ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Basmati rice exports fall: ಬಾಸುಮತಿ ಅಕ್ಕಿ ರಫ್ತು ಕುಸಿತ, ಬೆಲೆ ಇಳಿಕೆ

ಬಾಸ್ಮತಿ ಅಕ್ಕಿಯನ್ನು ಇರಾನ್‌ಗೆ ಮಾತ್ರವಲ್ಲದೆ ಇರಾಕ್, ಬಹ್ರೇನ್, ಕುವೈತ್ ಮತ್ತು ಕತಾರ್ ಸೇರಿದಂತೆ ಹಲವಾರು ಮಧ್ಯಪ್ರಾಚ್ಯ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಯುದ್ಧದಿಂದಾಗಿ ಈ ದೇಶಗಳಿಗೆ ಕಳಿಸಿರುವ ಅಕ್ಕಿಯು ದಾರಿಯಲ್ಲಿರುವ ಹಡಗುಗಳಲ್ಲಿ ಸಿಲುಕಿಕೊಂಡಿವೆ, ಪೂರೈಕೆ ಸಂಪೂರ್ಣವಾಗಿ ನಿಂತಿದೆ. ಹಾಗಾಗಿ ಈಗ ಅಲ್ಲಿನ ಮಧ್ಯಪ್ರಾಚ್ಯ ಮಾರುಕಟ್ಟೆ ಕುಸಿದಿದೆ.

ಬಾಸುಮತಿ ಅಕ್ಕಿ ರಫ್ತು ಕುಸಿತ, ಬೆಲೆ ಇಳಿಕೆ

-

Ashok Nayak
Ashok Nayak Mar 12, 2026 9:24 AM

ಹೂವಪ್ಪ ಐ ಹೆಚ್ ಬೆಂಗಳೂರು

ಪ್ರಾಚ್ಯ ಯುದ್ಧ

ಬಂದರುಗಳಲ್ಲಿ ಸಿಲುಕಿದ ಭಾರತದ 4 ಲಕ್ಷ ಟನ್ ಬಾಸುಮತಿ ಅಕ್ಕಿ ಕೆ.ಜಿ.ಗೆ 10 ರು. ಇಳಿಕೆ

ಅಮೆರಿಕ-ಇರಾನ್-ಇಸ್ರೇಲ್ ಯುದ್ಧದ ಪರಿಣಾಮವು ಭಾರತಕ್ಕೂ ಭಾರೀ ಹೊಡೆತವನ್ನೇ ನೀಡುತ್ತಿದೆ. ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದು, ತೈಲ ಬೆಲೆಯೂ ಸದ್ಯದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೀಗ ಬಾಸ್ಮತಿ ಅಕ್ಕಿ ರಫ್ತು ವಿಶೇಷವಾಗಿ ತೀವ್ರವಾಗಿ ಪರಿಣಾಮ ಬೀರಿದೆ, ಯುದ್ಧ ಪ್ರಾರಂಭವಾದಾಗಿನಿಂದ ಅಕ್ಕಿಗೆ ಬೇಡಿಕೆ ಕುಸಿದಿದೆ. ಹಡಗು ಕಂಪನಿಗಳು ಯುದ್ಧ ಅಪಾಯದ ಹಿನ್ನೆಲೆಯಲ್ಲಿ ಹೆಚ್ಚುವರಿ ಸುರಕ್ಷತಾ ಶುಲ್ಕ ವಿಧಿಸಿ ಸಾಗಣೆ ಮಾರ್ಗಗಳನ್ನು ಬದಲಾಯಿಸಿರುವುದು ರಫ್ತು ವ್ಯಾಪಾರಕ್ಕೆ ಮತ್ತಷ್ಟು ಹೊಡೆತ ನೀಡಿದೆ.

