ಸಚಿವ ಎಂ.ಸಿ.ಸುಧಾಕರ್ ವಿರುದ್ಧದ ಅಪಪ್ರಚಾರಕ್ಕೆ ರೈತ ಸಂಘದ ತೀವ್ರ ಖಂಡನೆ : ಭೂಮಾಫಿಯಾಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕದಿರೇಗೌಡ ಅವರು ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರಕಾರ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
-
ಚಿಕ್ಕಬಳ್ಳಾಪುರ: ಕೆಐಎಡಿಬಿ ವಿಚಾರದಲ್ಲಿ ಕೆಲ ಸಂಘಟನೆಗಳ ಮುಖಂಡರು ಉಸ್ತುವಾರಿ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಒಂದೆಡೆ ಕೈಗಾರಿಕೆ ಬೇಡ ಎನ್ನು ತ್ತಾರೆ, ಇನ್ನೊಂದೆಡೆ ಅಭಿವೃದ್ಧಿ ಬೇಕು ಎನ್ನುತ್ತಾರೆ.ಇಂತಹ ದ್ವಂದ್ವ ನಿಲುವುಗಳ ಮೂಲಕ ಸಾರ್ವಜನಿಕರನ್ನು ಹಾದಿ ತಪ್ಪಿಸುವುದನ್ನು ಈಗಿಂದೀಗಲೇ ನಿಲ್ಲಿಸಬೇಕು ಎಂದು ಚಿಂತಾಮಣಿ ತಾಲೂಕು ರೈತ ಸಂಘದ ಅಧ್ಯಕ್ಷ ಹೆಚ್.ಎನ್ ಕದಿರೇಗೌಡ ಒತ್ತಾಯಿಸಿದರು.
ಚಿಂತಾಮಣಿ ನಗರದಲ್ಲಿ ಈ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಂತಾಮಣಿ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಕದಿರೇಗೌಡ ಅವರು ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರಕಾರ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಜಂಗಮಕೋಟೆ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಗುರುತಿಸಲಾಗಿದ್ದ 2823 ಎಕರೆ ಭೂಮಿ ಯಲ್ಲಿ, ರೈತರ ಮನವಿ ಮೇಲೆ ಸುಮಾರು 550 ಎಕರೆ ಕೃಷಿ ಭೂಮಿಯನ್ನು ಕೈಬಿಡುವಂತೆ ಸಚಿವರಾದ ಸುಧಾಕರ್ ಅವರು ಕೈಗಾರಿಕಾ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ಬಿಡಿಸಿದ್ದಾರೆ. ಇದನ್ನು ಹೊರತುಪಡಿಸಿ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು ೨೮೨೩ ಎಕರೆ ಪ್ರದೇಶವನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಗುರುತಿಸಲಾಗಿತ್ತು. ,ಉಳಿದ ೨೨೭೦ ಎಕರೆ ಭೂಮಿಗೆ ಸಂಬಂಧಿಸಿದಂತೆ ಕೆಐಎಡಿಬಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.ಈ ಕೂಡಲೇ ಭೂಮಿ ಕೊಡಲು ಮುಮದೆ ಬರುವ ರೈತರಿಗೆ ರಕ್ಷಣೆ ಮತ್ತು ಅವರಿಂದ ಪಡೆಯುವ ಭೂಮಿಗೆ ಮಾರುಕಟ್ಟೆ ಬೆಲೆಗಿಂತ ಹತ್ತುಪಟ್ಟು ಹೆಚ್ಚಿನ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಏ.29ದು ನಡೆದ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣದವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಸರಿಯಾದ ನಡೆಯಲ್ಲ ಎಂದು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದರು.
ಭೂ ಮಾಫಿಯಾದವರು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶಾಂತಿಯುತ ವಾತಾವರಣವನ್ನು ಕೆಡಿಸುತ್ತಿದ್ದು,ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಅವರು ಸರ್ಕಾರಕ್ಕೆ ಜಮೀನು ನೀಡುವ ರೈತರಿಗೆ ಸೂಕ್ತ ಭೂ ಪರಿಹಾರ, ಕುಟುಂಬದ ಒಬ್ಬರಿಗೆ ಕಾಯಂ ಉದ್ಯೋಗ ಹಾಗೂ ಜಮೀನು ನೀಡಲು ಇಚ್ಛಿಸದ ರೈತರಿಗೆ ಬದಲಿ ಜಮೀನು ನೀಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಇ.ಪ್ರತೀಶ್,ಜಿಲ್ಲಾ ಸಂಚಾಲಕರಾದ ಹುಸೇನ್ ಸಾಬಿ,ರಾಜ್ಯ ಉಪಾಧ್ಯಕ್ಷರಾದ ಬಿ ಕೆ ಮುನಿಕೆಂಪಣ್ಣ,ರಾಜ್ಯ ವಲಯ ಅಧ್ಯಕ್ಷರಾದ ರಘುನಾಥರೆಡ್ಡಿ, ವೆಂಕಟೇಶಪ್ಪ, ನಾರಾಯಣಮೂರ್ತಿ,ಅಂಜನಪ್ಪ,ರಮೇಶ್, ನರಸಿಂಹಮೂರ್ತಿ, ಶ್ರೀರಾಮರೆಡ್ಡಿ, ನಾಗರಾಜ್, ರಾಮಚಂದ್ರರೆಡ್ಡಿ, ನಾರಾಯಣಸ್ವಾಮಿ ಎಂವಿ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.