ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಮರುನೇಮಕಕ್ಕೆ ಹೈಕೋರ್ಟ್‌ ಸೂಚನೆ

Shivashankarappa Sahukar: ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರಿಗೆ ಹೂಕೋರ್ಟ್‌ನಿಂದ ರಿಲೀಫ್‌ ಸಿಕ್ಕಿದ್ದು, 7 ದಿನಗಳಲ್ಲಿ ಮರುನೇಮಕ ಮಾಡುವಂತೆ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ  ಶಿವಶಂಕರಪ್ಪ ಸಾಹುಕಾರ್‌ ಮರುನೇಮಕ

ಶಿವಶಂಕರಪ್ಪ ಎಸ್‌. ಸಾಹುಕಾರ್‌ ಮತ್ತು ಕರ್ನಾಟಕ ಹೈಕೋರ್ಟ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 18, 2026 4:22 PM

ಬೆಂಗಳೂರು, ಆ. 18: ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ (Shivashankarappa Sahukar) ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ಮರುನೇಮಕ ಮಾಡಿ ಹೈಕೋರ್ಟ್‌ (High Court) ಆದೇಶ ಹೊರಡಿಸಿದೆ. ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಕೆಪಿಎಸ್​​ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಿದ್ಧ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. 7 ದಿನಗಳಲ್ಲಿ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಅವರನ್ನು ಮರುನೇಮಕ ಮಾಡುವಂತೆ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.

ಕೆಪಿಎಸ್​​ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ಸಚಿವ ಸಂಪುಟ ಸಲಹೆ, ಶಿಫಾರಸು ಮಾಡಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನಷ್ಟೇ ಅನುಸರಿಸಬೇಕು ಎಂದಿರುವ ಕೋರ್ಟ್​​ ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ. ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಕಾನೂನುಬಾಹಿರವೆಂದು ಶಿವಶಂಕರಪ್ಪ ಪರ ವಕೀಲ ಅರುಣ್ ಶ್ಯಾಮ್ ವಾದಿಸಿದ್ದರು.

ಸಾಹುಕಾರ್ ಅವರನ್ನು ಅವರ ಇಬ್ಬರು ಪುತ್ರಿಯರ ಸರ್ಕಾರಿ ನೇಮಕಾತಿಗೆ ಸಂಬಂಧಿಸಿದ ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆ ಜುಲೈನಲ್ಲಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು.

ಕೆಪಿಎಸ್‌‍ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ

ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಇ.ಡಿ ದಾಳಿ

ಇತ್ತ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಂಗಳವಾರ (ಆಗಸ್ಟ್‌ 18) ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದರು. ಶಿವಶಂಕರಪ್ಪ ಎಸ್‌. ಸಾಹುಕಾರ ಅವರ ನಿವಾಸ ಸೇರಿ ಒಟ್ಟು 21 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ಕೈಗೊಂಡಿದ್ದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ, ಮಧ್ಯವರ್ತಿಗಳು, ಪತ್ರಿಕೆ ಡಿಜಿಟಲ್ ಮೌಲ್ಯಮಾಪನ ಸಂಸ್ಥೆ ಸೇರಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳ ಮನೆ ಮೇಲೂ ಇಡಿ ದಾಳಿ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.

ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ಅಧಿಕಾರಿಗಳು ಶೋಧ ನಡೆಸಿದ್ದರು.

ಇತ್ತೀಚೆಗೆ ಕೆಪಿಎಸ್‌ಸಿ ನಡೆಸಿದ 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭಾರಿ ವಿವಾದಕ್ಕೆ ಕಾರಣವಾಗಿದೆ. 342 ಸಾಮಾನ್ಯ ಹಾಗೂ 58 ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗಾಗಿ ಜನವರಿಯಲ್ಲಿ ಪರೀಕ್ಷೆ ನಡೆದಿದ್ದು, ಜುಲೈ 17ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಬಳಿಕ ಅಭ್ಯರ್ಥಿಗಳು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಕೆಲವು ಅಭ್ಯರ್ಥಿಗಳು ಹುದ್ದೆ ಕೊಡಿಸುವುದಾಗಿ ಮಧ್ಯವರ್ತಿಗಳು 70ರಿಂದ 80 ಲಕ್ಷ ರುಪಾಯಿವರೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.