ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

National Teachers Award 2026: ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಗರಿ

ʼರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026'ಕ್ಕೆ ಆಯ್ಕೆಯಾಗಿರುವ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿ ವಿವಿಧ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

-

Prabhakara R
Prabhakara R Aug 22, 2026 8:30 PM

ಹೊಸನಗರ: ಶಿಕ್ಷಕರ ದಿನಾಚರಣೆ (ಸೆ.5) ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026' (National Teachers Award List) ಪ್ರಕಟಿಸಿದ್ದು, ಈ ಗೌರವಕ್ಕೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಟಗಾರು ಶಾಲೆಯ ಶಿಕ್ಷಕಿ ರತ್ನಕುಮಾರಿ (Ratnakumari) ಸೇರಿ ದೇಶದ ಒಟ್ಟು 48 ಶಿಕ್ಷಕರು ಭಾಜನರಾಗಿದ್ದಾರೆ.

ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರತ್ನಕುಮಾರಿ ಅವರಿಗೆ ಈ ವರ್ಷದ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ ಒಲಿದುಬಂದಿರುವುದು ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ಎನಿಸಿದೆ.

ಸೆಪ್ಟೆಂಬರ್ 5ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಪ್ರಮಾಣಪತ್ರ, 50 ಸಾವಿರ ರೂ. ನಗದು ಹಾಗೂ ಬೆಳ್ಳಿಯ ಪದಕವನ್ನು ಒಳಗೊಂಡಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿನಂದನೆ

​ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಕಟಿಸಿರುವ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026' (National Teachers Award) ಗೆ ಆಯ್ಕೆಯಾಗಿರುವ ನಮ್ಮ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಕುಮಾರಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಅವರು, ​ದೇಶದಾದ್ಯಂತ ಆಯ್ಕೆಯಾದ 48 ಅತ್ಯುತ್ತಮ ಶಿಕ್ಷಕರಲ್ಲಿ ನಮ್ಮ ರಾಜ್ಯದ ಗ್ರಾಮೀಣ ಭಾಗದ ಶಿಕ್ಷಕಿ ಸ್ಥಾನ ಪಡೆದಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ. ಶಿಕ್ಷಕರ ದಿನಾಚರಣೆಯಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನವಾಗಲಿದೆ.

​ಗ್ರಾಮೀಣ ಭಾಗದ ಮಕ್ಕಳ ಬಾಳಿನಲ್ಲಿ ಅಕ್ಷರ ದೀವಿಗೆ ಬೆಳಗುತ್ತಿರುವ ನಿಮ್ಮ ಈ ನಿಸ್ವಾರ್ಥ ಸೇವೆ ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ. ನಿಮ್ಮ ಶೈಕ್ಷಣಿಕ ಕಾಯಕ ಹೀಗೆಯೇ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.