ಸಂಪುಟ ನಿರ್ಣಯ: ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಯೋಜನೆಗೆ ಅನುಮೋದನೆ
Cabinet Meeting: ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಎಚ್.ಕೆ.ಪಾಟೀಲ್.

ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ (Cabinet Meeting) ಒಪ್ಪಿಗೆ ನೀಡಿದೆ. ಸಿಬ್ಬಂದಿಯಿಂದ ಮಾಸಿಕ 100 ರೂ.ಗಳ ವಂತಿಗೆ ಮತ್ತು ಸರ್ಕಾರದಿಂದ ಉಳಿಕೆ ಹಣವನ್ನು ಭರಿಸಲು ಗುರುವಾರ (ಜೂ. 19)ದ ಸಚಿವ ಸಂಪುಟದಲ್ಲಿ ನಿರ್ಧರಿಸಿದೆ.
ಕರ್ನಾಟಕ ನೋಂದಣಿ ಸಂಘಗಳ ಕಾಯ್ದೆ 1960ರ ಪ್ರಕಾರ ಸಂಘಗಳಾಗಿ ನೋಂದಾಯಿಸಲಾದ ಆರೋಗ್ಯ ರಕ್ಷಾ ಸಮಿತಿಗಳು (ARS) ಆಡಳಿತ/ ಸಾಮಾನ್ಯ ಸಭೆಯ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿನ ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಸುದ್ದಿಯನ್ನೂ ಓದಿ: ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ದಿಢೀರ್ ರದ್ದು: ಏಕಾಏಕಿ ವಿಧಾನಸೌಧಕ್ಕೆ ಸ್ಥಳಾಂತರಿದ ಸರಕಾರ
ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳ ಅನುಷ್ಠಾನಕ್ಕೆ ನಿರ್ಣಯ
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಡಿ ರಾಜ್ಯದ ದುರ್ಗಮ ಪ್ರದೇಶದ ಸಂಪರ್ಕ ರಹಿತ ಪ್ರದೇಶಗಳಿಗೆ ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳನ್ನು 15.97 ಕೋಟಿ ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಮಾಡಲು ಸಚಿವ ಸಂಫುಟ ನಿರ್ಧರಿಸಿದೆ. ಇದು ರಾಜ್ಯದಲ್ಲಿನ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಸಂಚಾರಿ ಆರೋಗ್ಯ ಘಟಕಗಳನ್ನು ಎಂಎಚ್ಯು ಅನುಷ್ಠಾನಕ್ಕೆ ನಿರ್ಣಯ ಮಾಡಿದೆ.
ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಶೇ. 15ರಷ್ಟು ಮೀಸಲಾತಿ ಹೆಚ್ಚಳ
ವಸತಿ ಇಲಾಖೆಯಡಿ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಗಳಡಿ ಅಲ್ಪಸಂಖ್ಯಾತ ಸಮುದಾಯದವರಿಗೆ ನಿಗದಿ ಪಡಿಸಿರುವ ಶೇ 10 ರ ಮೀಸಲಾತಿಯನ್ನು 15% ಗೆ ಹೆಚ್ಚಿಸಲು ನಿರ್ಣಯ ಮಾಡಲಾಗಿದೆ. ಕೇಂದ್ರ ಸರ್ಕಾರದವರು ಅಲ್ಪಸಂಖ್ಯಾತರಿಗೆ ಕೊರತೆಯಿದ್ದ ವಸತಿಯನ್ನು ಗಮನಿಸಿ ಸೂಚನೆ ನೀಡಿದೆ. ನಮ್ಮ ಸರ್ಕಾರವು ಈ ಸಮುದಾಯದವರ ವಸತಿರಹಿತರನ್ನು ಹಾಗೂ ಸಾಮಾಜಿಕ ನ್ಯಾಯವನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿ ಹೆಚ್ಚಿಸಲಾಗಿದೆ.
ಬಿಲ್ಗಳ ಬಗ್ಗೆ ಚರ್ಚೆ
ʼʼಕರ್ನಾಟಕ ಕ್ರೌಡ್ ಕಂಟ್ರೋಲ್ ಮ್ಯಾನೇಜಿಂಗ್ ಕ್ರೌಡ್ಅಟ್ ಇವೆಂಟ್ಸ್ ಅಂಡ್ ವೆನ್ಯೂ, ಮಾಸ್ ಗ್ಯಾದರಿಂಗ್ ಬಿಲ್ 2025, ಕರ್ನಾಟಕ ರೋಹಿತ್ ವೆಮುಲಾ ಬಿಲ್ 2025, ಕರ್ನಾಟಕ ಮಿಸ್ ಇನ್ಫರರ್ಮೇಷನ್, ಫೇಕ್ ನ್ಯೂಸ್ ಪ್ರಾಹಿಬಿಷನ್ ಬಿಲ್ 2025, ಕರ್ನಾಟಕ ಹೇಟ್ ಸ್ಪೀಚ್ ಅಂಡ್ ಹೇಟ್ ಕ್ರೈಂ ಪ್ರೆವೆನ್ಶನ್ ಬಿಲ 2025 ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಕೆಲವು ಬಿಲ್ಲುಗಳಲ್ಲಿ ವಿವರವಾದ ಚರ್ಚೆಯಾಗಬೇಕೆಂದು ತೀರ್ಮಾನಿಸಿ ಮುಂದಿನ ಸಚಿವ ಸಂಪುಟಕ್ಕೆ ತರಲು ತೀರ್ಮಾನಿಸಲಾಗಿದೆʼʼ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಕೆ.ಎ.ಟಿ. ವ್ಯವಸ್ಥೆಯ ಬಗ್ಗೆ ಸರ್ಕಾರದ ಚಿಂತನೆ
ʼʼಕೆ.ಎ.ಟಿ. ಬಗ್ಗೆ ಸಾಕಷ್ಟು ಚರ್ಚೆ, ಆಕ್ರೋಶ ವ್ಯಕ್ತವಾಗಿದ್ದು, ಇದರ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದೆʼʼ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.