Shidlaghatta News: ಜೆ.ವೆಂಕಟಾಪುರ ಗ್ರಾ.ಪಂ. ಹಣಕಾಸು ಅವ್ಯವಹಾರ ಆರೋಪ: ಪಿಡಿಒ ಅಮಾನತಿಗೆ ಆಗ್ರಹ
ಸಂಘದ ರಾಜ್ಯಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪಂಚಾಯಿತಿ ಹಣಕಾಸು ವ್ಯವಹಾರಗಳ ಕುರಿತು ಈ ಹಿಂದೆ ಸಲ್ಲಿಸಿರುವ ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
-
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯಲ್ಲಿ ಹಣಕಾಸು ಅವ್ಯವಹಾರ(Financial Irregularity) ನಡೆದಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪಂಚಾಯಿತಿ ಹಣಕಾಸು ವ್ಯವಹಾರಗಳ ಕುರಿತು ಈ ಹಿಂದೆ ಸಲ್ಲಿಸಿರುವ ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿತ್ತು.
10.19 ಲಕ್ಷ ಹಣ ವರ್ಗಾವಣೆ ಕುರಿತು ಆರೋಪ
ಸಂಘದ ಪದಾಧಿಕಾರಿಗಳು ಸಲ್ಲಿಸಿರುವ ಮನವಿಯ ಪ್ರಕಾರ, ಜೆ.ವೆಂಕಟಾಪುರ ಗ್ರಾಮ ಪಂಚಾ ಯಿತಿಯ ಹಿಂದಿನ ಪಿಡಿಒ ಕಾತ್ಯಾಯಿನಿ ಅವರ ವಿರುದ್ಧ 2025ರ ಜೂನ್ 5ರಂದು ಹಣಕಾಸು ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಲಾಗಿತ್ತು. ನಂತರ ಹೆಚ್ಚುವರಿ ದಾಖಲೆಗಳನ್ನು ಉಲ್ಲೇಖಿಸಿ ಮತ್ತೊಂದು ಮನವಿಯನ್ನೂ ಸಲ್ಲಿಸಲಾಗಿದೆ ಎಂದು ಸಂಘ ತಿಳಿಸಿದೆ.
ಇದನ್ನೂ ಓದಿ: Shidlaghatta News: ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಆರೋಪ: ರಾಜೀವ್ ಗೌಡ ವಿರುದ್ಧ ಯುವ ಮುಖಂಡರ ಅಸಮಾಧಾನ
ಸಂಘದ ದೂರಿನಲ್ಲಿ, ಈ ಹಿಂದೆ ಉಲ್ಲೇಖಿಸಿದ್ದ ಸುಮಾರು 6.95 ಲಕ್ಷದ ಮೊತ್ತದ ಜೊತೆಗೆ, ಮತ್ತಷ್ಟು ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ ಎಂದು ಆರೋಪಿಸಲಾಗಿದೆ. ಹೊಸದಾಗಿ ಉಲ್ಲೇಖಿಸಿರುವ ವ್ಯವಹಾರಗಳ ಮೊತ್ತ 3,24,392 ಆಗಿದ್ದು, ಹಿಂದಿನ ದೂರಿನ ಮೊತ್ತವನ್ನೂ ಸೇರಿಸಿ ಒಟ್ಟು 10,19,720 ಹಣವನ್ನು ಪಂಚಾಯಿತಿ ಸಿಬ್ಬಂದಿಯೊಬ್ಬರ ಹೆಸರಿಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಸಂಘ ತನ್ನ ಮನವಿಯಲ್ಲಿ ತಿಳಿಸಿದೆ.
ಇದಲ್ಲದೆ, ಪಂಚಾಯಿತಿಯ ತೆರಿಗೆ ಹಣದ ಬ್ಯಾಂಕ್ ಖಾತೆಯಿಂದ ಪಕ್ಕದ ಆನೂರು ಗ್ರಾಮ ಪಂಚಾಯಿತಿಯ ವಾಟರ್ಮನ್ ಹೆಸರಿನಲ್ಲಿ ಚೆಕ್ ಮೂಲಕ ಹಣ ಪಾವತಿಸಿರುವ ಬಗ್ಗೆಯೂ ದೂರು ಸಲ್ಲಿಸಲಾಗಿದೆ ಎಂದು ಸಂಘ ಹೇಳಿದೆ. ಈ ಎಲ್ಲ ವ್ಯವಹಾರಗಳ ಉದ್ದೇಶ, ಅಧಿಕೃತ ಅನುಮತಿ ಹಾಗೂ ಹಣದ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬುದು ಸಂಘದ ಆಗ್ರಹವಾಗಿದೆ.
ಎರಡು ವರ್ಷದ ಮುಂಬಡ್ತಿ ಕಡಿತ: ಸಿಇಒ ಮಾಹಿತಿ
ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ.ನವೀನ್ ಭಟ್ ಅವರು ಪ್ರತಿಕ್ರಿಯಿಸಿ, ಪಿಡಿಒ ವಿರುದ್ಧ ಕೇಳಿಬಂದ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿತ್ತು. ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಸಂಬಂಧಪಟ್ಟ ಪಿಡಿಒ ಅವರ ಎರಡು ವರ್ಷದ ಮುಂಬಡ್ತಿಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದರು.
ಆದರೆ, ಈ ಕ್ರಮದಿಂದ ಸಂಘಕ್ಕೆ ತೃಪ್ತಿಯಾಗಿಲ್ಲ. ಹಣಕಾಸು ವ್ಯವಹಾರಗಳ ಕುರಿತು ಇನ್ನಷ್ಟು ದಾಖಲೆಗಳನ್ನು ಸಲ್ಲಿಸಿರುವುದರಿಂದ ಅವುಗಳನ್ನೂ ಪರಿಶೀಲಿಸಿ ತನಿಖೆಯನ್ನು ಚುರುಕು ಗೊಳಿಸಬೇಕು. ಆರೋಪಗಳು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಅನಿರ್ದಿಷ್ಟಾವಧಿ ಪ್ರತಿಭಟನೆಯ ಎಚ್ಚರಿಕೆ
ಈ ಹಿಂದೆ ಸಲ್ಲಿಸಿದ ದೂರುಗಳು ಮತ್ತು ಮನವಿಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಂಬಂಧಪಟ್ಟ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸುವುದಾಗಿ ಸಂಘ ಎಚ್ಚರಿಸಿದೆ. ಸಾರ್ವಜನಿಕ ಹಣದ ದುರುಪಯೋಗದ ಆರೋಪಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಶಿಕಲಾ ಅಂಬರೀಶ್, ಶಿಶಿಧರ್ ಚಿಕ್ಕಬಳ್ಳಾಪುರ ತಾಲೂಕಿನ ಅಧ್ಯಕ್ಷ ರೇವಣ ಸಿದ್ದೇಶ್ವರ, ಸುರೇಶ್ ಮತ್ತಿತರರು ಇದ್ದರು.