendra Kumar: ಈ ಹಿಂದೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕೆಪಿಎಸ್‌ಸಿಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ಕೆಪಿಎಸ್‌ಸಿ ಹಗರಣ ಸಂಬಂಧ ಇಡಿ ದಾಳಿ, ತನಿಖೆ ನಡೆಯುತ್ತಿದೆ. ಇದೇ ಕಾರಣಕ್ಕೆ ಭಯಗೊಂಡು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಅವರು ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
-
ಬೆಂಗಳೂರು: ಕರ್ನಾಟಕದ ಐಎಎಸ್ ಅಧಿಕಾರಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಎಂಬ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆದರೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ (IAS officer Gyanendra Kumar) ಅವರು, ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ, ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ತಾವು ರಜೆ ಕೋರಿ ತುರ್ತಾಗಿ ತಮ್ಮ ಊರಿಗೆ ತೆರಳಬೇಕಾಗಿ ಬಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಅವಧಿಯಲ್ಲಿ ಅವರ ಅಧಿಕೃತ ದೂರವಾಣಿ ಸಂಪರ್ಕಕ್ಕೆ ಸಿಗದಿರುವುದು ಅವರ ಇರುವಿಕೆಯ ಬಗ್ಗೆ ಗೊಂದಲ ಮತ್ತು ಊಹಾಪೋಹಗಳಿಗೆ ಕಾರಣವಾದಂತಿದೆ. ಇದೀಗ ಅವರು ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ವಾಸ್ತವ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಏನು?
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜತೆ ನಾನೇ ಖುದ್ದು ಮಾತನಾಡಿದ್ದೇನೆ. ಅವರು ನಾಪತ್ತೆಯಾಗಿಲ್ಲ. ಅವರ ತಂದೆಗೆ ಅನಾರೋಗ್ಯವಾಗಿದ್ದರಿಂದ ಅವರು ತಮ್ಮ ಊರಾದ ಉತ್ತರಪ್ರದೇಶಕ್ಕೆ ಹೋಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯಂತೆ ಅವರು ನಾಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವರು ತುರ್ತು ಕಾರಣಕ್ಕೆ ತಮ್ಮ ಊರಿಗೆ ಹೋಗಿದ್ದು, ಇನ್ನೆರಡು ದಿನದಲ್ಲಿ ವಾಪಸ್ ಬರುವುದಾಗಿ ಹೇಳಿದ್ದಾರೆ. ಸರ್ಕಾರಿ ಅಧಿಕಾರಿಯಾಗಿರುವುದರಿಂದ ಯಾವುದೇ ತನಿಖೆ ವಿಚಾರಣೆಗೂ ಸಿದ್ಧ ಎಂದು ತಿಳಿಸಿದ್ದಾರೆ ಎಂದರು.
ಸದನದಲ್ಲಿ ಪ್ರತಿಭಟನೆಗೆ ನೀತಿ–ನಿಯಮಗಳಿವೆ; ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಪಕ್ಷ ಸಹಕರಿಸಲಿ: ಡಿಸಿಎಂ ಡಾ.ಜಿ.ಪರಮೇಶ್ವರ
ಈ ಹಿಂದೆ ಜ್ಞಾನೇಂದ್ರ ಕುಮಾರ್ ಕೆಪಿಎಸ್‌ಸಿಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ಕೆಪಿಎಸ್‌ಸಿ ಹಗರಣ ಸಂಬಂಧ ಇಡಿ ದಾಳಿ, ತನಿಖೆ ನಡೆಯುತ್ತಿದೆ. ಇದೇ ಕಾರಣಕ್ಕೆ ಭಯಗೊಂಡು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಆದರೆ ಅವರ ವಿರುದ್ಧ ಅಂತಹ ಯಾವುದೇ ಆರೋಪಗಳು ಇಲ್ಲ. ಯಾವುದೇ ಕೇಸ್ ಕೂಡ ಅವರ ಮೇಲಿಲ್ಲ. ಹಾಗೊಂದು ವೇಳೆ ವಿಚಾರಣೆಗಳಿದ್ದರೆ ತನಿಖೆಯಾಗಲಿ ಎಂದು ಅವರು ತಿಳಿಸಿದ್ದಾರೆ ಎಂದು ಖರ್ಗೆ ಹೇಳಿದರು.