Robotic Heart Surgery: ಬಾರ್ಸಿಲೋನಾದಿಂದ 12 ಸಾವಿರ ಕಿ.ಮೀ. ದೂರದ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ (SMSIMSR) ಈ ಶಸ್ತ್ರಚಿಕಿತ್ಸೆ ನಡೆದಿದೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ತಜ್ಞ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೇ ದೂರದಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.
-
ಚಿಕ್ಕಬಳ್ಳಾಪುರ: ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು ಸುಮಾರು 12 ಸಾವಿರ ಕಿ.ಮೀ. ದೂರದಲ್ಲಿರುವ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ರೋಬೋಟ್ ನಿಯಂತ್ರಿಸುವ ಮೂಲಕ ಕರ್ನಾಟಕದ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ (SMSIMSR) ಈ ಶಸ್ತ್ರಚಿಕಿತ್ಸೆ ನಡೆದಿದೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ತಜ್ಞ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ ಸಮ್ಮೇಳನದಲ್ಲಿ ಪಾಲ್ಗೊಂಡಿ ದ್ದಾಗಲೇ ದೂರದಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.
ಇದನ್ನೂ ಓದಿ: Bariatric Surgery: 230 ಕೆಜಿ ತೂಕವಿದ್ದ ಯುವಕನಿಗೆ ಯಶಸ್ವಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ!
ಕೋಲಾರ ಜಿಲ್ಲೆಯ 26 ವರ್ಷದ ಮಹಿಳೆ ಹೃದಯದ ಮೇಲಿನ ಎರಡು ಕೋಣೆಗಳ ನಡುವಿನ ಗೋಡೆಯಲ್ಲಿ ಜನ್ಮಜಾತ ರಂಧ್ರವಿರುವ ಆಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ASD) ಸಮಸ್ಯೆಯಿಂದ ಬಳಲುತ್ತಿದ್ದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು. ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿದ್ದ ‘ಎಸ್‌ಎಸ್‌ಐ ಮಂತ್ರ’ ರೋಬೋಟಿಕ್ ವ್ಯವಸ್ಥೆಯನ್ನು ಬಾರ್ಸಿಲೋನಾದಿಂದ ನಿಯಂತ್ರಿಸಲಾಯಿತು.
ಡಾ.ಲಲಿತ್ ಮಲಿಕ್ ಮತ್ತು ಸಂಸ್ಥೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್.ಹಿರೇಮಠ ಅವರು ಸ್ಥಳೀಯವಾಗಿ ಶಸ್ತ್ರಚಿಕಿತ್ಸೆಗೆ ನೆರವು ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆರು ಗಂಟೆಗಳ ನಂತರ ಉಸಿರಾಟದ ಟ್ಯೂಬ್ ತೆಗೆದುಹಾಕಲಾಯಿತು ಎಂದು ಸಂಸ್ಥೆ ತಿಳಿಸಿದೆ. ಮೂರು ಸಣ್ಣ ಛೇದನಗಳ ಮೂಲಕ ಚಿಕಿತ್ಸೆ ನೀಡಲಾಗಿದೆ.
ಈ ಹಿಂದೆ ಗುರುಗ್ರಾಮ್‌ನಿಂದ ರೋಬೋಟಿಕ್ ವ್ಯವಸ್ಥೆ ನಿಯಂತ್ರಿಸಿ ಇದೇ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಬಾರ್ಸಿಲೋನಾದಿಂದ ಶಸ್ತ್ರಚಿಕಿತ್ಸೆ ನಡೆಸಿರುವುದು ದೂರಸ್ಥ ವೈದ್ಯಕೀಯ ತಂತ್ರಜ್ಞಾನದ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಪರಿಣತ ವೈದ್ಯರ ಸೇವೆಯನ್ನು ದೂರದ ಪ್ರದೇಶಗಳಿಗೆ ತಲುಪಿಸಲು ಇಂತಹ ತಂತ್ರಜ್ಞಾನ ನೆರವಾಗಬಹುದು. ಇದಕ್ಕೆ ವಿಶ್ವಾಸಾರ್ಹ ಸಂವಹನ ವ್ಯವಸ್ಥೆ ಮತ್ತು ಸ್ಥಳೀಯ ವೈದ್ಯಕೀಯ ತಂಡದ ಸಮನ್ವಯ ಅಗತ್ಯ.
ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಯ ಪತಿ ಆಟೋರಿಕ್ಷಾ ಚಾಲಕರಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಚಿಕಿತ್ಸೆ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಸಂಸ್ಥೆಯು ಶಸ್ತ್ರಚಿಕಿತ್ಸೆ ಸೇರಿದಂತೆ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಿದೆ.