Chikkaballapur News: ಆಕ್ಸಿಜನ್ ಕೊರತೆಯಿಂದ ಬಾಲಕಿ ಸಾವು ಆರೋಪ; ಆಸ್ಪತ್ರೆ ಎದುರು ಗ್ರಾಮಸ್ಥರ ಪ್ರತಿಭಟನೆ
ಪೆರೇಸಂದ್ರ ಗ್ರಾಮದ ನವೀನ್–ಚಂದ್ರಿಕಾ ದಂಪತಿಯ ಪುತ್ರಿ ಶಶಿಕಲಾ ಮನೆ ಮುಂದೆ ತಿಂಡಿ ತಿನ್ನುತ್ತಿದ್ದ ವೇಳೆ ಕೋತಿ ದಾಳಿ ನಡೆಸಿ ಕೈಯಲ್ಲಿದ್ದ ತಿಂಡಿಯನ್ನು ಕಸಿದುಕೊಂಡಿದೆ. ಇದರಿಂದ ಭಯಗೊಂಡ ಬಾಲಕಿ ಓಡಿ ಹೋಗಿ ಮನೆಯಲ್ಲಿ ನೀರು ಕುಡಿದ ಬಳಿಕ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿ ದ್ದಾರೆ.
ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಬಾಲಕಿ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಹಾಗೂ ಸಮಾಜ ಸೇವಕ ಸಂದೀಪ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. -
ಚಿಕ್ಕಬಳ್ಳಾಪುರ: ತಾಲೂಕು ವ್ಯಾಪ್ತಿಯ ಪೆರೇಸಂದ್ರ ಗ್ರಾಮದ ಹನ್ನೊಂದು ವರ್ಷದ ಬಾಲಕಿ ಶಶಿಕಲಾ ಸಾವಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಸೌಲಭ್ಯದ ಕೊರತೆ ಮತ್ತು ಚಿಕಿತ್ಸೆ ವಿಳಂಬವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಪೆರೇಸಂದ್ರ ಗ್ರಾಮದ ನವೀನ್–ಚಂದ್ರಿಕಾ ದಂಪತಿಯ ಪುತ್ರಿ ಶಶಿಕಲಾ ಮನೆ ಮುಂದೆ ತಿಂಡಿ ತಿನ್ನುತ್ತಿದ್ದ ವೇಳೆ ಕೋತಿ ದಾಳಿ ನಡೆಸಿ ಕೈಯಲ್ಲಿದ್ದ ತಿಂಡಿಯನ್ನು ಕಸಿದುಕೊಂಡಿದೆ. ಇದರಿಂದ ಭಯಗೊಂಡ ಬಾಲಕಿ ಓಡಿ ಹೋಗಿ ಮನೆಯಲ್ಲಿ ನೀರು ಕುಡಿದ ಬಳಿಕ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿ ದ್ದಾರೆ.
ಅಲ್ಲಿ ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅಗತ್ಯ ಪ್ರಮಾಣದ ಆಕ್ಸಿಜನ್ ಸೌಲಭ್ಯ ಇಲ್ಲದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸಿಬ್ಬಂದಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಸೋಮವಾರ ಆಸ್ಪತ್ರೆ ಎದುರು ಧರಣಿ ನಡೆಸಿ, ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆಯನ್ನು ಖಂಡಿಸಿದರು. ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ.ಸುಧಾಕರ್ ಅವರ ಸ್ವಗ್ರಾಮದಲ್ಲೇ ಇಂತಹ ಪರಿಸ್ಥಿತಿ ಇದ್ದರೆ ಇತರೆ ಗ್ರಾಮಗಳ ಆರೋಗ್ಯ ಸೇವೆಯ ಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದರು.
ಘಟನೆಯ ಮಾಹಿತಿ ತಿಳಿದು ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹರೀಶ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಸ್ಥಳೀಯ ಮುಖಂಡರು ಸಹ ಘಟನೆಗೆ ಬೇಸರ ವ್ಯಕ್ತಪಡಿಸಿದರು.
"ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ" – ಸಂದೀಪ್ ರೆಡ್ಡಿ ಆರೋಪ
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಸಂದೀಪ್ ರೆಡ್ಡಿ ಮಾತನಾಡಿ, ಭಾನುವಾರ ಆಸ್ಪತ್ರೆಯಲ್ಲಿ ಸಮರ್ಪಕ ಸಿಬ್ಬಂದಿ ಮತ್ತು ಚಿಕಿತ್ಸೆ ಲಭ್ಯವಿಲ್ಲದ ಕಾರಣ ಬಾಲಕಿಯ ಜೀವ ಉಳಿಯಲಿಲ್ಲ ಎಂದು ಆರೋಪಿಸಿದರು.
"ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಬಾಲಕಿಯ ಪ್ರಾಣ ಉಳಿಯುವ ಸಾಧ್ಯತೆ ಇತ್ತು. ತಾಲೂಕಿನ ಆಸ್ಪತ್ರೆಗಳಲ್ಲಿನ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆರೋಗ್ಯ ಸೇವೆಗಳಲ್ಲಿನ ಲೋಪಗಳನ್ನು ಸರಿಪಡಿಸುವ ಬದಲು ಬೇರೆ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ವ್ಯವಸ್ಥೆ ಸುಧಾರಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಭಾಸ್ಕರ್, ಡಿವೈಎಸ್ಪಿ ಪ್ರಕಾಶ್, ಡಿಹೆಚ್‌ಒ ಮಹೇಶ್‌ಕುಮಾರ್ ಬಂದು ನೊಂದ ಕುಟುಂಬ ಮತ್ತು ಪ್ರತಿಭಟನಾ ನಿರತರಿಗೆ ಸಮಾಧಾನ ಮಾಡಿ ದರು. ಡಾ.ಮಹೇಶ್‌ಕುಮಾರ್ ಮಾತನಾಡಿ ಎರಡು ದಿನದಲ್ಲಿ ಆಸ್ಪತ್ರೆಗೆ ತಾತ್ಕಾಲಿಕ ವೈದ್ಯರನ್ನು ಒದಗಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. 20 ದಿನಗಳ ಒಳಗೆ ಶಾಶ್ವತ ವೈದ್ಯರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದರಿಂದ ಕೆರಳಿದ ಪ್ರತಿಭಟನಾಕಾರರು ರಾತ್ರಿ ಪಾಳಿಯಲ್ಲಿಯೂ ವೈದ್ಯರು ಲಭ್ಯರಿರಬೇಕು.ನಿಮಗೆ ಸಾಧ್ಯವಾಗದಿದ್ದಲ್ಲಿ ನಾವೇ ಚಂದಾ ಹಣದಿಂದ ವೈದ್ಯರಿಗೆ ಹಣಪಾವತಿ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಚಳಿ ಬೀಸಿದ ತರುವಾಯ ಪ್ರತಿಭಟನೆ ವಾಪಸ್ಸು ಪಡೆದರು.