ಹೀಗಾಗಿ ಕಳೆದ ವಾರ 1121 ತಳಿಯ ಬಾಸ್ಮತಿ ಅಕ್ಕಿಯ ದೇಶೀಯ ಬೆಲೆ ಕೆ.ಜಿಗೆ 85 ರು.ಗಳಿಂದ 75 ರು.ಗಳಿಗೆ ಇಳಿದಿದೆ, ಆದರೆ 1509 ಮತ್ತು 1718 ತಳಿಗಳು ಕೆ.ಜಿಗೆ 70 ರು.ಗಳಿಂದ 60 ರು.ಗಳಿಗೆ ಇಳಿದಿವೆ. ಮಧ್ಯಪ್ರಾಚ್ಯ ಮಾರುಕಟ್ಟೆಗಳು ಬಹುತೇಕ ಸ್ಥಗಿತಗೊಂಡಿರುವು ದರಿಂದ, ಕಳೆದ ಕೆಲವು ದಿನಗಳಿಂದ ಅವು ಭಾರೀ ಸಂಕಷ್ಟ ಎದುರಿಸುತ್ತಿದೆ. ದೆಹಲಿ ಮಾರುಕಟ್ಟೆಯಿಂದ ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗೆ ಅಕ್ಕಿ ಪೂರೈಕೆ ಸ್ಥಗಿತಗೊಂಡಿದೆ.

ಇದರ ಪರಿಣಾಮವಾಗಿ ಅಕ್ಕಿ ಬೆಲೆಗಳು ಕಡಿಮೆಯಾಗಲು ಪ್ರಾರಂಭಿಸಿವೆ ಎಂದು ದೆಹಲಿ ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ನರೇಶ್ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: Vishweshwar Bhat Column: ಯುದ್ಧದ ವಿಷಯ ಬಂದರೆ ಇಸ್ರೇಲ್‌ ಏಕೆ ಮುಂಗಾಲಪುಟಕಿ ?

ಬಾಸ್ಮತಿ ಅಕ್ಕಿಯನ್ನು ಇರಾನ್‌ಗೆ ಮಾತ್ರವಲ್ಲದೆ ಇರಾಕ್, ಬಹ್ರೇನ್, ಕುವೈತ್ ಮತ್ತು ಕತಾರ್ ಸೇರಿದಂತೆ ಹಲವಾರು ಮಧ್ಯಪ್ರಾಚ್ಯ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಯುದ್ಧ ದಿಂದಾಗಿ ಈ ದೇಶಗಳಿಗೆ ಕಳಿಸಿರುವ ಅಕ್ಕಿಯು ದಾರಿಯಲ್ಲಿರುವ ಹಡಗುಗಳಲ್ಲಿ ಸಿಲುಕಿ ಕೊಂಡಿವೆ, ಪೂರೈಕೆ ಸಂಪೂರ್ಣವಾಗಿ ನಿಂತಿದೆ. ಹಾಗಾಗಿ ಈಗ ಅಲ್ಲಿನ ಮಧ್ಯಪ್ರಾಚ್ಯ ಮಾರುಕಟ್ಟೆ ಕುಸಿದಿದೆ.

ಬಾಸುಮತಿ ಹೆಚ್ಚು ಉತ್ಪತ್ತಿಯಾಗುವ ಹರಿಯಾಣ, ಪಂಜಾಬ್ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ಸ್ಟೀಮ್ ಮಧ್ಯಮ ದರ್ಜೆ ಅಕ್ಕಿ ಸಗಟು ದರ 9000 ರಿಂದ 8000 ರು.ಗೆ ಇಳಿಕೆ ಯಾಗಿದ್ದರೆ, ಇನ್ನು ರಾ ರೈಸ್ ಉತ್ತಮ ದರ್ಜೆ 12000 ರಿಂದ 11000 ರು.ಗೆ ಇಳಿಕೆಯಾಗಿದೆ, ಅಂದರೆ ಕೆ.ಜಿಗೆ 10 ರು.ನಷ್ಟು ಇಳಿಕೆಯಾಗಿದೆ. ಇನ್ನು ಅತೀ ಉತ್ತಮ ಬ್ರಾಂಡೆಡ್ ಬಾಸು ಮತಿ ಅಕ್ಕಿ 13000-14000 ರು.ವರೆಗೆ ಮಾರಾಟವಾಗುತ್ತಿದೆ ಎಂದು ಅಕ್ಕಿ ವ್ಯಾಪಾರಿಗಳು ಹೇಳುತ್ತಾರೆ.

