ಮಾದಪ್ಪನ ದರ್ಶನಕ್ಕೆ ತೆರಳುವವರೇ ಗಮನಿಸಿ; ಮಲೆ ಮಹದೇಶ್ವರದಲ್ಲಿ ಹೊಸ ರೂಲ್ಸ್ ಜಾರಿ
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಭಕ್ತನೊಬ್ಬ ಬಲಿಯಾದ ಘಟನೆ ಹಿನ್ನೆಲೆ, ಚಾಮರಾಜನಗರ ಜಿಲ್ಲಾಡಳಿತ ಪಾದಯಾತ್ರಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಮಾದಪ್ಪನ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.
ಸಂಗ್ರಹ ಚಿತ್ರ -
ಚಾಮರಾಜ ನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara) ಚಿರತೆ ದಾಳಿಗೆ ಭಕ್ತನೊಬ್ಬ ಬಲಿಯಾದ ಘಟನೆ ಹಿನ್ನೆಲೆ, ಚಾಮರಾಜನಗರ ಜಿಲ್ಲಾಡಳಿತ ಪಾದಯಾತ್ರಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಮಾದಪ್ಪನ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ. ಪಾದಯಾತ್ರಿಕರು, ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕ್ರಮಕೈಗೊಂಡಿರುವ ಈ ಆದೇಶ ಜನವರಿ 25ರಿಂದ ಜಾರಿಗೆ ಬರಲಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಚಿರತೆ ದಾಳಿ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಜನವರಿ 24ವರೆಗೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ಹೇರಿತ್ತು. ಆದರೆ ಇದೀಗ ಪಾದಯಾತ್ರಿಗರಿ ಜಿಲ್ಲಾಡಳಿತ ಸಮಯದ ಡೈಡ್ಲೈನ್ ನೀಡಿದೆ. ಇಂದಿನಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಪಾದಯಾತ್ರಿಕರಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಅವಕಾಶ ನೀಡಲಾಗಿದೆ. ಚಿರತೆ ದಾಳಿ ಸಂಭವಿಸುವ ಮೊದಲು ಪಾದಯಾತ್ರಿಕರು ಮತ್ತು ದ್ವಿಚಕ್ರ ವಾಹನಗಳಿಗೆ 24 ಗಂಟೆಗಳ ಕಾಲವೂ ಸಂಚಾರಕ್ಕೆ ಅವಕಾಶವಿತ್ತು.
ಚಿರತೆ ಸೆರೆ
ಪಾದಯಾತ್ರೆ ಕೈಗೊಂಡಿದ್ದ ಭಕ್ತನ ಬಲಿಪಡೆದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ. ಅರಣ್ಯ ಇಲಾಖೆಯ ನೇತೃತ್ವದಲ್ಲಿ ಡ್ರೋನ್ ಮೇಲ್ವಿಚಾರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ಮೂಲಕ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಲಾಯಿತು. ಕೊನೆಗೆ ಅರವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಚಿರತೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ ಅವರು 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ. ಬುಧವಾರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಮೇಲೆ ಚಿರತೆ ದಾಳಿ ನಡೆಸಿತ್ತು.