ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೆಂದ್ರ: ತೋತಾಪುರಿ ಮಾವು ಕ್ವಿಂಟಾಲ್‌ಗೆ 1,750 ರುಪಾಯಿ ಸಹಾಯಧನ ಘೋಷಣೆ

Pralhad Joshi: ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಕರ್ನಾಟಕದ ಮಾವು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಧಾವಿಸಿದೆ. 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನವನ್ನು ರೈತರಿಗೆ ನೀಡಲು ಅನುಮೋದನೆ ನೀಡಿದೆ.

ತೋತಾಪುರಿ ಮಾವು ಕ್ವಿಂಟಾಲ್‌ಗೆ 1,750 ರುಪಾಯಿ ಸಹಾಯಧನ ಘೋಷಣೆ

ಪ್ರಹ್ಲಾದ್​​ ಜೋಶಿ ಮತ್ತು ಸಂಗ್ರಹ ಚಿತ್ರ -

Ramesh Ballamoole
Ramesh Ballamoole Jun 25, 2026 3:10 PM

ದೆಹಲಿ, ಜೂ. 25: ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಕರ್ನಾಟಕದ ಮಾವು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಧಾವಿಸಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme – MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನವನ್ನು ರೈತರಿಗೆ ನೀಡಲು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಪ್ರಹ್ಲಾದ್​​ ಜೋಶಿ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಇದೀಗ ಅನುಮೋದನೆ ನೀಡಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರ ಪತ್ರವನ್ನು ಪ್ರಹ್ಲಾದ್​​ ಜೋಶಿ ಲಗತ್ತಿಸಿದ್ದಾರೆ.

ಪ್ರಹ್ಲಾದ್​​ ಜೋಶಿ ಅವರ ಎಕ್ಸ್‌ ಪೋಸ್ಟ್‌:



ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?

ʼʼಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ನಾನು ಮನವಿ ಮಾಡಿದ್ದೆ. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme - MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರುಪಾಯಿ ರೈತರಿಗೆ ಸಹಾಯಧನವನ್ನು ನೀಡಲು ಅನುಮೋದನೆ ನೀಡಿದ್ದಾರೆʼʼ ಎಂದು ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ.

ತಕ್ಷಣವೇ ಮಾವಿಗೆ ಬೆಂಬಲ ಬೆಲೆ ಘೋಷಿಸುವ ಭರವಸೆ ಕೊಟ್ಟ ಕೇಂದ್ರ ಕೃಷಿ ಸಚಿವ

ಮುಂದುವರಿದು, ʼʼರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ನಿರ್ಧಾರವು ಸಾವಿರಾರು ರೈತ ಕುಟುಂಬಗಳಿಗೆ ನೆರವಾಗಲಿದ್ದು, ಅವರ ಆರ್ಥಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದ ಸಮಸ್ತ ರೈತರ ಪರವಾಗಿ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಪ್ರಮುಖ ಬೆಳೆ

ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದು. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದ್ದು, ಪ್ರಸಕ್ತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ ಬೆಲೆ ಕುಸಿತ ಹಾಗೂ ಪ್ರತಿಕೂಲಕ ಹವಾಮಾನದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಕೇಂದ್ರದ ಗಮನ ಸೆಳೆಯಲಾಗಿತ್ತು. ಮಾರುಕಟ್ಟೆಯ ಏರಿಳಿತಗಳು ಮತ್ತು ಅತಿಯಾದ ಪೂರೈಕೆ ಪರಿಸ್ಥಿತಿಗಳಿಂದಾಗಿ ಅನೇಕ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಲಾಭದಾಯಕ ಮಟ್ಟಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.