ಸಿಲುಕಿರುವ 4 ಲಕ್ಷ ಟನ್ ಅಕ್ಕಿ: ಸುಮಾರು 60 ಸಾವಿರ ಟನ್ ಬಾಸ್ಮತಿ ಅಕ್ಕಿ ಸಮುದ್ರ ಸಾಗಣೆಯ ಮಧ್ಯದಲ್ಲೇ ಸಿಲುಕಿಕೊಂಡಿದೆ. ಇನ್ನೊಂದು ಕಡೆ ಸುಮಾರು 4 ಲಕ್ಷ ಟನ್ ಬಾಸ್ಮತಿ ಅಕ್ಕಿ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದೆ, ಕೆಲವು ಬಂದರುಗಳಲ್ಲಿ ಸಿಲುಕಿ ಕೊಂಡಿವೆ ಮತ್ತು ಇನ್ನೂ ಬಹುತೇಕ ಅಕ್ಕಿ ಗೋದಾಮುಗಳಲ್ಲಿ ದಾಸ್ತಾನಿದೆ ಎಂದು ರಫ್ತು ವಲಯಗಳು ತಿಳಿಸಿವೆ. ಇದರಿಂದಾಗಿ ಗಿರಣಿಗಾರರು ಹಾಗೂ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಮಧ್ಯಪ್ರಾಚ್ಯವು ಪ್ರಮುಖ ರಫ್ತಿನಲ್ಲಿ ಪಾಲು: ಭಾರತವು ವಿಶ್ವದಲ್ಲಿಯೇ ಪ್ರಮುಖ ಬಾಸ್ಮತಿ ಅಕ್ಕಿ ರಫ್ತುದಾರ ರಾಷ್ಟ್ರವಾಗಿದೆ, ವಿಶೇಷವಾಗಿ ಮಧ್ಯಪ್ರಾಚ್ಯದ ದೇಶಗಳಿಗೆ ಭಾರತ ದಿಂದ ದೊಡ್ಡ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿತ್ತು. ಭಾರತದ ಒಟ್ಟು ಬಾಸ್ಮತಿ ರಫ್ತಿನಲ್ಲಿ ಸುಮಾರು 50 ಶೇಕಡಾ ಪಾಲು ಇರಾನ್, ಸೌದಿ ಅರೇಬಿಯಾ, ಇರಾಕ್, ಯುನೈ ಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ದೇಶಗಳಿಗೆ ಸೇರಿತ್ತು. ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಭಾರತ ಅಗ್ರಮಾನ್ಯ ದೇಶ. ಜಾಗತಿಕವಾಗಿ ಅಂದಾಜು ಶೇ. 75 ರಷ್ಟು ಬಾಸ್ಮತಿ ಅಕ್ಕಿ ರಫ್ತು ಭಾರತ ದಿಂದ ನಡೆಯುತ್ತದೆ.

ಭಾರತದ ಪ್ರಮುಖ ಬಾಸ್ಮತಿ ಅಕ್ಕಿ ಉತ್ಪಾದಕರು ಪಂಜಾಬ್ ಮತ್ತು ಹರಿಯಾಣದಲ್ಲಿದ್ದಾರೆ. ಭಾರತದ ಒಟ್ಟು ಬಾಸ್ಮತಿ ರಫ್ತಿನಲ್ಲಿ ಗಲ್ಫ್ ರಾಷ್ಟ್ರಗಳು ಗಮನಾರ್ಹ ಪಾಲನ್ನು ಹೊಂದಿವೆ. ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಇರಾನ್ ಮಾತ್ರ ಸುಮಾರು ಶೇಕಡಾ 25ರಷ್ಟಿದೆ. ‌2024-25ರ ಆರ್ಥಿಕ ವರ್ಷದಲ್ಲಿ ಭಾರತವು ಸುಮಾರು ರು.6,374 ಕೋಟಿ ಮೌಲ್ಯದ ಬಾಸ್ಮತಿ ಅಕ್ಕಿ ಯನ್ನು ಇರಾನ್‌ಗೆ ರಫ್ತು ಮಾಡಿದೆ.

ಹೊಸ ಪಾವತಿ ಮತ್ತು ಸಾಗಣೆ ಸವಾಲು: ದೆಹಲಿಯ ಬವಾನ್ ಆಹಾರ ಸಂಸ್ಕರಣಾ ಘಟಕದ ಅಧ್ಯಕ್ಷ ದೀಪಕ್ ಗೋಯಲ್, ಇತ್ತೀಚೆಗೆ ದುಬೈನಲ್ಲಿ ನಡೆದ ಆಹಾರ ಪ್ರದರ್ಶನ ದಿಂದ ಹೆಚ್ಚಿನ ಸಂಖ್ಯೆಯ ಅಕ್ಕಿ ರಫ್ತು ಆರ್ಡರ್‌ಗಳನ್ನು ಸ್ವೀಕರಿಸಿದ್ದೇವೆ ಮತ್ತು ಈ ವರ್ಷ ಹೆಚ್ಚಿದ ವ್ಯವಹಾರವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದಾಗ್ಯೂ ಯುದ್ಧವು ಪರಿಸ್ಥಿತಿಯನ್ನು ಬದಲಾಯಿಸಿದೆ. ಅಮೆರಿಕ ನಿರ್ಬಂಧಗಳು ಮತ್ತು ಉದ್ವಿಗ್ನತೆಯಿಂದಾಗಿ ಇರಾನಿನ ಖರೀದಿದಾರರಿಂದ ಪಾವತಿಗಳನ್ನು ಸ್ವೀಕರಿಸುವ ಬಗ್ಗೆ ಅನಿಶ್ಚಿತತೆ ಹೆಚ್ಚಾಗಿದೆ,

ಇದಲ್ಲದೆ ಹಡಗುಗಳಿಗೆ ವಿಮೆ ಪಡೆಯುವುದು ಕಷ್ಟಕರವಾಗಿದೆ, ಆ ಕಾರಣಕ್ಕಾಗಿ ಬಾಸ್ಮತಿ ಅಕ್ಕಿ ಸಾಗಣೆಯನ್ನು ನಿಲ್ಲಿಸಲಾಗಿದೆ.

2023-24ರಲ್ಲಿ ಸುಮಾರು 52.43 ಲಕ್ಷ ಟನ್ ರಫ್ತು ಆಗಿತ್ತು. ಪ್ರತೀ ವರ್ಷ ಭಾರತದಿಂದ ಸರಾಸರಿ ಸುಮಾರು 5565 ಲಕ್ಷ ಟನ್ (5.56.5 ಮಿಲಿಯನ್ ಟನ್) ಬಾಸುಮತಿ ಅಕ್ಕಿ ವಿದೇಶ ಗಳಿಗೆ ರಫ್ತು ಆಗುತ್ತದೆ. ಭಾರತ 2025-26ರ ಆರ್ಥಿಕ ವರ್ಷದ ಏಪ್ರಿಲ್-ನವೆಂಬರ್ ಅವಧಿ ಯಲ್ಲಿ ಇರಾನ್‌ಗೆ ಅಮೆರಿಕನ್ 468.10 ಮಿಲಿಯನ್ ಮೌಲ್ಯದ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿತು. ಒಟ್ಟು 5.99 ಲಕ್ಷ ಟನ್‌ಗಳು ಎಂದು ವ್ಯಾಪಾರ ದತ್ತಾಂಶಗಳು ತೋರಿಸಿವೆ.

image

ಯುದ್ಧದಿಂದಾಗಿ,ಮಧ್ಯಪ್ರಾಚ್ಯ ದೇಶಗಳಿಗೆ ಬಾಸುಮತಿ ಅಕ್ಕಿ ಸಾಗಣೆಗಳು ಬಂದರುಗಳಲ್ಲಿ ಸಿಲುಕಿಕೊಂಡಿವೆ, ಪೂರೈಕೆಯನ್ನು ತೀವ್ರವಾಗಿ ಅಡ್ಡಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಸುಮತಿ ಅಕ್ಕಿ ಕೆ.ಜಿಗೆ 8-10 ರು. ಇಳಿಕೆಯಾಗಿದೆ ಯುದ್ಧ ಮುಂದುವರಿದರೆ ಮತ್ತಷ್ಟು ಇಳಿಕೆ ಸಾಧ್ಯತೆ ಇದೆ.

-ರಾಧೇಶ್ಯಾಮ್ ಗರ್ಗ್, ಅಧ್ಯಕ್ಷ, ರೈಸ್ ಆಗ್ರೋ ಇಂಡಿಯಾ